Ticker

6/recent/ticker-posts

Ad Code

Responsive Advertisement

ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಜನ್ಮದಿನ ಆಚರಣೆ

 ಇಂದು ಶ್ರೀಉತ್ತರಾದಿ ಮಠಾಧೀಶರಾದ ಪರಮಪೂಜ್ಯ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಜನ್ಮದಿನ. ಶ್ರೀಪಾದಂಗಳವರ ಶ್ರೀಚರಣಗಳಲ್ಲಿ ಅನಂತ ನಮನಗಳೊಂದಿಗೆ. 





ಶಾಸ್ತ್ರವನ್ನು ಅಧ್ಯಯನ ಮಾಡುವಂತಹ ಭಾಗ್ಯ ಎಲ್ಲರಿಗೂ ಸುಲಭಸಾಧ್ಯವಲ್ಲ, ಭಾಗ್ಯದೊರೆತರೂ, ಶಾಸ್ತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಇನ್ನೂ ಕಷ್ಟದ ಕೆಲಸ. ಅಪಾರ್ಥ,ವಿಪರೀತಾರ್ಥಗಳನ್ನೇ ನಿಜವಾದ ಶಾಸ್ತ್ರಗಳ ತಾತ್ಪರ್ಯವೆಂದು ಭ್ರಮಿಸುವ ಅಪಾಯವೂ ಬಹಳಷ್ಟು ಉಂಟು. ಇಂತಹ ಕಠಿಣಾತಿಕಠಿಣವಾದಂತಹ ಸ್ಥಿತಿಯಲ್ಲಿ ಗುರುವಾದವನು ತಾನು ತಪಸ್ಸಿನಂತೆ ಅರ್ಜಿಸಿದ ಜ್ಞಾನವನ್ನು ಜಿಜ್ಞಾಸುಗಳಿಗೆ, ಶಿಷ್ಯರಿಗೆ ತಲುಪಿಸುವುದು ಭಗವಂತನ ಮಹಾಸೇವೆಯೇ ಸರಿ. 'ಸ್ವಾಧ್ಯಾಯ-ಪ್ರವಚನಾಭ್ಯಾಂ ನ ಪ್ರಮದಿತವ್ಯಮ್' ಪರತತತ್ತ್ವದ ಬಗ್ಗೆ ನಿರಂತರವಾದ ಅಧ್ಯಯನ, ತಾನು ಅಧ್ಯಯನದಿಂದ ಪಡೆದ ಜ್ಞಾನವನ್ನು ಜಿಜ್ಞಾಸುಗಳಿಗೆ ಪ್ರವಚನರೂಪದಲ್ಲಿ ತಿಳಿಸುವುದು ತಪಸ್ಸು ಎಂಬುದು ಉಪನಿಷತ್ತಿನ ಸಂದೇಶ. ಇಂತಹ ಮಹಾಕೈಂಕರ್ಯವನ್ನು ಅನವರತ ವ್ರತದಂತೆ ಮಾಡುತ್ತಾಬಂದಿರುವವರು ಪರಮಪೂಜ್ಯ ಶ್ರೀಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು. ತಿಳಿಯುವುದು, ತಿಳಿದದನ್ನು ತಿಳಿಯುವಂತೆ ಹೇಳುವುದು ಸುಲಭವಾದಂತಹ ಕಾರ್ಯವಲ್ಲ, ಪಾಂಡಿತ್ಯ, ವಾಗ್ವೈಖರಿ, ಬಳಸುವ ಭಾಷೆಯ ಮೇಲೆ ಹಿಡಿತ, ಜನರನ್ನು ಸನ್ಮಾರ್ಗದತ್ತ ಕರೆದೊಯ್ಯಬೇಕೆನ್ನುವ ಪ್ರಾಮಾಣಿಕವಾದ ಕಳಕಳಿ ಮತ್ತು ತಮ್ಮ ಮಾತು ಲೋಕರಂಜಕವಾಗಿರುವುದಕ್ಕಿಂತ ಹೆಚ್ಚಾಗಿ ಭಗವದ್ಭಾವವ್ಯಂಜಕವಾಗಿರಬೇಕೆನ್ನುವ ಸತತವಾದಂತಹ ಅನುಸಂಧಾನ ಶ್ರೀಸತ್ಯಾತ್ಮತೀರ್ಥರ ಅಧ್ಯಾತ್ಮಿಕ ಪ್ರವಚನಗಳ ವೈಶಿಷ್ಟ್ಯತೆ ಎನ್ನಬಹುದು. ನಾಸ್ತಿಕ್ಯವಾದ ನಿರಾಸ, ಭಗವದ್ಭಕ್ತಿಯ ವಿಕಾಸದ ಅಪೇಕ್ಷೆಯನ್ನು ಸದಾ ಬಿಂಬಿಸುವ ಶ್ರೀಗಳ ಪ್ರವಚನ ನಿಜಕ್ಕೂ ಒಂದು ರಸಾನುಭೂತಿ. ಶ್ರೀಮನ್ನ್ಯಾಯಸುಧಾ, ಉಪನಿಷತ್ತುಗಳ, ಶ್ರೀಮದಾಚಾರ್ಯರ ಸರ್ವಮೂಲ ಗ್ರಂಥಗಳ ಪ್ರವಚನವೇ ಇರಲಿ, ಶ್ರೀರಾಮ,ವಾಮನಾದಿ ಶಬ್ದಗಳ ನಿರ್ವಚನವೇ ಇರಲಿ, ರಾಮಾಯಣ, ಮಹಾಭಾರತಾದಿ ಗ್ರಂಥಗಳ ಉಪನ್ಯಾಸವೇ ಇರಲಿ, ಕೇಳುಗರನ್ನು ಮೈಮರೆಸುವ ವಾಗ್ವೈಖರಿ ಪೂಜ್ಯ ಸತ್ಯಾತ್ಮರದು. ಉದ್ಗ್ರಂಥಗಳ ಪಾಠವನ್ನು ಮಾಡುವಂತಹ ಸಂದರ್ಭದಲ್ಲಿಯೂ, ಎಲ್ಲಿಯೂ ಉದ್ವೇಗವಿಲ್ಲ, ಪ್ರತಿಯೊಂದು ಮಾತೂ ಪ್ರಮಾಣ ಪುರಸ್ಸರ, ಶ್ರೀಮಧ್ವ, ಟೀಕಾಕೃತ್ಪಾದರ ಭಾವ ವಿಸ್ತರ. ಎಲ್ಲಿ 'ನ್ಯಾಯಸುಧಾ'ಪರೀಕ್ಷೆಯಿರಲಿ, ಅಲ್ಲಿ ಶ್ರೀಗಳ ಉಪಸ್ಥಿತಿ ಅನಿವಾರ್ಯವೆನ್ನುವಷ್ಟು ವಿದ್ವತ್ತು. ಸ್ವತ: ಅನೇಕ ಸುಧಾವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ, ಸಮಾಜಕ್ಕೆ ಕೊಡುಗೆನೀಡಿರುವ ಶ್ರೀಸತ್ಯಾತ್ಮತೀರ್ಥರು ನಿಜಕ್ಕೂ 'ಸಾರಸ್ವತ ತಪಸ್ವಿ'ಯೆನ್ನಬಹುದು.

ಪೂಜ್ಯ ಶ್ರೀಸತ್ಯಾತ್ಮತೀರ್ಥರು ಜನಿಸಿದ್ದು 1973ರ ಮಾರ್ಚ್ ತಿಂಗಳ 8 ರಂದು. ಫಾಲ್ಗುಣ ಶುದ್ಧ ಚತುರ್ಥಿ. ಉತ್ತರಾದಿ ಮಠಾಧೀಶರೂ,ಮಹಾವಿದ್ವಾಂಸರೂ ಆಗಿದ್ದ ಶ್ರೀಸತ್ಯಪ್ರಮೋದತೀರ್ಥರ ಪೂರ್ವಾಶ್ರಮ ಪುತ್ರ ಶ್ರೀಗುತ್ತಲರಂಗಾಚಾರ್ಯರು ಹಾಗೂ ಶ್ರೀಮತಿ ರುಕ್ಮಾಬಾಯಿಯವರ ಮಗನಾಗಿ ಮುಂಬಯಿಯಲ್ಲಿ ಜನಿಸಿದ ಸರ್ವಜ್ಞಾಚಾರ್ಯರು ಮುಂಬಯಿಯ ಮಹಾವಿದ್ವಾಂಸ ಶ್ರೀಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಶ್ರೀಮಾಹುಲಿ ವಿದ್ಯಾಸಿಂಹಾಚಾರ್ಯ ರಲ್ಲಿ ತಮ್ಮ ಅಧ್ಯಯನವನ್ನು ನಡೆಸಿದರು. 23 ರ ಅತ್ಯಂತ ಚಿಕ್ಕ ಹರಯದಲ್ಲಿಯೇ ಸಂನ್ಯಾಸಾಶ್ರಮವನ್ನು ಸ್ವೀಕರಿಸುವ, ದೊಡ್ಡಮಠವೊಂದರ ಅಧಿಪತಿಯಾಗುವ ಮಹತ್ತರವಾದ ಹೊಣೆಗಾರಿಕೆ. 1996ರ ಏಪ್ರಿಲ್ 24ರಂದು( ವೈಶಾಖಶುದ್ಧ ಷಷ್ಠಿಯಂದು) ಪ್ರಾತ:ಸ್ಮರಣೀಯರೂ, 'ಭಾವಬೋಧಕಾರ'ರೆಂದೇ ವಿಖ್ಯಾತರಾದ ಶ್ರೀರಘೂತ್ತಮತೀರ್ಥ ಶ್ರೀಪಾದಂಗಳವರ ಪರಮಪಾವನವಾದ ಬೃಂದಾವನ ಸಾನ್ನಿಧ್ಯದಲ್ಲಿ ಶ್ರೀಸತ್ಯಪ್ರಮೋದತೀರ್ಥರಿಂದ ತುರೀಯಾಶ್ರಮವನ್ನು ಸ್ವೀಕರಿಸಿದ ಸರ್ವಜ್ಞಾಚಾರ್ಯರು ಶ್ರೀಸತ್ಯಾತ್ಮತೀರ್ಥರಾದರು. ಉತ್ತರಾದಿಮಠದ ಇತಿಹಾಸದಲ್ಲಿ ಹೊಸಅಧ್ಯಾಯವೊಂದರ ಪ್ರಾರಂಭಕ್ಕೆ ಕಾರಣೀಭೂತರಾದರು. ತಮ್ಮ ನಿರಂತರವಾದ ಪಾಠ,ಪ್ರವಚನಗಳಿಂದ, ವಿದ್ವತ್ತಿನಿಂದ ಜನಮಾನಸದಲ್ಲಿ ಚಿರಸ್ಥಾಯಿಯಾದರು. ಅನೇಕ ಕಡೆಗಳಲ್ಲಿ ಮಠಗಳ ಜೀರ್ಣೋದ್ಧಾರ, ಶ್ರೀನರಸಿಂಹ, ಶ್ರೀಶ್ರೀನಿವಾಸ, ಶ್ರೀವಿಠ್ಠಲಾದಿ ಭಗವನ್ಮೂರ್ತಿಗಳ ಪ್ರತಿಷ್ಠಾಪನೆ, ಗುರುಗಳ ಬೃಂದಾವನ ಪ್ರತಿಷ್ಠಾಪನೆ, ಗ್ರಂಥಗಳ ಸಂಶೋಧನೆ, ಪ್ರಕಟಣೆಗಳಿಗೆ 'ವಿಶ್ವಮಧ್ವ ಮಹಾಪರಿಷತ್' ನ ಸ್ಥಾಪನೆ, 'ನೀರಿನ ಸಂರಕ್ಷಣೆ'ಯನ್ನು ಕುರಿತ ವಿಶೇಷ ಉಪನ್ಯಾಸಗಳ ಆಯೋಜನೆ, ಪ್ರವಾಹ, ಬರ, ಕೋವಿಡ್ 19 ಮೊದಲಾದ ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ ಶ್ರೀ ಉತ್ತರಾದಿಮಠದ ಮೂಲಕ ತಕ್ಷಣ ಸ್ಪಂದನೆ, ನೆರವಿನ ಉದಾರ ಹಸ್ತ ಮೊದಲಾದ ಅನೇಕ ಕಾರ್ಯಕ್ರಮಗಳ ಮೂಲಕ ಅಸಂಖ್ಯ ಭಕ್ತರನ್ನು ಹೊಂದಿರುವ ಶ್ರೀಗಳು ಬೆಂಗಳೂರು, ಉಡುಪಿ, ಮೈಸೂರು,ರಾಯಚೂರು, ಹೈದರಾಬಾದ್ ಮೊದಲಾದ ಕಡೆಗಳಲ್ಲಿ ನೀಡಿರುವ ಅಧ್ಯಾತ್ಮಿಕ ಪ್ರವಚನಗಳು ಸಂಗ್ರಹರೂಪದಲ್ಲಿ ಹೊರಬಂದಿವೆ. ಸಂಸ್ಕೃತ, ಕನ್ನಡ, ಮರಾಠಿ, ತೆಲುಗು, ಹಿಂದಿ ಭಾಷೆಗಳಲ್ಲಿ ಶ್ರೀಗಳು ನಿರರ್ಗಳವಾಗಿ ಪ್ರವಚನ ನೀಡಬಲ್ಲರು. ಶ್ರೀಪಾದಂಗಳವರ ಉಪನ್ಯಾಸಗಳನ್ನು ಸಂಗ್ರಹಿಸಿ, ಗ್ರಂಥರೂಪದಲ್ಲಿ ಹೊರತರುವಲ್ಲಿ ಶ್ರೀಕಾಂತೇಶ ಕದರಮಂಡಲಗಿ, ಶ್ರೀಪ್ರವೀಣ ಹುನಗುಂದ ಮೊದಲಾದವರ ಶ್ರಮ ಅತ್ಯಂತ ಉಲ್ಲೇಖನೀಯ. ಅನೇಕ ಉಪನ್ಯಾಸಗಳು ಸಿ.ಡಿ. ರೂಪದಲ್ಲಿಯೂ ಉಪಲಬ್ಧವಿವೆ.

'ವೈಷ್ಣವ' ಕೃತಿಯಲ್ಲಿ ವೈಷ್ಣವತ್ವದ ವ್ಯಾಖ್ಯೆಯನ್ನು ಶ್ರೀಮದಾಚಾರ್ಯರ 'ಗೀತಾತಾತ್ಪರ್ಯ', 'ಗೀತಾಭಾಷ್ಯ' 'ಮಹಾಭಾರತ ತಾತ್ಪರ್ಯನಿರ್ಣಯ' ಮೊದಲಾದ ಕೃತಿಗಳ ಹಿನ್ನೆಲೆಯಲ್ಲಿ ಶ್ರೀಗಳು ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ. 'ಸತ್ಯಾತ್ಮಸುಧಾ' ಹಾಗೂ 'ಉತ್ತಿಷ್ಠ' ಕೃತಿಗಳಲ್ಲಿ ಅನೇಕ ವಿಷಯಗಳ ಬಗ್ಗೆ ಶ್ರೀಗಳ ಚಿಂತನೆಯನ್ನು ನಾವು ಕಾಣಬಹುದು. 'ಜಿಜ್ಞಾಸೆ'ಯಲ್ಲಿ ಪ್ರಶ್ನೋತ್ತರ ರೂಪದಲ್ಲಿ ಜಿಜ್ಞಾಸುಗಳ ಅನೇಕ ಅಧ್ಯಾತ್ಮ ಸಂಬಂಧದ ಪ್ರಶ್ನೆಗಳಿಗೆ ಶ್ರೀಗಳು ಉತ್ತರಿಸಿದ್ದಾರೆ. 'ಧೀಮಹಿ'ಕೃತಿಯಲ್ಲಿ ಗಾಯತ್ರೀ ಮಹಿಮೆ-ಜಪದ ವಿಚಾರಗಳು, ಗಾಯತ್ರಿಯಲ್ಲಿ ಏನನ್ನು ಪ್ರಾರ್ಥಿಸಬೇಕು? ಗಾಯತ್ರಿಯಲ್ಲಿ ಮೂವತ್ತೇಳು ಪ್ರಾರ್ಥನೆಗಳು,ಗಾಯತ್ರಿಯಲ್ಲಿ ದಶಾವತಾರಗಳ ಚಿಂತನೆ, ಚತುರ್ವಿಂಶತಿ ರೂಪಗಳ ಚಿಂತನೆ ಹೀಗೆ ಅನೇಕ ವಿಷಯಗಳ ವಿಸ್ತೃತವಾದಂತಹ ಚಿಂತನೆಯಿದೆ. ರಾಮಾಯಣಸಂದೇಶ,ಸಮುದ್ರಮಥನ, ಆತ್ಮಲಹರಿ, ಮೊದಲಾದ ಕೃತಿಗಳು ಶ್ರೀಗಳ ಆಳವಾದ ಅಧ್ಯಾತ್ಮಚಿಂತನೆಯ ಪ್ರತಿಬಿಂಬಗಳಾಗಿವೆ.

ನಿರಂತರವಾದ ಶ್ರೀರಾಮ,ವೇದವ್ಯಾಸರ ಪೂಜೆ, ಪ್ರವಚನಗಳ ಮೂಲಕ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರುವ ಪರಮಪೂಜ್ಯ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರ ಜನ್ಮದಿನವಿಂದು. ಶ್ರೀಗಳ ಅಸದಳವಾದ ಪಾಂಡಿತ್ಯದ ಮಾರ್ಗದರ್ಶನದಲ್ಲಿ ಅನೇಕ ವಿದ್ವಾಂಸರು ವೇದಾಂತಕ್ಷೇತ್ರವನ್ನು ಬೆಳಗಲಿ.  ಶ್ರೀಗಳ ಅಂತರ್ಯಾಮಿ, ಶ್ರೀಜಯತೀರ್ಥ, ಶ್ರೀಮಧ್ವಮುನಿಗಳ ಅಂತರ್ಯಾಮಿ ಶ್ರೀರಾಮಚಂದ್ರದೇವರು ಪ್ರೀತರಾಗಲಿ 

ಸಂದಲ್ ಪ್ರಾಣೇಶಾಚಾರ್ಯರು

Post a Comment

0 Comments

Ad Code

Responsive Advertisement