ದ್ವೇಷ ಬಿತ್ತುತ್ತಿರುವಬಿ ಜೆಪಿ ಮತ್ತು ಕಾಂಗ್ರೆಸ್ ನ ಒಡೆದು ಆಳುವ ನೀತಿಗೆ ಬಿಎಸ್ಪಿ ಖಂಡನೆ.
ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ಹಿಜಾಬ್, ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ ಮುಂತಾದ ಭಾವನಾತ್ಮಕ ವಿಚಾರಗಳಲ್ಲಿ ರಾಜ್ಯದ ಜನರನ್ನು ವಿಭಜಿಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವರ್ತನೆಯನ್ನು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಖಂಡಿಸಿದ್ದಾರೆ.
ಈಗಾಗಲೇ ಉಡುಪಿಯ ಒಂದು ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಿವಾದ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ವ್ಯಾಪಿಸಿ ಸುಪ್ರೀಂಕೋರ್ಟ್ ಅಂಗಳವನ್ನು ತಲುಪಿರುವುದಕ್ಕೆ ಬಿಜೆಪಿ ಸರ್ಕಾರ ಮತ್ತು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಪಕ್ಷಗಳ ಬೇಜವಾಬ್ದಾರಿ ವರ್ತನೆ ಕಾರಣವಾಗಿದೆ.
ಎರಡು ಪಕ್ಷಗಳ ಮುಖಂಡರು ರಾಜ್ಯದಲ್ಲಿ ಸೌಹಾರ್ದ ವಾತಾವರಣವನ್ನು ಮೂಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದಿದ್ದಾರೆ.
ಹಿಂದೂ ಓಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಬಿಜೆಪಿ ಸರ್ಕಾರದ ಮಂತ್ರಿಗಳು ಸೇರಿದಂತೆ ಹಲವಾರು ನಾಯಕರು ರಾಜ್ಯದ ಜನರಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುವ ಹೇಳಿಕೆಗಳನ್ನು ನೀಡುತ್ತಾ ಶೈಕ್ಷಣಿಕ ವಾತಾವರಣ ಮಾತ್ರ ಅಲ್ಲ ಸಾಮಾಜಿಕ ವಾತಾವರಣವನ್ನು ಹಾಳುಮಾಡಿದ್ದಾರೆ.
ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ಸೂಕ್ತ ರೀತಿಯಲ್ಲಿ ಎಚ್ಚರಿಸಿ, ಹದಗೆಟ್ಟ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸಬೇಕಾಗಿದ್ದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಮುಸ್ಲಿಂ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳವ ತಂತ್ರಗಾರಿಕೆ ಮಾಡಲು ಹೋಗಿ ರಾಜ್ಯದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.
ಅದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ ನ ಸಿದ್ದರಾಮಯ್ಯ ಹಿಜಾಬ್ ವಿಷಯದಲ್ಲಿ ಸ್ವಾಮೀಜಿಗಳ ಶಿರವಸ್ತ್ರಗಳ ಬಗ್ಗೆ ಪ್ರಸ್ತಾಪಿಸಿ ವಿವಾದವನ್ನು ಮತ್ತಷ್ಟು ಕಗ್ಗಂಟು ಮಾಡಲು ಹೊರಟಿರುವುದು ಖಂಡನೀಯ ಎಂದು ಟೀಕಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಜನರಿಗೆ ನೀಡಿದ್ದ ಅಚ್ಚೆ ದಿನದ ಭರವಸೆಯನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ರಾಜ್ಯ ಮತ್ತು ದೇಶಾದ್ಯಂತ ನಿರುದ್ಯೋಗ, ಬೆಲೆಯೇರಿಕೆ ಜನರನ್ನು ಸಂಕಷ್ಟಕ್ಕೆ ದೂಡಿವೆ.
ರೈತರು, ಕಾರ್ಮಿಕರು, ಗುತ್ತಿಗೆ ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ.
ಹಾಗಾಗಿ ಚುನಾವಣೆ ಹೊತ್ತಿಗೆ ಆಡಳಿತ ವಿರೋಧಿ ಅಲೆ ವ್ಯಾಪಕವಾಗಿ ಹರಡುವ ಭಯದಿಂದ ಬಿಜೆಪಿ ಹಲವಾರು ಕುತಂತ್ರಗಳನ್ನು ರೂಪಿಸುತ್ತಿದೆ.
ಅದರ ಭಾಗವಾಗಿಯೇ ಜನರ ಗಮನವನ್ನು ಬೇರೆಡೆ ಸೆಳೆಯಲು ಹಿಜಾಬ್, ಗೋಹತ್ಯೆ ನಿಷೇಧ, ಮತಾಂತರ ನಿಷೇಧ, ಹಿಂದೂ ದೇವಸ್ಥಾನಗಳ ಬಳಿ ಮುಸ್ಲಿಮರ ವ್ಯಾಪಾರ ನಿರ್ಬಂಧ ಮುಂತಾದ ಭಾವನಾತ್ಮಕ ವಿಚಾರಗಳನ್ನು ಸಂಘಪರಿವಾರದ ಅಂಗಸಂಸ್ಥೆಗಳ ಮುಖಾಂತರ ಮುನ್ನೆಲೆಗೆ ತರುತ್ತಿದೆ.
ಇಂತಹ ಸಂದರ್ಭದಲ್ಲಿ ವಾಸ್ತವ ಸಮಸ್ಯೆಗಳನ್ನು ಜನರ ಮುಂದಿಟ್ಟು, ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ರೂಪಿಸುವಲ್ಲಿ ಕಾಂಗ್ರೆಸ್ ವಿಫಲವಾಗುತ್ತಿದೆ ಎಂದಿದ್ದಾರೆ.
ಪರೋಕ್ಷವಾಗಿ ಬಿಜೆಪಿಗೆ ಧರ್ಮದ ಹೆಸರಿನಲ್ಲಿ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ನೆರವಾಗುತ್ತಿದೆ.
ಹಾಗೆಯೇ ತಾನು ಮುಸ್ಲಿಂ ಸಮುದಾಯದ ಹಿತರಕ್ಷಕ ಎಂದು ಬಿಂಬಿಸಿಕೊಳ್ಳಲು ಕಸರತ್ತು ನಡೆಸುತ್ತಾ ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬುತ್ತಿದೆ.
ಹಿಜಾಬ್ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇರುವುದರಿಂದ ಅದರ ಬಗ್ಗೆ ಚರ್ಚೆ ಅನಗತ್ಯ ಎಂಬ ಸಾಮಾನ್ಯ ಜ್ಞಾನವೂ ಕೂಡ ಇಲ್ಲದಂತೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಟೀಕಿಸಿದ್ದಾರೆ.
ಇನ್ನು ಹಿಂದೂ ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತಂದು, ಹಿಂದೂ ದೇವಸ್ಥಾನಗಳ ಮಳಿಗೆಗಳಲ್ಲಿ ಅನ್ಯಧರ್ಮೀಯರ ವ್ಯಾಪಾರವನ್ನು ನಿರ್ಬಂಧ ಗೊಳಿಸಿದ್ದು ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ.
ಈಗ ಬಿಜೆಪಿ ಸರ್ಕಾರ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಮುಸ್ಲಿಮರಿಗೆ ಹಿಂದೂ ದೇವಸ್ಥಾನ ಮತ್ತು ಜಾತ್ರೆಗಳ ಬಳಿ ವ್ಯಾಪಾರವನ್ನು ನಿರ್ಬಂಧ ಗೊಳಿಸಿದೆ.
ಇದಕ್ಕೆ ಬಿಜೆಪಿ ಎಷ್ಟು ಕಾರಣವೂ ಅಷ್ಟೇ ಕಾಂಗ್ರೆಸ್ ಕೂಡ ಕಾರಣ ಎಂದು ಕಿಡಿಕಾರಿದ್ದಾರೆ.
ಈ ಎರಡು ಪಕ್ಷಗಳಿಗೆ ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಭಾವೈಕ್ಯತೆ ಇಷ್ಟವಿಲ್ಲ.
ತಮ್ಮ ತಮ್ಮ ಪಕ್ಷಗಳ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಜನರನ್ನು ಬೀದಿಗೆ ತಂದು ನಿಲ್ಲಿಸುತ್ತಿವೆ.
ರಾಜ್ಯದಲ್ಲಿ ಜನರು ದೇವರು-ಧರ್ಮದ ಹೆಸರಿನಲ್ಲಿ ಬೀದಿಬೀದಿಗಳಲ್ಲಿ ಬಡಿದಾಡಿ ಕೊಳ್ಳುವ ದುರಂತದ ಸನ್ನಿವೇಶಕ್ಕೆ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ.
ಬಿಜೆಪಿಯಾಗಲಿ ಕಾಂಗ್ರೆಸ್ಸಾಗಲಿ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಿ ರಾಜ್ಯದಲ್ಲಿ ಮತಬ್ಯಾಂಕ್ ರಾಜಕಾರಣವನ್ನು ಪಕ್ಕಕ್ಕಿಟ್ಟು ಸೌಹಾರ್ದಯುತವಾದ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಾಗೆಯೇ ರಾಜ್ಯದ ಜನ ಈ ಎರಡು ಪಕ್ಷಗಳ ಮತಬ್ಯಾಂಕ್ ರಾಜಕಾರಣವನ್ನು ತಿರಸ್ಕರಿಸಬೇಕು ಮತ್ತು ಪ್ರಜ್ಞಾವಂತಿಕೆಯಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
0 Comments