ಮಧುಗಿರಿ : ಕಾನೂನಿಗಿಂತ ಮಾನವೀಯ ಮೌಲ್ಯಗಳು ಮುಖ್ಯವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಮಾಡುವ ಸಂದರ್ಭ ಬಂದಾಗ ಅಧಿಕಾರಿಗಳು ಮಾನವೀಯತೆ ಮೆರೆಯಬೇಕು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಕಸಬಾ ವ್ಯಾಪ್ತಿಯ ಬಂದ್ರೆಹಳ್ಳಿಯ ತೇರಿನ ಬೀದಿ ಸಮೀಪದ ಬೆಳ್ಳೂರು ಕಟ್ಟೆ ಬಳಿ ಶನಿವಾರ ತಾಲೂಕಿನ ಕಸಬಾ, ಐಡಿಹಳ್ಳಿ ಹಾಗೂ ಮಿಡಿಗೇಶಿ ವ್ಯಾಪ್ತಿಯ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಾಗುವಳಿ ಪತ್ರ ಮತ್ತು ಪಹಣಿ ಹೊಂದಿದ್ದರೂ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವ ಅರಣ್ಯ ಇಲಾಖೆಯ ಕಚೇರಿಗೆ 25 ಸಾವಿರ ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ತೋಟ, ಮನೆ, ಗದ್ದೆ ಇರುವ ರೈತರುಗಳಿಗೆ ಯಾವುದೇ ಕಾರಣಕ್ಕೂ ಅಧಿಕಾರಿಗಳು ತೊಂದರೆ ಕೊಡಬಾರದು. ಸಂಬಂಧಪಟ್ಟ ಇಲಾಖೆಯವರು ದಾಖಲಾತಿಗಳನ್ನು ಸರಿ ಪಡಿಸುವ ಕೆಲಸ ಮಾಡಿ, ಹಲವಾರು ವರ್ಷಗಳಿಂದ ಈ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಉಳುಮೆ ಮಾಡಿ ಅನುಭವಸ್ಥದಾರರಾಗಿದ್ದು, ಈಗ ಬಂದು ಜಮೀನುಗಳನ್ನು ಬಿಟ್ಟುಕೊಡಿ ಎಂದು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಈ ಮೊದಲೇ ಸಮರ್ಪಕ ದಾಖಲಾತಿಗಳನ್ನು ಹೊಂದಿಸಿಕೊಂಡಿದ್ದರೆ ಈಗ ರೈತರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ರೈತರು ಯಾವುದೇ ಕಾರಣಕ್ಕೂ ತಮ್ಮ ಜಮೀನುಗಳನ್ನು ಬಿಟ್ಟು ಕೊಡಬೇಡಿ. ಈ ಸಂಬಂಧ ಮುಖಂಡರುಗಳೊಂದಿಗೆ ಗ್ರಾಮಗಳಲ್ಲಿ ಸಭೆ ನಡೆಸಿ ಹೋರಾಟಕ್ಕೆ ಸಜ್ಜಾಗಿ ಎಂದು ಕರೆ ನೀಡಿದರು.
ನಾವೂ ಸಹ ಹಿಂದುಗಳೇ, ನಾವು ಮಹಾತ್ಮ ಗಾಂಧಿ ಹಿಂದುತ್ವವನ್ನು ಅನುಕರಣೆ ಮಾಡಿದರೆ ಬಿಜೆಪಿಯವರು ನಾಥೂರಾಮ್ ಗೋಡ್ಸೆ ಹಿಂದುತ್ವ ಅನುಕರಣೆ ಮಾಡುತ್ತಾ ಜಾತಿ ಮತ್ತು ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಬಿಜೆಪಿಯನ್ನು ಕುಟುಕಿದ ಅವರು, ಮಧುಗಿರಿ ಕ್ಷೇತ್ರದ ಜನರು ಸ್ವಾಭಿಮಾನಿಗಳಾಗಿದ್ದು, ಈ ಬಾರಿ ಜಾತಿ ಮತ್ತು ಹಣದ ಆಮಿಷಕ್ಕೆ ಒಳಗಾಗದೇ ಮತಚಲಾಯಿಸಲಿದ್ದಾರೆ. ಕ್ಷೇತ್ರದಲ್ಲಿ ಹಣ ಬಲವಿದ್ದರೆ ಚುನಾವಣೆ ಗೆಲ್ಲಬಹುದು ಎಂದು ಹೇಳಿಕೊಂಡು ಓಡಾಡುತ್ತಿರುತ್ತಿರುವವರಿಗೆ ತಕ್ಕ ಪಾಠ ಕಲಿಸಲಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿ, ಅರಣ್ಯ ಇಲಾಖೆಯವರು ಈ ಭಾಗದ ರೈತರ ಮೇಲೆ ಏಕಾಏಕಿ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ. ಅನೇಕ ದಶಕಗಳಿಂದ ಈ ಜಮೀನುಗಳನ್ನು ನಂಬಿ ಜೀವನ ನಡೆಸುತ್ತಿರುವ ರೈತರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣನವರ ನೇತೃತ್ವದಲ್ಲಿ ಹೋರಾಟ ನಡೆಸಿ ತಮ್ಮ ಜಮೀನುಗಳನ್ನು ಕಾಪಾಡಿ ಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕ ರಾಜ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ. ನಂಜುಂಡಯ್ಯ, ಎನ್.ಗಂಗಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ಗ್ರಾ.ಪಂ ಅಧ್ಯಕ್ಷರಾದ ಪಂಚಾಕ್ಷರಯ್ಯ, ಸಾವಿತ್ರಮ್ಮ ಡಿ.ಹೆಚ್.ನಾಗರಾಜು, ಭವ್ಯ ಕೇಶವ ಮೂರ್ತಿ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯ ವೀರೇಶ್, ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್ ಮಲ್ಲಿಕಾರ್ಜುನಯ್ಯ, ಎಸ್.ಆರ್.ರಾಜಗೋಪಾಲ್, ಮುಖಂಡರಾದ ಫಾಜಿಲ್, ನಾರಾಯಣ್, ಮಧುಚಂದ್ರ, ಕಾಂತರಾಜು, ಸಿದ್ದಗಂಗಪ್ಪ, ಎಂ.ವಿ.ಮೂಡ್ಲಗಿರೀಶ್ ಹಾಗೂ ಇತರರಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ
0 Comments