Ticker

6/recent/ticker-posts

Ad Code

Responsive Advertisement

ನಿಮ್ಮಗಳ ಬೆಂಬಲ ಹಾಗೂ ಶುಭ ಹಾರೈಕೆಗಳು ಬೇಕಿದೆ ನನಗೆ.

ಇದು ಸಭ್ಯತೆಯ ಪ್ರಶ್ನೆ, ರಂಗ-ಧರ್ಮದ ಪ್ರಶ್ನೆ.

ಕನ್ನಡದ ಕೆಲವು ರಂಗಕರ್ಮಿಗಳು ನಾವು, ದೆಹಲಿಯ ಸಂಗೀತನಾಟಕ ಅಕಾಡೆಮಿಯ ಆವರಣದಲ್ಲಿ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ ನಾಟಕವೊಂದನ್ನು ಪ್ರದರ್ಶಿಸುತ್ತಿದ್ದೆವು. ನಾನು, ನಟರು ಹಾಗೂ ನೋಟಕರು ಇಬ್ಬರನ್ನು ಗಮನಿಸುತ್ತ ಪ್ರೇಕ್ಷಕರ ಹಿಂಬದಿಗೆ ನಿಂತಿದ್ದೆ. ಭಾರತದ ವಿವಿಧ ಭಾಗಗಳಿಂದ ಬಂದಿದ್ದ ಅನಕ್ಷರಸ್ಥ ಜಾನಪದ ಕಲಾವಿದರೇ ಹೆಚ್ಚಾಗಿ ಕುಳಿತ್ತಿದ್ದರು ಅಲ್ಲಿ. ಭಾಷೆ ಬಾರದಿದ್ದರೂ ರಾಮನ ಮರ್ಯಾದೆ ಅರಿತಿದ್ದವರು ನಾಟಕ ನೋಡುತ ತಲೆದೂಗುತ್ತಿದ್ದರು.

ಆಗ ಗೆಳೆಯರೊಬ್ಬರು ಬಂದು ಪಕ್ಕ ನಿಂತು ಮೈಸೂರಿನ ರಂಗಾಯಣದಲ್ಲಿ ನಡೆದಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದ ಸುದ್ದಿಯೊಂದನ್ನು ತೋರಿಸಿದರು. ಅಲ್ಲಿ ಮಾತನಾಡುತ್ತಿದ್ದ ಮುಖ್ಯ ಅತಿಥಿಗಳು, ಹಿಂದೂಗಳೆಲ್ಲರೂ ತಲೆತಗ್ಗಿಸುವಂತೆ, ಮಹಿಳೆಯರನ್ನು ಅವಮಾನಿಸಿ ಮಾತನಾಡಿದ್ದರು. ಮುಖಗಳನ್ನೇಕೆ ಮುಚ್ಚಿಕೊಳ್ಳುತ್ತೀರಿ ನೀವು, ನಿಮ್ಮ ನಿಮ್ಮ ತಿಕಗಳನ್ನು ಮುಚ್ಚಿಕೊಳ್ಳಿ ಎಂದು ಅಬ್ಬರಿಸುತ್ತಿದ್ದರು ಶ್ರೀಯುತರು.

ತನ್ನ ಹಂಡತಿಯ ಶೀಲವನ್ನು ಶಂಕಿಸುತ್ತ, ಕುಡಿದ ಮತ್ತಿನಲ್ಲಿ ಮಾತನಾಡಿದ್ದ ರಾಮಾಯಣದ ಅಗಸ ನೆನಪಿಗೆ ಬಂದ. ಅವನು ಕುಡಿದ ಮತ್ತಿನಲ್ಲಿ ಮಾತನಾಡಿದ್ದರೆ ಶ್ರೀಯುತರು ಗೆಲುವಿನ ಮತ್ತಿನಲ್ಲಿ ಮಾತನಾಡಿದ್ದರು. ರಂಗಸ್ಥಳವೆಂಬುದು ನನಗೆ, ನನ್ನಂತಹ ಎಲ್ಲ ರಂಗಕರ್ಮಿಗಳಿಗೆ, ಎಲ್ಲ ಪ್ರೇಕ್ಷಕರಿಗೆ ಪವಿತ್ರವಾದದ್ದು. ಅಲ್ಲಿ ನಿಂತು ನಾವು, ಒಳಿತಿನ ಮಾತು, ಕೆಡುಕಿನ ಮಾತು, ಬೈಗುಳದ ಮಾತು, ಅಸಭ್ಯ ಮಾತು ಎಲ್ಲವನ್ನೂ ಆಡುತ್ತೇವೆ. ಆದರೆ ಪ್ರದರ್ಶನದ ಮರ್ಯಾದೆ ಮೀರದಂತೆ ಆಡುತ್ತೇವೆ.

ಎದುರಿಗೆ ಒಟ್ಟಾಗಿ ಕುಳಿತಿರುವ ಪ್ರೇಕ್ಷಕರ ಒಗ್ಗಟ್ಟು ಮುರಿಯಬಾರದೆಂಬುದೇ ಮರ್ಯಾದೆ. ಅದುವೆ ನಾಟಕದ ಮರ್ಯಾದೆ, ಅಷ್ಟೇ ಏಕೆ ಸಮಾಜದ ಮರ್ಯಾದೆಯೂ ಹೌದು ಅದು. ಪ್ರೇಕ್ಷಕರಲ್ಲಿ ನನಗಾಗದವರು ಕೆಲವರು ಕುಳಿತಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಪ್ರತ್ಯೇಕಿಸಿ ಅವರ ಮನ ನೋಯಿಸಲೆಂದೇ ನುಡಿದರೆ ನಾನು ರಂಗಸ್ಥಳದ ಮರ್ಯಾದೆಗೆ ಭಂಗತರುತ್ತೇನೆ.

ಇದು ರಾಜಕೀಯ ಪ್ರಶ್ನೆಯಲ್ಲ, ಅಧಿಕಾರ ಅಂತಸ್ತುಗಳ ಪ್ರಶ್ನೆಯೂ ಅಲ್ಲ. ಇದು ಸಭ್ಯತೆಯ ಪ್ರಶ್ನೆ, ರಂಗ-ಧರ್ಮದ ಪ್ರಶ್ನೆ. ನನಗೀಗ 72 ವರ್ಷ ವಯಸ್ಸಾಗಿದೆ. ರಂಗಭೂಮಿಯು ನನ್ನ ಬದುಕಿಗೆ ಅಪಾರವಾದ ಮರ್ಯಾದೆ ತಂದು ಕೊಟ್ಟಿದೆ. ನಾನೀಗ ರಂಗಭೂಮಿಯ ಮರ್ಯಾದೆ ಕಾಪಾಡದೆ ಹೋದರೆ, ನನ್ನ ವೈಯಕ್ತಿಕ ಮರ್ಯಾದೆ, ನನ್ನ ಮಾಧ್ಯಮದ ಮರ್ಯಾದೆ, ನನ್ನ ಧರ್ಮದೇಶದ ಮರ್ಯಾದೆ ಉಳಿದೀತೇ? ಶ್ರೀಯುತರು ಬಾಯಿತಪ್ಪಿ ಮರ್ಯಾದೆ ಮೀರಿ ಮಾತನ್ನಾಡಿದ್ದಾರೆ. ಅವರನ್ನು ನಾವು ಕ್ಷಮಿಸಿಬಿಡೋಣ.

ಆದರೆ ನಾನೂ ಸಹ ನಾಳೆ, ಅಹಂಕಾರಕ್ಕೆ ಬಲಿಯಾಗಬಹುದಲ್ಲವೇ? ರಾಮನಂತಹ ರಾಮನೇ ಒಂದೆರಡು ಬಾರಿ ಮರ್ಯಾದೆ ಮೀರಿ ನಡೆದುಕೊಂಡನಲ್ಲವೆ, ರಾಮಾಯಣದಲ್ಲಿ? ಆಗೆಲ್ಲ ಆತ ನೆನೆದು ನೆನೆದು ಮರ್ಯಾದೆಯನ್ನು ಪುನರ್‌ಸ್ಥಾಪಿಸಿಕೊಂಡನಲ್ಲವೇ? 27ಕ್ಕೆ ನಾನು ಮೈಸೂರಿಗೆ ಹಿಂದಿರುಗುವವನಿದ್ದೇನೆ. ನಾನೂ ಸಹ, ಮರ್ಯಾದಾ ಪುರುಶೋತ್ತಮನನ್ನು ನೆನೆದು, ಉಪವಾಸವ್ರತವನ್ನು ಆರಂಭಿಸುವವನಿದ್ದೇನೆ. 
ನಿಮ್ಮಗಳ ಬೆಂಬಲ ಹಾಗೂ ಶುಭ ಹಾರೈಕೆಗಳು ಬೇಕಿದೆ ನನಗೆ.
ಪ್ರಸನ್ನ , ದೆಹಲಿ.

Post a Comment

0 Comments

Ad Code

Responsive Advertisement