ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳಲ್ಲಿ 118.26 ಕೋಟಿ ರೂಪಾಯಿ ಮೊತ್ತದ ಹಗರಣ ನಡೆದಿರುವುದು ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿದ್ದರೂ, ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಸೂಕ್ತ ಚರ್ಚೆ ಆಗದಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದೆ.
ಎಎಪಿಯ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, “ಸಚಿವ ಮುನಿರತ್ನ ನೇತೃತ್ವದಲ್ಲಿ ಆರ್‌ಆರ್ ನಗರದ ಕಾಮಗಾರಿಗಳಲ್ಲಿ 118.26 ಕೋಟಿ ರೂ. ಲೂಟಿಯಾಗಿರುವುದು ವಿಧಾನಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಬೇಕಿತ್ತು. ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್‌ರವರು ಮುನಿರತ್ನ ಹೆಸರನ್ನೇ ಪ್ರಸ್ತಾಪಿಸದೆ ಹಗರಣದ ಬಗ್ಗೆ ಕಲಾಪದಲ್ಲಿ ಮಾತನಾಡಿದ್ದಾರೆ. ಬೇರ್ಯಾವ ಶಾಸಕರೂ ಈ ಬಗ್ಗೆ ಮಾತನಾಡಿಲ್ಲ. ಬಹುಕೋಟಿ ಮೊತ್ತದ ಅಕ್ರಮವನ್ನು ಮುಚ್ಚಿಹಾಕಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಒಗ್ಗೂಡಿರುವುದು ನಾಚಿಕೆಗೇಡಿನ ಸಂಗತಿ” ಎಂದು ಹೇಳಿದರು.
“ಗಂಭೀರ ಅಕ್ರಮಗಳಲ್ಲಿ ಮುನಿರತ್ನ ಭಾಗಿಯಾಗಿರುವುದು ಇದು ಹೊಸತೇನಲ್ಲ. 2014ರಲ್ಲಿ ಬಿಬಿಎಂಪಿಯ 1016 ಫೈಲ್‌ಗಳನ್ನು ವೈಯಾಲಿಕಾವಲ್‌ನಲ್ಲಿನ ಅವರ ನಿವಾಸದಿಂದ ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದರು. 2018ರ ವಿಧಾನಸಭಾ ಚುನಾವಣೆ ವೇಳೆ ನಕಲಿ ಮತದಾರರ ಚೀಟಿ ಹಗರಣದಲ್ಲಿ ಮುನಿರತ್ನ ಭಾಗಿಯಾದ ಬಗ್ಗೆ ಬಿಜೆಪಿ ನಾಯಕರೇ ಕಾನೂನು ಸಮರ ಸಾರಿದ್ದರು. ನಂತರ ಅವರು ಬಿಜೆಪಿ ಸೇರಿದ್ದರಿಂದ ಪ್ರಕರಣವನ್ನು ವಾಪಸ್ ಪಡೆದರು. ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿಯ ಆಮಿಷಕ್ಕೆ ಒಳಗಾಗಿದ್ದಕ್ಕೆ ಜುಲೈ 25, 2019ರಂದು ಅವರನ್ನು ಅನರ್ಹ ಮಾಡಲಾಗಿತ್ತು. ಈಗ ಕಾಮಗಾರಿಗಳ ಅಕ್ರಮ ಬಹಿರಂಗಗೊಂಡಿದೆ. ಇಂತಹವರ ಬಗ್ಗೆ ಮೃದು ಧೋರಣೆ ತಾಳುವ ಮೂಲಕ ಕಲಾಪವು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತಿದೆ” ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮಾತನಾಡಿ, “ಸಚಿವ ಸ್ಥಾನದಿಂದ ಮುನಿರತ್ನರವರನ್ನು ವಜಾ ಮಾಡಿ, ಹಗರಣದಲ್ಲಿ ಅವರ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಬೇಕು. ಹಗರಣವು ಬೆಳಕಿಗೆ ಬಂದ ದಿನದಿಂದಲೂ ಆಮ್ ಆದ್ಮಿ ಪಾರ್ಟಿ ಇದನ್ನು ಆಗ್ರಹಿಸುತ್ತಿದ್ದರೂ ಮುಖ್ಯಮಂತ್ರಿ ಬೊಮ್ಮಾಯಿಯವರು ಯಾವುದೇ ಕ್ರಮ ಕೈಗೊಳ್ಳದೇ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಸ್ಥಾನವನ್ನು ಅಲಂಕರಿಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಜನರ ತೆರಿಗೆ ಹಣದ ಬಗ್ಗೆ ಕಾಳಜಿಯಿದ್ದರೆ, ಮುನಿರತ್ನ ರಾಜೀನಾಮೆಗೆ ಆಗ್ರಹಿಸಿ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲಿ” ಎಂದು ಸವಾಲು ಹಾಕಿದರು.
0 Comments