ಬೆಂಗಳೂರು : ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 317ಎ ನಗರದ ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ "ಕಾನೂನು ರಕ್ಷಣೆ ನಮ್ಮೆಲ್ಲರ ಹೊಣೆ" ಘೋಷ ವಾಕ್ಯದೊಂದಿಗೆ ಪ್ರಾಂತೀಯ ಸಮ್ಮೇಳನ - ಪ್ರಾಂತ್ಯ 7 ರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಲೋಕಾಯುಕ್ತರು ಹಾಗೂ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ರವರು "ಕಾನೂನು ರಕ್ಷಣೆ ನಮ್ಮೆಲ್ಲರ ಹೊಣೆ" ವಿಚಾರವಾಗಿ ಮಾತನಾಡುತ್ತಾ... ನಮ್ಮ ಈ ಸಮಾಜದಲ್ಲಿ ಇಂದು ನಮ್ಮ ಪೂರ್ವೀಕರು ಹಾಕಿ ಕೊಟ್ಟ ಮೌಲ್ಯಯುತ ಜೀವನಕ್ರಮಗಳನ್ನು ಕಡೆಗಣಿಸಿರುವುದೇ ನಮ್ಮ ಸಮಾಜದ ಇಂದಿನ ದುಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ ಅವರು, ನಮ್ಮ ಈಗಿನ ತಲೆಮಾರಿನ ಜನರು ಬಹುತೇಕ ಮೌಲ್ಯರಹಿತರಾಗಿ ನಿರ್ಲಜ್ಜತನ ಬೇಜವಾಬ್ದಾರಿತನದ ಪರಿಧಿಯನ್ನು ದಾಟಿರುವ ಕಾರಣ ಸಮಾಜದಲ್ಲಿ ಈ ದುಸ್ಥಿತಿ ಕಾಣುತ್ತಿದ್ದೇವೆ. ಮುಂದಿನ ಪೀಳಿಗೆಗಾದರೂ ನಾವು ಕನಿಷ್ಠ 2 ಮೌಲ್ಯಗಳಾದ ತೃಪ್ತಿ ಹಾಗೂ ದುರಾಸೆಯ ಕುರಿತು ಅವರಲ್ಲಿ ಜಾಗೃತಿ ಮೂಡಿಸಿದಾದಲ್ಲಿ ನಮ್ಮ ಸಮಾಜದ ಸುಧಾರಣೆ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಐವತ್ತರ ದಶಕದಲ್ಲಿ ಊರಿನಲ್ಲಿ ಯಾವುದೋ ತಪ್ಪಿನ ಕಾರಣಕ್ಕೆ ಯಾರಿಗಾದ್ರೂ ಜೈಲುಶಿಕ್ಷೆ ಆಗಿದ್ದಲ್ಲಿ ಅಂತಹ ವ್ಯಕ್ತಿಯಿಂದ ಸಮಾಜ ಅಂದು ಅಂತರ ಕಾಯ್ದುಕೊಳ್ಳುವ ಪರಿಸ್ಥಿತಿಯಿತ್ತು, ಆದರೀಗ ನಾನಾ ಕಾರಣಗಳಿಗೆ ಜೈಲಿಗೆ ಹೋಗಿ ಬೈಲಿನಲ್ಲಿ ಆಚೆ ಬರುವವರನ್ನು ಹಾರ ತುರಾಯಿ ಮೆರವಣಿಗೆಗಳ ಮೂಲಕ ಸ್ವಾಗತಿಸುವ ಪದ್ದತಿಯನ್ನು ನಾವಿಂದು ಈ ಸಮಾಜದಲ್ಲಿ ಕಾಣುತ್ತಿದ್ದೇವೆ. ಅದು ಸರಿಯೇ ಎಂಬ ಪ್ರಶ್ನೆಗೆ, ಈಗ ಕೇಳಿಬರುವ ಸಮರ್ಥನೀಯ ಸಿದ್ದ ಉತ್ತರ ಗಾಂಧೀಜಿ ರವರು ಸಹ ಜೈಲು ವಾಸ ಅನುಭವಿಸಿರಲಿಲ್ಲವೇ ? ಎಂಬುದು.
ಇಂದು ನಮ್ಮನ್ನಾಳುತ್ತಿರುವ ಪ್ರಜಾಪ್ರತಿನಿಧಿಗಳಲ್ಲಿ ಶೇ. 22 ರಷ್ಟು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಅವರನ್ನು ಅಲ್ಲಿಗೆ ಆರಿಸಿ ಕಳಿಸಿದ ಈ ನಮ್ಮ ಸಮಾಜಕ್ಕೆ ಅವರು ನೀಡುವ ಕೊಡುಗೆ ಎಂತಹುದು ಎಂದು ಬೇರೆ ಹೇಳಬೇಕೆಂದಿಲ್ಲ, ಸಮಾಜದಲ್ಲಿ ಅದರ ಫಲವನ್ನು ಎಲ್ಲರೂ ಅನುಭವಿಸುತ್ತಿದ್ದೇವೆ. ಇಂದು ಪ್ರಾಮಾಣಿಕವಾಗಿರುವ ವ್ಯಕ್ತಿ ಸಮಾಜದ ದೃಷ್ಟಿಯಲ್ಲಿ ಒಬ್ಬ ಹುಚ್ಚ ! ತಾನೂ ತಿನ್ನಲಾರ ಬೇರೆಯವರಿಗೂ ತಿನ್ನಲು ಬಿಡಲಾರ ಎಂಬ ಮನಸ್ಥಿತಿಯಲ್ಲಿದ್ದಾರೆ ಹೆಚ್ಚಿನವರು ಎಂಬುದು ಇಂದಿನ ವಾಸ್ತವ ಸಂಗತಿ ಎಂದರು.
1950 ರ ದಶಕದಲ್ಲಿ 50 ಲಕ್ಷ ರೂಪಾಯಿಗಳ ಭ್ರಷ್ಟಾಚಾರ ಹಗರಣದಿಂದ ಪ್ರಾರಂಭವಾಗಿ ಈಗ ಅದು ಲಕ್ಷಾಂತರ ಕೋಟಿ ರೂ.ಗಳ ಮಟ್ಟಕ್ಕೆ ತಲುಪಿದೆ. ಸಾವಿರಾರು ಕೋಟಿ ಸಾರ್ವಜನಿಕರ ಹಣವನ್ನು ಭ್ರಷ್ಟಾಚಾರದ ಮೂಲಕ ನಿರ್ಭಯವಾಗಿ ಗಳಿಸುವ ಜನಕ್ಕೆ ಕಾನೂನಿನ ಬಗ್ಗೆ ಸ್ವಲ್ಪವೂ ಭಯವಿಲ್ಲವಾಗಿರುವುದು ದುರದೃಷ್ಟಕರ ಸಂಗತಿ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತಾವು ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ಹನ್ನೊಂದು ವರ್ಷ ಕಳೆದಿದ್ದು, ಈಗ ತಮ್ಮ ಎಂಬತ್ತೆರಡು ವರ್ಷ ವಯಸ್ಸಿನಲ್ಲಿಯೂ ಸಮಾಜದಲ್ಲಿ ಮೌಲ್ಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಇದುವರೆಗೂ 1 ಸಾವಿರಕ್ಕೂ ಅಧಿಕ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದಾಗಿ ತಿಳಿಸಿದ ಅವರು, ಇರುವುದರಲ್ಲೇ ತೃಪ್ತಿ ಪಡುವುದನ್ನು ಹಾಗೂ ದುರಾಸೆಯಿಂದ ಮತ್ತೊಬ್ಬರಿಗೆ ಸೇರಿದ, ಸೇರಬೇಕಾದದನ್ನು ಕಸಿದು ಕೊಳ್ಳುವುದು ತಪ್ಪು ಎಂಬುದನ್ನು ಮಕ್ಕಳಲ್ಲಿ ಪ್ರಾಥಮಿಕವಾಗಿ ಮನವರಿಕೆ ಮಾಡಿಸುವಂತಹ ಮೌಲ್ಯಯುತ ಶಿಕ್ಷಣ ಇಂದಿನ ಶೈಕ್ಷಣಿಕ ಪದ್ದತಿಯಲ್ಲಿ ಇಲ್ಲವಾಗಿರುವುದರ ಬಗ್ಗೆ ಮತ್ತು ಶಿಕ್ಷಣ ರಂಗ ತನ್ನ ಕರ್ತವ್ಯವನ್ನು ಮೌಲ್ಯರಹಿತವಾದ ಶಿಕ್ಷಣವನ್ನು ನೀಡಿ ಹಣ ಮಾಡುವ ದಂಧೆಯಾಗಿ ಪರಿವರ್ತನೆಗೊಂಡಿರುವ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದರು.
ಭ್ರಷ್ಟಾಚಾರವನ್ನು ಹಾಗೂ ಅದರ ಭಯಾನಕ ಸತ್ಯಗಳನ್ನು ಕಣ್ಣಾರೆ ಕಂಡಿರುವ ತಾವು, ದುರಾಸೆಯಿಂದಾಗಿ ಜನರನ್ನು ವಂಚಿಸುವ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರವನ್ನು ಮಾಡಿ ಸಿಕ್ಕಿ ಹಾಕಿಕೊಂಡಾಗ ಆಪಾದನೆ, ವಿಚಾರಣೆ, ಮೇಲ್ಮನವಿ ಹೆಸರಿನಲ್ಲಿ ದಶಕಗಳೇ ಕಳೆದ ಮೇಲೂ ತಪ್ಪು ಸಾಬೀತಾಗಿ ಶಿಕ್ಷೆ ಆಗುವ ಕಾತರಿಯೂ ಇಲ್ಲದ ಬಗ್ಗೆ, ಯಾರೂ ಹೆಚ್ಚಾಗಿ ಭಯಪಡದ ಪರಿಸ್ಥಿತಿಯಿರುವುದು ಸಹ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೇವಾ ಕಾರ್ಯಕ್ರಮದಡಿಯಲ್ಲಿ ಬೆಂಗಳೂರಿನ ಗಿರಿನಗರದಲ್ಲಿರುವ ವೈಷ್ಣವಿ ಕಣ್ಣಿನ ಆಸ್ಪತ್ರೆಗೆ ಸುಮಾರು 13 ಲಕ್ಷ ರೂ. ಮೌಲ್ಯದ ಲೇಸರ್ ಕ್ಯಾಟರಾಕ್ಟ್ ಸರ್ಜರಿ ಯಂತ್ರವನ್ನು, ವಿಜಯನಗರ ಅತ್ತಿಗುಪ್ಪೆಯಲ್ಲಿರುವ ಲಯನ್ಸ್ ರಕ್ತ ನಿಧಿ ಕೇಂದ್ರಕ್ಕೆ 2.4 ಲಕ್ಷ ಮೌಲ್ಯದ 4 ಬ್ಲಡ್ ಕಲೆಕ್ಷನ್ ಮಾನಿಟರ್ ಗಳನ್ನು, ಶೇಷಾದ್ರಿಪುರದಲ್ಲಿರುವ ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ 2 ಲಕ್ಷ ಮೌಲ್ಯದ ಮಕ್ಕಳ ಡಯಾಪರ್ ಗಳನ್ನು, 1.4 ಲಕ್ಷ ಮೌಲ್ಯದ ಒಟ್ಟು 40 ಕಲ್ಲಿನ ಬೆಂಚುಗಳನ್ನು (ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಸರ್ಕಾರಿ ಕಲಾ ಕಾಲೇಜಿಗೆ 10 ಬೆಂಚುಗಳು, ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಮಹಾತ್ಮಾ ಗಾಂಧಿ ಪ್ರೌಢ ಶಾಲೆಗೆ 10 ಬೆಂಚುಗಳು ಹಾಗೂ ಇತರೆ ಸರ್ಕಾರಿ ಶಾಲೆಗಳಿಗೆ 20 ಬೆಂಚುಗಳು), ಮಾಚೋಹಳ್ಳಿಯಲ್ಲಿರುವ ಗಾಂಧಿ ವೃದ್ಧಾಶ್ರಮಕ್ಕೆ 40 ಸಾವಿರ ಮೌಲ್ಯದ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ, ವಿದ್ಯಾರ್ಥಿಗಳ ಉಪಯೋಗಕ್ಕಾಗಿ ತಲಾ 40 ಸಾವಿರ ರೂ. ಮೌಲ್ಯದ 2 ಲ್ಯಾಪ್ ಟಾಪ್ ಗಳನ್ನು ಹಾಗೂ ಅವಶ್ಯಕತೆ ಇರುವ ಮಹಿಳೆಯರಿಗೆ 24 ಸಾವಿರ ಮೌಲ್ಯದ 4 ಹೊಲಿಗೆ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು.
ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಡಾ.ಪ್ರಭಾ ಮೂರ್ತಿ, ಲಯನ್ ಕೃಷ್ಣಮೂರ್ತಿ, ಲಯನ್ ಡಾ. ಸುಂದರಮೂರ್ತಿ, ಲಯನ್ ಎಲ್.ವಿ. ಶ್ರೀನಿವಾಸ್, ಲಯನ್ ಕೆ.ಎಸ್.ದ್ವಾರಕಾನಾಥ್, ಲಯನ್ ಸಿ.ಹೆಚ್.ಸೀತಾರಾಮುಡು, ಲಯನ್ ರಘು ಪ್ರಕಾಶ್, ಲಯನ್ ಕೆ.ವಿ.ಜಗದೀಶ್, ಲಯನ್ ಡಾ. ಪಿ.ಆರ್.ಎಸ್.ಚೇತನ್, ಲಯನ್ ಅಜಂತಾ ರಂಗಸ್ವಾಮಿ, ಲಯನ್ ಎಸ್. ಮನೋಜ್ ಕುಮಾರ್, ಲಯನ್ ಡಾ. ಎಚ್.ಎನ್. ಶಿವನಂಜಯ್ಯ, ಲಯನ್ ಎಂ.ಎಸ್ .ರಾಮಕೃಷ್ಣಪ್ಪ, ಲಯನ್ ವೀರಭದ್ರ ಬ್ಯಾಡಗಿ, ಲಯನ್ ಕೇಶವಮೂರ್ತಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಹೆಚ್ಚಿನ ಸಂಖ್ಯೆಯಲ್ಲಿ ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಕುಟುಂಬಸ್ಥರು ಸಹ ಪಾಲ್ಗೊಂಡಿದ್ದರು.
.jpeg)

.jpeg)

0 Comments