ಬಳ್ಳಾರಿ, ಫೆ 17: ಸತತ ಒಂದರಿ0ದ ಎರಡನೇ ದಿನವಾದ ಇಂದು ಗುರುವಾರವೂ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿನೊಳಕ್ಕೆ ಪ್ರವೇಶಿಸುವುದಾಗಿ ಪಟ್ಟು ಹಿಡಿದಿದ್ದರಿಂದ ನಗರದ ಸರಳಾದೇವಿ ಕಾಲೇಜಿನ ಬಳಿ ಉದ್ವಿಗ್ನ ವಾತಾವರಣ ಉಂಟಾಯಿತು. ಪೊಲೀಸರು ಅತ್ಯಂತ ಸಮಾಧಾನದಿಂದ ಪರಿಸ್ಥಿತಿ ನಿಭಾಯಿಸಿ, ಕೋಪತಾಪ ಪ್ರದರ್ಶಿಸುತ್ತಿದ್ದ ವಿದ್ಯಾರ್ಥಿಗಳ ಮನವೊಲಿಸಿ ವಾಪಸ್ ಕಳುಹಿಸುವಲ್ಲಿ ಯಶಸ್ವಿಯಾದರು.
ಬೆಳಿಗ್ಗೆ 9 ಗಂಟೆಗೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಗೇಟಿನಲ್ಲೇ ತಡೆದರು. ಕಾಲೇಜಿನ ಕೆಲವು ವಿದ್ಯಾರ್ಥಿಗಳು ಮತ್ತು ಹೊರಗಿನವರು ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತರು. ಇದರಿಂದಾಗಿ ಕೆಲಕಾಲ ಕಾಲೇಜು ಬಳಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಯಿತು. 'ಹಿಜಾಬ್ ತೆಗೆಯಲು ಸಾಧ್ಯವೇ ಇಲ್ಲ' ಎಂದು ಪ್ರದರ್ಶನಕಾರರು ಪಟ್ಟು ಹಿಡಿದು ಕುಳಿತರು. ಕೋಪತಾಪ ಹಾಗು ಮೊಂಡತನ ಪ್ರದರ್ಶಿಸುತ್ತಿದ್ದ ವಿದ್ಯಾರ್ಥಿಗಳು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.
ಒಂದು ಹಂತದಲ್ಲಿ ವಿಧ್ಯಾರ್ಥಿನಿಯರ ಹಠವು ಮುಗಿಲು ಮುಟುವ ಹಂತಕ್ಕೆ ತಲುಪಿ, ಪೊಲೀಸರ ವಿರುದ್ಧ ಪ್ರದರ್ಶನಕಾರರು ಆಕ್ರೋಶ ವ್ಯಕ್ತಪಡಿಸಿದರು. ಆ ವೇಳೆ ಬೈಗುಳ-ನೂಕಾಟ-ತಳ್ಳಾಟ ನಡೆಯಿತು. 'ಧರ್ಮ ಸಂಕೇತಿಸುವ ಯಾವುದೇ ವಸ್ತ್ರಗಳನ್ನು ಧರಿಸುವುದಕ್ಕೆ ಕೋರ್ಟ್ ತಡೆ ನೀಡಿದೆ' ಎಂದು ಪೊಲೀಸ್ ಅಧಿಕಾರಿಗಳು ತಿಳಿಹೇಳಿದರು. ಅದಕ್ಕೆ 'ಕೋರ್ಟ್ ಆದೇಶ ಎಲ್ಲಿದೆ ತೋರಿಸಿ' ಎಂದು ವಿದ್ಯಾರ್ಥಿಗಳು ಮೊಂಡುಹಠದಿ0ದ ಕೇಳಿದರು. ಪ್ರಿನ್ಸಿಪಾಲ್ ಪ್ರೊ. ಹೇಮಣ್ಣ ಕೋರ್ಟ್ ಆದೇಶದ ಪ್ರತಿ ತರಿಸಿ ವಿದ್ಯಾರ್ಥಿಗಳಿಗೆ ತೋರಿಸಿದರು.
ವಿದ್ಯಾರ್ಥಿಗಳ ಮೊಂಡಾಟದಿ0ದ ಬೇಸತ್ತ ಪೊಲೀಸ್ ಅಧಿಕಾರಿಗಳು 'ನಿಮಗೆ 10 ನಿಮಿಷ ಅವಕಾಶ ಕೊಡುತ್ತೇವೆ. ಗುಂಪು ಕದಲದಿದ್ದರೆ ಬಂಧಿಸುತ್ತೇವೆ' ಎಂದು ಎಚ್ಚರಿಸಿದರು. ಇಷ್ಟಾದರೂ, ಅವರು ಜಗ್ಗಲಿಲ್ಲ-ಹಿಂದೆ ಸರಿಯಲಿಲ್ಲ. ಹಿರಿಯ ವಕೀಲರಾದ ಮಹಮ್ಮದ್ ಯೂಸುಫ್, ಮಹಮ್ಮದ್ ಅಲಿ ಹಾಗೂ ಜೆಡಿಎಸ್ ಮುಖಂಡ ರೋಷನ್ ಪರಿಪರಿಯಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ ಬಳಿಕ ಅವರೆಲ್ಲರೂ ವಾಪಸ್ ತೆರಳಿದರು.
ಬುಧವಾರದಂತೆ ಗುರುವಾರವೂ ಕಾಲೇಜಿನ ಪ್ರಿನ್ಸಿಪಾಲ್ ಹೇಮಣ್ಣ, ಪ್ರಾಧ್ಯಾಪಕರಾದ ಡಾ. ಇಸ್ಮಾಯಿಲ್, ಡಾ. ಸಬಿಹಾ ಶಾಹಿನ್, ಡಾ. ಬಿ. ಶ್ರೀನಿವಾಸ ಮೂರ್ತಿ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು. ಎಎಸ್ಪಿ ಗುರುಮೂರ್ತಿ ಮತ್ತೂರು, ಡಿವೈಎಸ್ಪಿ ರಮೇಶ್ ಕುಮಾರ್, ಇನ್ಸ್ಪೆಕ್ಟರ್ಗಳಾದ ಸುಭಾಷ್ ಚಂದ್ರ, ಹಾಲೇಶ್, ವಾಸುಕುಮಾರ್, ಷಣ್ಮುಖ ಮತ್ತಿತರರು ಬಂದೋಬಸ್ತ್ ಹೊಣೆ ಹೊತ್ತಿದ್ದರು.
ಹಿಜಾಬ್ ಧರಿಸಿಯೇ ಕಾಲೇಜಿನೊಳಗೆ ಹೋಗುವುದಾಗಿ ಪಟ್ಟು ಹಿಡಿದಿದ್ದ ವಿದ್ಯಾರ್ಥಿಗಳ ಜತೆ ಅತ್ಯಂತ ಸಂಯಮದಿ0ದ ವರ್ತಿಸಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಪೊಲೀಸ್ ಅಧಿಕಾರಿಗಳನ್ನು ಮೊಬೈಲ್ನಲ್ಲಿ ಸಂಪರ್ಕಿಸಿದ್ದ ಡಿ.ಸಿ ಮಾಲಪಾಟಿ, ಇದೊಂದು ಸೂಕ್ಷ್ಮ ಸಮಸ್ಯೆಯಾಗಿದ್ದು, ತಾಳ್ಮೆಯಿಂದ ಬಗೆಹರಿಸಬೇಕು ಎಂದು ಸೂಚಿಸಿದ್ದರು ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
Varthajala daily, Bengaluru
0 Comments