ಬೆಂಗಳೂರು, ಫೆ 26: ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ಪೋಲಿಯೊ ಒಂದು ಭಯಾನಕ ರೋಗ, ಈ ರೋಗ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಯನ್ನು ಉಂಟುಮಾಡುತ್ತದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ರೋಗವು ಹೆಚ್ಚಾಗಿ ಕಂಡುಬರುತ್ತದೆ. ಭಾರತದಲ್ಲಿ 2011 ರಿಂದ ಯಾವುದೇ ಪೋಲಿಯೊ ಪ್ರಕರಣಗಳು ವರದಿಯಾಗಿರುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ(WHO) ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರ ಎಂದು ಘೋಷಿಸಿದೆ.
ಆದಾಗ್ಯೂ, ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಮಲಾವಿಯಲ್ಲಿ ಕೆಲವು ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಈ ವರ್ಷ ಭಾರತ ಸರ್ಕಾರದ ಮಾರ್ಗದರ್ಶನದಂತೆ 27-02-2022 ರಿಂದ 02-03-2022 ರವರೆಗೆ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಯೋಜಿಸಲಾಗಿದೆ.
ರಾಷ್ಟ್ರೀಯ ಪಲ್ಸ್ ಪೋಲಿಯೊ-2022 ಕಾರ್ಯಕ್ರಮವನ್ನು ಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ಇಲಾಖೆ ಅಡಿಯಲ್ಲಿ 141 ಯೋಜನಾ ಘಟಕಗಳ 198 ವಾರ್ಡ್ ಗಳಲ್ಲಿ ಲಸಿಕೆ ಹಾಕಲು ಯೋಜನೆ ರೂಪಿಸಿ, ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿರಲಾಗಿರುತ್ತದೆ. 0-5 ವರ್ಷಕ್ಕಿಂತ ಕಡಿಮೆ ವಯಸ್ಸಿನ 10,80,104 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಿದ್ದು, ಕೊಳೆಗೇರಿ ನಿವಾಸಿಗಳು ಮತ್ತು ವಲಸಿಗರ ಮೇಲೆ ವಿಶೇಷ ಗಮನ ನೀಡಲಾಗುವುದು.
ಪಲ್ಸ್ ಪೋಲಿಯೊ ಲಸಿಕೆ ಹಾಕಲು ಪಾಲಿಕೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಕುಟುಂಬ ಕಲ್ಯಾಣ ಕೇಂದ್ರ, ಔಷಧಾಲಯಗಳು, ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಶಾಲೆಗಳು, ಸ್ಥಿರ ಮತ್ತು ಸಂಚಾರಿ ತಂಡಗಳನ್ನು ಬಸ್ ನಿಲ್ದಾಣ, ಮಾರುಕಟ್ಟೆ, ರೈಲ್ವೆ ಮತ್ತು ಮೆಟ್ರೊ ನಿಲ್ದಾಣ, ಮಾಲ್‌ಗಳು, ಸ್ವಯಂ ಸೇವಾ ಸಂಸ್ಥೆಯ ಆಸ್ಪತ್ರೆಗಳು, ಖಾಸಗಿ ನರ್ಸಿಂಗ್ ಹೋಮ್‌ಗಳು, ವೈದ್ಯಕೀಯ ಮಹಾವಿದ್ಯಾಲಯ, ಪ್ರಮುಖ ಉದ್ಯಾನವನಗಳು, ಕೊಳಚೆ ಪ್ರದೇಶಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಪೋಲಿಯೊ ಹನಿ ಹಾಕಲಾಗುತ್ತದೆ. ಅದಕ್ಕಾಗಿ 3,404 ಬೂತ್‌ಗಳನ್ನು ಸ್ಥಾಪಿಸಲಾಗಿರುತ್ತದೆ.
ಕೊಳೆಗೇರಿ ಪ್ರದೇಶಗಳಲ್ಲಿ ಪೋಲಿಯೊ ಬೂತ್‌ಗಳ ಮೇಲ್ವಿಚಾರಣೆ ಮತ್ತು ಸಮನ್ವಯತೆಗಾಗಿ ಎಲ್ಲಾ ಇಲಾಖೆಗಳಿಂದ ವಿಶೇಷ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜೊತೆಗೆ, ಕಾರ್ಯಕ್ರಮವನ್ನು ದೂರದರ್ಶನ, ರೇಡಿಯೋ ಮತ್ತು ಮಾಲ್ ಗಳು, ವಾಣಿಜ್ಯ ಪ್ರದೇಶಗಳು, ಮಾರುಕಟ್ಟೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ.
ಪೋಲಿಯೊ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಬೆಂಗಳೂರಿನ ನಾಗರಿಕರನ್ನು ತಲುಪಲು ಪಾಲಿಕೆ ತಮ್ಮ ದೈನಂದಿನ ಮನೆಯಿಂದ ಮನೆಗೆ ತ್ಯಾಜ್ಯ ಸಂಗ್ರಹಣೆಯ ವಾಹನಗಳಲ್ಲಿ ಧ್ವನಿವರ್ಧಕ ಗಳ ಮೂಲಕ ಜಾಗೃಯಿ ಮೂಡಿಸಲಾಗುತ್ತಿದೆ. ಇದರ ಜೊತೆಗೆ, ರೋಟರಿ, ಅಕ್ಷಯ ಪಾತ್ರ, ಅಧಮ್ಯ ಚೇತನ ಮುಂತಾದ ಅನೇಕ ಎನ್.ಜಿ.ಒ ಪಾಲುದಾರರು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಾಲಿಕೆಯ ಜೊತೆ ಕೈಜೋಡಿಸಿದ್ದಾರೆ.
ಈ ಹಿಂದೆ ಮಕ್ಕಳಿಗೆ ಪೋಲಿಯೋ ಹನಿ ಹಾಕುವಂತೆ ಸಾರ್ವಜನಿಕರು ಪದೇ ಪದೆ ಬೆಂಬಲ ನೀಡಿದರೂ ಐದು ವರ್ಷದೊಳಗಿನ ಮಕ್ಕಳನ್ನು ಮತಗಟ್ಟೆಗೆ ಕರೆತಂದು ಎರಡು ಹನಿ ಪೋಲಿಯೊ ಹಾಕಿಸುವ ಮೂಲಕ ಪೋಲಿಯೊ ಮುಕ್ತ ನಗರವನ್ನಾಗಿಸಿ ಎಲ್ಲರೂ ಕೈ ಜೋಡಿಸಿ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೊ ವಿವರ:
O - 5 ವರ್ಷದ ಮಕ್ಕಳ ಸಂಖ್ಯೆ: 10,80,104
ಬೂತ್ ಗಳ ಸಂಖ್ಯೆ: 3,404
ಸ್ಥಿರ ತಂಡಗಳು: 435
ಸಂಚಾರಿ ತಂಡಗಳು: 345
ಲಸಿಕಾ ಕಾರ್ಯಕರ್ತರು: 15,198
ಮೇಲ್ವಿಚಾರಕರು: 760
ನೋಡಲ್ ಅಧಿಕಾರಿಗಳು: 26
Varthajala daily, Bengaluru
0 Comments