ರಾಷ್ಟ್ರಧ್ವಜಕ್ಕೆ ಗೌರವ, ಸಿದ್ದರಾಮಯ್ಯ ಪಾಠ ಮಾಡುವುದು ಅಗತ್ಯವಿಲ್ಲ: ಹೆಚ್.ಡಿ.ಕುಮಾರಸ್ವಾಮಿ
ರಾಮನಗರ, ಫೆ 20: ರಾಷ್ಟ್ರಧ್ವಜಕ್ಕೆ ಗೌರವ ಕೊಡುವ ಬಗ್ಗೆ ಸಿದ್ದರಾಮಯ್ಯ ಅವರಿಂದ ಪಾಠ ಕಲಿಯಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾನು ಕೂಡ ಸಂವಿಧಾನವನ್ನು ಓದಿಕೊಂಡಿದ್ದೇನೆ. ಆದರೆ, ನನಗೆ ಸ್ವಯಂ ಘೋಷಿತ ಸಂವಿಧಾನ ತಜ್ಞರೆನಿಸಿಕೊಂಡಿರುವವರಿಂದ ಬೋಧನೆ ಬೇಡ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬರುವಾಗ ಕಟ್ಟಿದ ಕಾಂಗ್ರೆಸ್ಸೇ ಬೇರೆ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ಸಚನ್ನು ಬರಖಾಸ್ತು ಮಾಡಬೇಕೆಂದು ಮಹಾತ್ಮ ಗಾಂಧೀಜಿ ಅವರು ಅಂದೇ ಹೇಳಿದ್ದರು. ಅವರ ಆಶಯಕ್ಕೆ ವಿರುದ್ಧವಾಗಿ ಮುಂದುವರಿದ ಕಾಂಗ್ರೆಸ್ ಪಕ್ಷವು ಇಂದು ಎಂಥಾ ದಯನೀಯ ಸ್ಥಿತಿಗೆ ಮುಟ್ಟಿದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.
ನಾನು 1959ರಲ್ಲಿ ಹುಟ್ಟಿದ್ದೇನೆ. ಸ್ವಾತಂತ್ರ್ಯ ಹೋರಾಟಕ್ಕೆ ನನ್ನದು ಏನೂ ಕೊಡುಗೆ ಇಲ್ಲ. ಈಗ ಸ್ವಾತಂತ್ರ್ಯದ ಇತಿಹಾಸ ಹೇಳುತ್ತಿರುವವರು ಹುಟ್ಟಿದ್ದರಾ? ಆಗ ಸ್ವಾತಂತ್ರ್ಯಕ್ಕಾಗಿ ರಕ್ತಪಾತವೇ ಆಗಿತ್ತು. ಈಗ ಧರ್ಮದ ಹೆಸರಿನಲ್ಲಿ ಅಂಥದ್ದು ನಡೆಯುವುದು ಬೇಕಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಶ್ರೀನಗರದಲ್ಲಿ ಬಾವುಟ ಹಾರಿಸಲು ಹೋಗಿ 12 ಜನರನ್ನು ಸಾಯಿಸಿದರು ಅಂದಿದ್ದರು ಕಾಂಗ್ರೆಸ್ಸಿಗರು.
ಬಿಜೆಪಿಯವರಿಂದ ವಾಚಾಮಗೋಚರ ಟೀಕೆಗೆ ಒಳಗಾಗಿದ್ದರು. ಆಗ ರಾಷ್ಟ್ರಧ್ವಜ ಕಾಣಲಿಲ್ಲವೇ ಇವರಿಗೆ? ರಾಜ್ಯದ ಜನರ ಬಗ್ಗೆ, ಅಭಿವೃದ್ಧಿ ಚರ್ಚೆ ಮಾಡುವುದನ್ನು ಬಿಟ್ಟು ರಾಷ್ಟ್ರಧ್ವಜದ ಬಗ್ಗೆ ವಿಷಯಾಂತರ ಮಾಡುತ್ತಿದ್ದಾರೆ. ಶಕ್ತಿ ಇದ್ದರೆ ಬೀದಿಯಲ್ಲಿ ಹೋರಾಟ ಮಾಡಲಿ. ಅದಕ್ಕೆ ಹೇಳಿದ್ದೇನೆ, ಕಲಾಪಕ್ಕೆ ಅಡ್ಡಿ ಮಾಡುವವರನ್ನು ಅಮಾನತು ಮಾಡಿ. ಇಲ್ಲವೇ ಸದನ ಮುಂದೂಡಿ ಎಂದು ಒತ್ತಾಯ ಮಾಡಿದ್ದೇನೆ. ಸುಖಾ ಸುಮ್ಮನೆ ತೆರಿಗೆ ಹಣ ಪೋಲು ಮಾಡುವುದು ಬೇಡ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಬಿಜೆಪಿ ಮೈತ್ರಿ ಬಗ್ಗೆ ಆಹ್ವಾನ ಇಲ್ಲ
ರಾಮನಗರ, ಫೆ 20: ಜೆಡಿಎಸ್ - ಬಿಜೆಪಿ ಮೈತ್ರಿ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಅವರಿಂದ ಯಾವ ಆಹ್ವಾನವೂ ಬಂದಿಲ್ಲ ನಮಗೆ. ಪ್ರಧಾನಿ ಮೋದಿಯವರು ದೇವೇಗೌಡರನ್ನು ಮೆಚ್ಚಿಕೊಳ್ಳುವುದು ಅವರಿಬ್ಬರ ವೈಯಕ್ತಿಕ ಸಂಬಂಧ. ಅದರಲ್ಲಿ ರಾಜಕೀಯ ಇಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಸಮಯ ಇದೆ, ಏನೆಲ್ಲ ನಡೆಯುತತದೆಯೋ ಕಾದು ನೋಡೋಣ. ಈಗಂತೂ ಬಿಜೆಪಿಯವರು ನಮ್ಮ ಬಳಿ ಬರುವ ಪ್ರಮೇಯ ಇಲ್ಲ. ಸದ್ಯಕ್ಕೆ ಅವರಿಗೆ ಪೂರ್ಣ ಬಹುಮತ ಇದೆ ಎಂದರು ಕುಮಾರಸ್ವಾಮಿ.
0 Comments