ಕರಾಟೆ ತರಬೇತಿ ಸೌಲಭ್ಯದ ಲಾಭ ಪಡೆಯಿರಿ: ಜಿಲ್ಲಾಧಿಕಾರಿ ಡಾ.ಅವಿನಾಶ್
ರಾಯಚೂರು,ಫೆ.08,(ಕ.ವಾ):- ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚು ನಡೆಯುತ್ತಿದೆ. ಹೆಣ್ಣುಮಕ್ಕಳ ಸ್ವಯಂ ಆತ್ಮ ರಕ್ಷಣೆಗಾಗಿ ಕರಾಟೆ ತರಬೇತಿ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದಿದ್ದು, ಪ್ರತಿಯೊಬ್ಬರೂ ಈ ಸೌಲಭ್ಯದ ಲಾಭವನ್ನು ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ರಾಜೇಂದ್ರ ಮೆನನ್ ಹೇಳಿದರು.
ಅವರು ಫೆ.07ರ ಮಂಗಳವಾರ ದಂದು ನಗರದ ಆಶಾಪೂರು ರಸ್ತೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಯಂ ರಕ್ಷಣೆಗಾಗಿ ಓಬವ್ವ ಆತ್ಮ ರಕ್ಷಣಾ ಕಲೆ ಕರಾಟೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ವಿದ್ಯಾರ್ಥಿಗಳು ಉತ್ಸುಕದಿಂದ ತಮ್ಮ ಆತ್ಮ ರಕ್ಷಣೆಗಾಗಿ ಕರಾಟೆಯನ್ನು ಕಲಿಯುತ್ತಿರುವುದನ್ನು ನೋಡಿ ತುಂಬಾ ಸಂತೋಷವಾಗಿದೆ. ಅದರಲ್ಲೂ ಹೆಣ್ಣು ಮಕ್ಕಳು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಕರಾಟೆಯನ್ನು ಕಲಿಯುತ್ತಿರುವುದು ಖುಷಿಯ ವಿಚಾರ. ವಿದ್ಯಾರ್ಥಿಗಳು ತಮ್ಮ-ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಕರಾಟೆಯ ಬಗ್ಗೆ ತಿಳಿಸಿಕೊಳ್ಳಬೇಕೆಂದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ಮಾತನಾಡಿ, ಓಬವ್ವ ನನ್ನ ಮಾತೃ ಜಿಲ್ಲೆಯ ವೀರ ಮಹಿಳೆಯಾಗಿದ್ದು, ಹಾಗಾಗಿ ನನಗೆ ಓಬವ್ವನ ಬಗ್ಗೆ ಚೆನ್ನಾಗಿ ತಿಳಿದಿದ್ದೇನೆ. ರಾಯಚೂರಿನಲ್ಲಿ ಓಬವ್ವ ಆತ್ಮ ರಕ್ಷಣಾ ಕಲೆ ತರಬೇತಿ ಪಡೆಯುತ್ತಿರುವುದು ಸಂತಸದ ವಿಷಯ. ನಿಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಂಡು ನಿಮಗೆ ಸಮಸ್ಯೆಗಳು ಎದುರಾದಾಗ ನಿಮ್ಮ ಆತ್ಮ ರಕ್ಷಣೆಗಾಗಿ ಕರಾಟೆ ಕಲಿಯುವುದು ಅವಶ್ಯಕವಾಗಿದೆ. ಕರಾಟೆ ಕಲಿಕೆಯನ್ನು ಒಂದು ದಿನಕ್ಕೆ ಸಿಮೀತವಾಗಬಾರದು ಎಂದು ಹೇಳಿದರು.
ಪ್ರಸ್ತಾವಿಕವಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸತೀಶ ಕೆ.ಹೆಚ್ ಅವರು ಮಾತನಾಡಿ, ಎಲ್ಲಾ ಹೆಣ್ಣುಮಕ್ಕಳು ತರಬೇತಿಯನ್ನು ಸರಿಯಾಗಿ ಕಲಿತು ದುಷ್ಟ ವ್ಯಕ್ತಿಗಳಿಂದ ರಕ್ಷಿಸಿಕೊಳ್ಳಲು ಮಹಿಳೆಯರು ಸ್ವಯಂ ರಕ್ಷಣಾ ಕಲೆಗಳನ್ನು ಕರಗತ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಲಾಲ್ ಎಂ.ಜಿ, ರಾಯಚೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬೇಬಿ ಹುಲ್ಸವಾರ್, ದೇವದುರ್ಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೇವರಾಜ ಬಿಂಗಮ್, ಸಿಂಧನೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹಾಲಿಂಗ, ಲಿಂಗಸೂಗೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಂದ್ರ ಕುಮಾರ, ಮಾನವಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಂದ್ರ ಕುಮಾರ ಉಪ್ಪಾರ್, ವಿಸ್ತರಣಾಧಿಕಾರಿ ಸಾಬಣ್ಣ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ದಾವೆಲ್ ತೆರದಾಳ, ತರಬೇತುದಾರರು ಮಹಾನಂದ, ಲಕ್ಷಿö್ಮ, ಕರಾಟೆ ಪಟುಗಳು ಸೇರಿದಂತೆ ಅನೇಕರಿದ್ದರು.
0 Comments