ಬೆಂಗಳೂರು ಫೆಬ್ರವರಿ 14,2022: “ರಾಜ್ಯಪಾಲನಾಗಿ ಕರ್ನಾಟಕದ ಜನತೆಗೆ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಹಾಗೂ ಸಂತೋಷ ಎನಿಸುತ್ತದೆ” ಎಂದು ಪ್ರಾರಂಭಿಕ ಹಂತದಲ್ಲಿ ಕನ್ನಡದಲ್ಲಿ ಹೇಳುವ ಮೂಲಕ ಇದೇ ಪ್ರಥಮ ಬಾರಿಗೆ ರಾಜ್ಯದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಿದರು.
ಬೆಳಿಗ್ಗೆ ವಿಧಾನಸೌಧದ ಮುಖ್ಯ ದ್ವಾರಕ್ಕೆ ಆಗಮಿಸಿದ ರಾಜ್ಯಪಾಲರನ್ನು ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿಗಳಾದ ಬಸವರಾಜ್ ಹೊರಟ್ಟಿ. ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬರಮಾಡಿಕೊಂಡರು. ಸೋಮವಾರದಿಂದ ಹತ್ತು ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಗೌರವಾನ್ವಿತ ರಾಜ್ಯಪಾಲರು ಸರ್ಕಾರದ ಸಾಧನೆ ಮತ್ತು ದಿಕ್ಸೂಚಿಗಳ ಬಗ್ಗೆ ಭಾಷಣ ಮಾಡಿದರು.
ಇಡೀ ವಿಶ್ವವನ್ನೇ ಆಕ್ರಮಿಸಿರುವ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುವಲ್ಲಿ ಸರ್ಕಾರ ಅತ್ಯುತ್ತಮವಾಗಿ ಶ್ರಮಿಸಿದೆ. ಸನ್ಮಾನ್ಯ ಪ್ರಧಾನ ಮಂತ್ರಿ ಅವರ ದೂರದೃಷ್ಠಿಯಿಂದಾಗಿ ಆತ್ಮ ನಿರ್ಭರ್ ಭಾರತ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ ಎಂದ ಅವರು, ಪೆಂಡಮಿಕ್ ಸಮಯದಲ್ಲಿ ಶ್ರಮಿಸಿದ ವೈದ್ಯರು, ಶುಶ್ರೂಷಕಿಯರು, ಪೊಲೀಸ್ ಸಿಬ್ಬಂದಿಗಳು,, ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ರಾಜ್ಯಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನವು ಪ್ರಾರಂಭಿಸಿದ ಟೆಲಿಮೆಡಿಸಿನ್ ಆಧಾರಿತ ಆರೋಗ್ಯ ಸೇವೆಗಳ ಸದುಪಯೋಗ ಪಡೆಯುವಲ್ಲಿ ರಾಷ್ಟ್ರದಲ್ಲಿಯೇ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆಯುಷ್ಮಾನ್ ಬಾರತ್ ಯೋಜನೆಯಡಿಯಲ್ಲಿ ಒಟ್ಟು 8.25 ಲಕ್ಷ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ರೂ.875 ಕೋಟಿ ಮೊತ್ತವನ್ನು ಒಟ್ಟು 6.7 ಲಕ್ಷ ಫಲಾನುಭವಿಗಳ ಚಿಕಿತ್ಸೆಗಾಗಿ ವೆಚ್ಚ ಮಾಡಲಾಗಿದೆ. ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಹಿನ್ನಲೆಯಲ್ಲಿ ಆರೋಗ್ಯ ನಂದನ ನೂತನ ಅಭಿಯಾನವನ್ನು ಪ್ರಾರಂಭಿಸಿ, ಈವರೆಗೆ 70 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದರು,
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮ ಪಂಚಾಯತಿಗಳ ಅಮೃತ ರೈತ, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃತ ನಿರ್ಮಲ, ಅಮೃತ ಶಾಲಾ ಮೂಲಸೌಕರ್ಯ ಸೇರಿದಂತೆ 14 ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ. ರಾಜ್ಯವು ಹಾಲು ಉತ್ಪಾದನೆಯಲ್ಲಿ 11ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ 6ನೇ ಸ್ಥಾನ, ಮಾಂಸ ಉತ್ಪಾದನೆಯಲ್ಲಿ 10ನೇ ಸ್ಥಾನ ಹೊಂದಿದ್ದು, ಜಿಡಿಪಿ ಗೆ ಒಟ್ಟು ಶೇ.3.53ರಷ್ಟು ರಾಜ್ಯ ಕೊಡುಗೆ ನೀಡುತ್ತಿದೆ. 2021-22ನೇ ಸಾಲಿಗೆ ರಾಜ್ಯದ ಎಂಟು ಜ್ಞಾನಪೀಠ ಪುರಸ್ಕೃತರು ಅಭ್ಯಾಸ ಮಾಡಿದ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ರೂ.16.88 ಕೋಟಿ ಅನುದಾನ ಒದಗಿಸಿ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ -19ರ ಎರಡನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ 11.89ಲಕ್ಷ ಕಾರ್ಮಿಕರಿಗೆ ತಲಾ ರೂ.2000 ಗಳಂತೆ ಒಟ್ಟು ರೂ.237.89 ಕೋಟಿ ಮೊತ್ತದ ನರೆವನ್ನು ವಿತರಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸರ್ಕಾರ 2021-22ನೇ ಸಾಲಿನಲ್ಲಿ 48 ಲಕ್ಷ ರೈತರಿಗೆ ರೂ.1977.67 ಕೋಟಿ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುತ್ತದೆ. 2020-21ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ 2.06 ಲಕ್ಷ ಮೆ ಟನ್, ರಾಗಿ 4.75 ಲಕ್ಷ ಮೆ.ಟನ್ ಮತ್ತು ಬಿಳಿಜೋಳ 81 ಸಾವಿರ ಮೆ.ಟನ್ ಖರೀದಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದು, ಅನೇಕ ಯೋಜನೆಗಳ ಮೂಲಕ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮವನ್ನು ಶ್ಲಾಘಿಸಿದರು.
0 Comments