ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಎಎಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದ ಶೇಕ್ಷಾವಲಿಯವರು ಬಿಜೆಪಿಗೆ ಪಕ್ಷಾಂತರ ಮಾಡಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿ ನಾಯಕರು ಹೊಸಪೇಟೆಯಲ್ಲಿ ಪಾದಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ, “ಪಕ್ಷದ ಸಿದ್ಧಾಂತ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್‌ರವರ ಜನಪರ ಆಡಳಿತವನ್ನು ಮೆಚ್ಚಿ ಜನರು ಶೇಕ್ಷಾವಲಿಗೆ ಮತ ನೀಡಿ ಗೆಲ್ಲಿಸಿದ್ದರು. ಆದರೆ ಬಿಜೆಪಿಯವರ ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡುವ ಮೂಲಕ ಅವರು ಜನತೆಗೆ ದ್ರೋಹ ಮಾಡಿದ್ದಾರೆ. ಪ್ರಜಾಪ್ರಭುತ್ವ ಮಾರ್ಗದಲ್ಲಿ ಗೆಲ್ಲಲು ಸಾಧ್ಯವಾಗದ ಬಿಜೆಪಿಯು ಗೆದ್ದವರನ್ನು ಖರೀದಿಸಿ ಅಧಿಕಾರ ಪಡೆದಿರುವುದು ದುರಂತ. ಇಂತಹ ಪ್ರಕರಣಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ” ಎಂದು ಬೇಸರ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷರಾದ ವಿಜಯ್ ಶರ್ಮರವರು ಮಾತನಾಡಿ, “ಸಚಿವ ಆನಂದ್ ಸಿಂಗ್‌ರವರು ಭಾರೀ ಆಮಿಷವೊಡ್ಡಿ ಪಾಲಿಕೆಯ ನೂತನ ಸದಸ್ಯರನ್ನು ಖರೀದಿಸಿದ್ದಾರೆ. ಈ ಮೂಲಕ ವಾಮಮಾರ್ಗದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಕೇವಲ 10 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿಯು ಹಣ ಬಲದ ಮೂಲಕ ಇತರೆ 9 ಸದಸ್ಯರನ್ನು ಖರೀದಿಸಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಎಷ್ಟು ಗೌರವವಿದೆ ಎನ್ನುವುದು ಇದರಿಂದಲೇ ತಿಳಿಯುತ್ತದೆ” ಎಂದು ಹೇಳಿದರು.
ಎಎಪಿಯ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕರಾದ ಎಚ್.ಡಿ.ಬಸವರಾಜುರವರು ಮಾತನಾಡಿ, “ಶೇಕ್ಷಾವಲಿ ಗೆಲುವಿಗಾಗಿ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದರು. ಎಎಪಿಯಿಂದ ಜಯಗಳಿಸಿದವರು ದೆಹಲಿ ಸಿಎಂ ಕೇಜ್ರಿವಾಲ್ ಮಾದರಿಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವಂತಹ ಪಾಲಿಕೆ ಸದಸ್ಯರಾಗುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಈಗ ಪಕ್ಷಾಂತರ ಮಾಡುವ ಮೂಲಕ ಕೋಮುವಾದಿ, ಭ್ರಷ್ಟ್ ಹಾಗೂ ಜನವಿರೋಧಿ ಪಕ್ಷವನ್ನು ಸೇರಿದ್ದಾರೆ. ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಾಗದೇ ಗೆದ್ದವರನ್ನು ಖರೀದಿಸುವುದು ಬಿಜೆಪಿಯ ಹೇಡಿತನವನ್ನು ತೋರಿಸುತ್ತದೆ” ಎಂದು ಹೇಳಿದರು.
ಹೊಸಪೇಟೆ, ರಾಯಚೂರು, ಕೊಪ್ಪಳ, ಕುಷ್ಟಗಿ, ಬಳ್ಳಾರಿ, ಬೆಂಗಳೂರು ಭಾಗದ ನೂರಾರು ಎಎಪಿ ಕಾರ್ಯಕರ್ತರು ಆನಂದ್ ಸಿಂಗ್ ಮನೆ ಮುಂದೆ ಪ್ರತಿಭಟನೆ ನಡೆಸಿ, ಶೇಕ್ಷಾವಲಿ ರಾಜೀನಾಮೆಗೆ ಆಗ್ರಹಿಸಿದರು. ಎಎಪಿ ಮುಖಂಡರಾದ ಮೋಹನ್ ದಾಸರಿ, ಜಗದೀಶ್, ಗುರುಮೂರ್ತಿ, ರವಿಚಂದ್ರ, ನಂಜಪ್ಪ ಕಾಳೇಗೌಡ ಮತ್ತಿತರ ನಾಯಕರು ಭಾಗವಹಿಸಿದ್ದರು.
0 Comments