ಬೆಂಗಳೂರು: ಹಿಂದಿನ ಸರಕಾರಗಳು ಬೇಕಂತಲೇ ತಡ ಮಾಡಿದಂತೆ ಮೇಕೆದಾಟು ಯೋಜನೆಯನ್ನು ಮುಂದೂಡುತ್ತ ಬರಲಾಗಿದೆ. ಕಾಂಗ್ರೆಸ್ ಸರಕಾರ ಐದು ವರ್ಷಗಳ ಕಾಲ ಸೋಮಾರಿತನ ಮತ್ತು ವಿಳಂಬ ಧೋರಣೆ ಅನುಸರಿಸುತ್ತ ಬಂತು ಎಂದು ಹಿರಿಯ ಸಾಹಿತಿಗಳು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರಾದ ದೊಡ್ಡರಂಗೇಗೌಡ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೋವಿಡ್, ಒಮಿಕ್ರಾನ್, ಜನಸಂದಣಿ ಸೇರಬಾರದೆಂಬ ನಿಯಮವಿದ್ದರೂ ಯಾವ ಪುರುಷಾರ್ಥಕ್ಕೆ ಈ ಪಾದಯಾತ್ರೆ ಎಂದು ಪ್ರಶ್ನಿಸಿದರು.
ಜನರ ಗುಂಪುಗೂಡುವಿಕೆಯಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಮುಖಂಡರು ಬುದ್ಧಿ ಇದ್ದೂ ಹೀಗ್ಯಾಕೆ ವರ್ತಿಸುತ್ತಿದ್ದಾರೆ? ಅವರು ಒಂದು ನಿಮಿಷ ತಾಳ್ಮೆಯಿಂದ ಯೋಚಿಸಬಾರದಿತ್ತೇ? ಎಂದು ಕೇಳಿದರು. ಸೆರೆಮನೆಯಿಂದ ಬಿಡುಗಡೆ ಆಗಿ ಬಂದಾಗ ವಿಜಯಯಾತ್ರೆ ಮಾಡುವ ಈ ಮುಖಂಡರು ಅದೇನು ಸಾಧಿಸಿದರು ಎಂದು ಆರ್ಥ ಆಗುತ್ತಿಲ್ಲ ಎಂದು ನುಡಿದರು.
ಜಾಥಾಕ್ಕೆ ಬರುವವರು ಮುಖಗ್ಲೌಸ್ ಹಾಕದೆ, ಸ್ಯಾನಿಟೈಸ್ ಮಾಡದೆ, ಗುಂಪು ಗುಂಪಾಗಿ ತೆರಳುವ ಕಾರಣ ಒಮಿಕ್ರಾನ್ ಹೆಚ್ಚಾಗುವ ಸಾಧ್ಯತೆ ಹೆಚ್ಚು ಎಂದು ಆತಂಕ ವ್ಯಕ್ತಪಡಿಸಿದರು. ಜಾಥಾ ಇದೀಗ ತೀವ್ರತೆ ಕಳಕೊಳ್ಳುತ್ತಿದೆ ಎಂದರು.
ಚೆನ್ನೈ ಹಸಿರುಪೀಠದ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಬಿಜೆಪಿ ಸರಕಾರ ಯಶಸ್ವಿಯಾಗಿದೆ. ಇದು ಬಿಜೆಪಿಯ ದಿಟ್ಟ ಕ್ರಮ. ರಾಜ್ಯ ಸರಕಾರದ ಯೋಜನಾ ಪರಿವಿಡಿಯ ಪರಿಶೀಲನೆಯೂ ನಡೆಯುತ್ತಿದೆ. ಸುಪ್ರೀಂ ಕೋರ್ಟಿನಲ್ಲಿ ವಿಚಾರಣಾ ಅರ್ಜಿ ಬಾಕಿ ಇರುವಾಗ ಪಾದಯಾತ್ರೆ ಎಷ್ಟು ಸರಿ ಎಂದು ಕೇಳಿದರು. ಸಂವಿಧಾನ ಓದಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಬೆನ್ನು ಕಾಣುತ್ತಿಲ್ಲ. ನೀವು ಮಾಡುತ್ತಿರುವ ಕೆಲಸ ಸರಿಯೇ ಎಂದು ಪ್ರಶ್ನಿಸಿದರು.
ಚುನಾವಣೆ ಗೆಲ್ಲುವ ಏಕೈಕ ಉದ್ದೇಶದ ಸುಳ್ಳಿನ ಕಂತೆಯ ಪಾದಯಾತ್ರೆ ಕಾಂಗ್ರೆಸ್‍ನÀದು ಎಂದು ಆರೋಪಿಸಿದ ಅವರು, ಇಂಥ ಮೋಸಗಾರಿಕೆ ಫಲ ಕೊಡಲಾರದು ಎಂದರು. ಕಾನೂನು ಬಲ್ಲವರು ಕಾನೂನು ಉಲ್ಲಂಘಿಸಿಸುವುದು ವಿಷಾದನೀಯ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ಜನರನ್ನು ಬಲಿ ಪಡೆಯುವಂಥದ್ದು. ಕೋವಿಡ್ ಸಂದರ್ಭದಲ್ಲಿ ಇದು ಬೇಕಿತ್ತೇ ಎಂದು ಚಲನಚಿತ್ರ ನಟಿ ಮತ್ತು ಬಿಜೆಪಿ ಮಹಿಳಾ ಮೋರ್ಚಾ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಶ್ರುತಿ ಅವರು ಪ್ರಶ್ನಿಸಿದರು.
ಸಾಮಾಜಿಕ ಕಳಕಳಿ ಇಲ್ಲದ ಹೋರಾಟಕ್ಕೆ ಮಾನ್ಯತೆಯೂ ಇಲ್ಲ. ಬೆಲೆಯೂ ಇರುವುದಿಲ್ಲ. ಸಮಾಜಕ್ಕೆ, ದೇಶಕ್ಕೆ ಮತ್ತು ರಾಜ್ಯಕ್ಕೆ ಒಳಿತಾಗಬೇಕೆಂಬ ಯೋಚನೆ ಹೋರಾಟದ ಹಿಂದಿರಬೇಕು. ನಂತರ ಪಕ್ಷದ ಮತ್ತು ವ್ಯಕ್ತಿಯ ಲಾಭವನ್ನು ಪರಿಗಣಿಸಬೇಕಿತ್ತು ಎಂದು ನುಡಿದರು.
ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಚಿತ್ರರಂಗವೂ ಇದಕ್ಕೆ ಹೊರತಾಗಿಲ್ಲ. ಯಾರಿಗೂ ಲಾಕ್ ಡೌನ್ ಬೇಕಾಗಿಲ್ಲ. ಅದನ್ನು ತಡೆಯಬೇಕಾದ ನಾಯಕರು ಈ ರೀತಿ ಮಾಡುತ್ತಿರುವುದಕ್ಕೆ ಅವರ ಬಗ್ಗೆ ವಿಷಾದವಿದೆ. ಮೇಕೆದಾಟು ಯೋಜನೆ ಪ್ರತಿಯೊಬ್ಬ ಕನ್ನಡಿಗನ ಹೋರಾಟ ಆಗಬೇಕು. ಜಾಥಾ ಹೆಸರಿನಲ್ಲಿ ದಾರಿ ತಪ್ಪಿಸುವ ಪ್ರವೃತ್ತಿ ಸಲ್ಲದು ಎಂದರು.
ಇದು ಪಕ್ಷ ಕಟ್ಟುವ ಹೋರಾಟದಂತಿದೆ. ಕಾವೇರಿ ನಮ್ಮ ತಾಯಿ ಎಂದು ಭಾವನಾತ್ಮಕವಾಗಿ ಬೆರೆತುಹೋಗಿದ್ದೇವೆ. ಕಾವೇರಿ ವಿಚಾರ, ನಾಡಿನ ವಿಚಾರ ಬಂದಾಗ ಎಲ್ಲರೂ ಜೊತೆಗೂಡಬೇಕು. ಪಕ್ಷ ಕಟ್ಟುವ ಕೆಲಸವನ್ನು ಇಂಥ ಸಂದರ್ಭದಲ್ಲಿ ಮಾಡಬೇಡಿ. ಅಮಾಯಕರ ಜೀವವನ್ನು ಬಲಿ ಕೊಡದಿರಿ ಎಂದು ಮನವಿ ಮಾಡಿದರು.
ಈ ಜಾಥಾದ ಚಿತ್ರಕಥೆಯೇ ಸರಿಯಿಲ್ಲ. ಈ ವಿಳಂಬ ನೀತಿಗೆ ನೀವೇ ಕಾರಣ ಎಂದು ಗೊತ್ತಿದೆಯಲ್ಲವೇ? ಹಾಗಿದ್ದರೆ ಚಿತ್ರಕಥೆಯೇ ಫ್ಲಾಪ್ ಎಂದು ಅನಿಸುವುದಿಲ್ಲವೇ ಎಂದು ಪ್ರಶ್ನಿಸಿದರು. ಚಿತ್ರಕಥೆಯನ್ನು ತೆರೆಗೆ (ಬೀದಿಗೆ) ತರುವ ದಿನಾಂಕವೂ ಅಸಮರ್ಪಕ (ಫ್ಲಾಪ್) ಎಂದು ಅನಿಸುತ್ತಿಲ್ಲವೇ ಎಂದು ಕೇಳಿದರು. ಇಂಥ ನಾಟಕ- ಡ್ರಾಮಾ ಅಗತ್ಯವಿತ್ತೇ ಎಂದರು. ಮತ್ತೊಂದು ಆರ್ಥಿಕ ಸಂಕಷ್ಟ ತಪ್ಪಿಸಲು ಹೋರಾಟ ಮುಂದೂಡಬೇಕು ಎಂದು ಸಲಹೆ ನೀಡಿದರು.
0 Comments