ಮಧುಗಿರಿ : ದೇಶದ 73 ನೇ ಗಣರಾಜ್ಯೋತ್ಸವ ದಿನದಂದೇ ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವಾಗ ಡಾ.ಬಿ.ಆರ್.ಅಂಬೇಡ್ಕರ್ ಫೋಟೋವನ್ನು ತೆಗೆಸಿ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರವರ ಸೊಕ್ಕಿನ ವರ್ತನೆಯನ್ನು ವಿರೋಧಿಸಿ ಕರುನಾಡು ವಿಜಯ ಸೇನೆ ಸಂಘಟನೆ ಉಪ ವಿಭಾಗ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಉಪ ವಿಭಾಗ ಅಧಿಕಾರಿ ಸೋಮಪ್ಪ ಕಡಕೋಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಂಘಟನೆ ಅಧ್ಯಕ್ಷ ತಿಮ್ಮರಾಜು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಸಂವಿಧಾನವನ್ನು ದೇಶಕ್ಕೆ ಸಮರ್ಪಣೆ ಮಾಡಿಕೊಂಡ ದಿನದಂದೇ ಗಣರಾಜ್ಯೋತ್ಸವ ಧ್ವಜಾರೋಹಣದಲ್ಲಿ ಗಾಂಧಿಜಿಯವರ ಫೋಟೋ ಜೊತೆ ಇರಿಸಲಾಗಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿ ಸಂವಿಧಾನಕ್ಕೆ ಅಪಮಾನ ಮಾಡಿರುವುದನ್ನು ನೋಡಿದರೆ ಮಲ್ಲಿಕಾರ್ಜುನಗೌಡ ನ್ಯಾಯಾಧೀಶರ ಹುದ್ದೆಯಲ್ಲಿರಲು ನಾಲಾಯಕ್ ಎನ್ನುವುದು ಗೊತ್ತಾಗುತ್ತದೆ. ಕೂಡಲೆ ಇವರ ಮೇಲೆ ಶಿಸ್ತಿನ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಿ ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಉಪವಿಭಾಗ ಕಚೇರಿಗೆ ಆಗಮಿಸಿದ ಕರುನಾಡು ವಿಜಯ ಸೇನೆ ಸಂಘಟನೆ ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌರ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ನಗರ ಅಧ್ಯಕ್ಷ ರಾಜು ಮಾತನಾಡುತ್ತ ಸಂವಿಧಾನಬದ್ದವಾಗಿ ನ್ಯಾಯಾಧೀಶರ ಹುದ್ದೆಗೆ ನೇಮಕಗೊಂಡಿರುವ ಮಲ್ಲಿಕಾರ್ಜುನಗೌಡ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿರುವುದನ್ನು ಸಹಿಸಲು ಆಗುವುದಿಲ್ಲ. ಹಾಗಾಗಿ ಇವರ ವಿರುದ್ದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ.
ಗೌರವಾಧ್ಯಕ್ಷ ಲತಾ ನಾರಾಯಣ್. ಮಹಿಳಾ ಘಟಕ ಅಧ್ಯಕ್ಷ ಲತಾ ಗೋವಿಂದರಾಜು.ರಾಘವೇಂದ್ರ.ಬಾಬು.ರಾಜು. ಅಶೋಕ್. ವೆಂಕಟೇಶ್. ಸುಜಾತ. ಸವಿತಾ. ಕಾಂಚನ. ಭವ್ಯ. ರಾಮು. ದಾದಾಪೀರ್. ಇನ್ನು ಮುಂತಾದವರು ಹಾಜರಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ.
0 Comments