ಲೋಕಾಯುಕ್ತರಾಗಿದ್ದ ನ್ಯಾ. ಪಿ.ವಿಶ್ವನಾಥ ಶೆಟ್ಟಿಯವರ ಅಧಿಕಾರಾವಧಿ ಅಂತ್ಯಗೊಂಡು ಆರು ದಿನವಾದರೂ ನೂತನ ಲೋಕಾಯುಕ್ತರ ನೇಮಕ ಮಾಡದಿರುವುದಕ್ಕೆ ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಗದೀಶ್ ವಿ ಸದಂ, “ನ್ಯಾ. ವಿಶ್ವನಾಥ ಶೆಟ್ಟಿಯವರ ಅಧಿಕಾರಾವಧಿ ಅಂತ್ಯವಾಗುವ ಮುನ್ನವೇ ಉತ್ತರಾಧಿಕಾರಿಯನ್ನು ರಾಜ್ಯ ಸರ್ಕಾರ ನಿಗದಿಪಡಿಸಬೇಕಿತ್ತು. ಆದರೆ ಆ ಪ್ರಯತ್ನವನ್ನೇ ಸರ್ಕಾರ ಮಾಡಲಿಲ್ಲ. ಈಗ ಲೋಕಾಯುಕ್ತರು ನಿವೃತ್ತರಾಗಿ ಐದು ದಿನವಾದರೂ ಈ ಬಗ್ಗೆ ಸರ್ಕಾರದಲ್ಲಿ ಚಿಂತನೆ ನಡೆದಿಲ್ಲ. ಕಮಿಷನ್ ರೂಪದಲ್ಲಿ ತೆರಿಗೆ ಹಣವನ್ನು ಲೂಟಿ ಮಾಡುವುದು, ಎಲ್ಲ ಇಲಾಖೆಗಳಲ್ಲೂ ಹಗರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಲೋಕಾಯುಕ್ತ ಹುದ್ದೆ ಖಾಲಿಯಿರುವುದು ಆತಂಕಕಾರಿ ಬೆಳವಣಿಗೆ” ಎಂದು ಹೇಳಿದರು.
“ತಮ್ಮ ನಿಜಬಣ್ಣ ಬಯಲಾಗುತ್ತದೆ ಎಂಬ ಭಯದಿಂದ, ರಾಜ್ಯವನ್ನಾಳಿದ ಮೂರು ಪಕ್ಷಗಳ ಸರ್ಕಾರಗಳೂ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿವೆ. ಎರಡು ಉಪಲೋಕಾಯುಕ್ತ ಹುದ್ದೆಗಳ ಪೈಕಿ ಒಂದು ಖಾಲಿಯಾಗಿ ಒಂದು ವರ್ಷವಾದರೂ ಭರ್ತಿಯಾಗಿಲ್ಲ. ಲೋಕಾಯುಕ್ತ ಹುದ್ದೆಗೂ ಅದೇ ಗತಿ ಬರಬಾರದು. ಲೋಕಾಯುಕ್ತ ಹಾಗೂ ಉಪಲೋಕಾಯುಕ್ತ ಹುದ್ದೆಗಳಿಗೆ ಸಮರ್ಥರನ್ನು ಶೀಘ್ರವೇ ನೇಮಿಸಬೇಕು. ಹೀಗೆ ಎರಡೂ ಹುದ್ದೆಗಳಿಗೆ ಒಟ್ಟಿಗೆ ನೇಮಕಾತಿ ಪ್ರಕ್ರಿಯೆ ನಡೆಸುವುದರಿಂದ ಸಮಯ ಉಳಿತಾಯವಾಗಲಿದೆ” ಎಂದು ಜಗದೀಶ್ ವಿ ಸದಂ ಅಭಿಪ್ರಾಯ ವ್ಯಕ್ತಪಡಿಸಿದರು.
ಲೋಕಾಯುಕ್ತ ಸಂಸ್ಥೆಯನ್ನು ಬಲಿಷ್ಠಗೊಳಿಸುವುದಾಗಿ ಬಿಜೆಪಿಯು ಚುನಾವಣಾ ಪ್ರಣಾಳಿಕೆಯಲ್ಲೇ ಭರವಸೆ ನೀಡಿತ್ತು. ಆದರೆ ಅದಕ್ಕೆ ಸಂಪೂರ್ಣ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಲೋಕಾಯುಕ್ತ ಹುದ್ದೆಗೆ ಯಾರನ್ನೂ ನೇಮಿಸದಿರುವ ಮೂಲಕ ಸಂಸ್ಥೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡುವುದು ಸರ್ಕಾರದ ಉದ್ದೇಶ. ಆದರೆ ಇದಕ್ಕೆ ಆಮ್ ಆದ್ಮಿ ಪಾರ್ಟಿಯು ಅವಕಾಶ ನೀಡುವುದಿಲ್ಲ. ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸದಿದ್ದರೆ ಬೃಹತ್ ಹೋರಾಟ ಮಾಡಲಾಗುತ್ತದೆ ಎಂದು ಜಗದೀಶ್ ವಿ ಸದಂ ಎಚ್ಚರಿಕೆ ನೀಡಿದರು.
0 Comments