Ticker

6/recent/ticker-posts

Ad Code

Responsive Advertisement

BIG BREAKING : ವಾರಾಂತ್ಯದ ಲಾಕ್‍ಡೌನ್‍ ತೆಗೆದುಹಾಕುವ ಕುರಿತು ಶುಕ್ರವಾರ ಅಂತಿಮ ನಿರ್ಧಾರ : ಮುಖ್ಯಮಂತ್ರಿ ಬೊಮ್ಮಾಯಿ


ಬೆಂಗಳೂರು,ಜನವರಿ,19-ರಾಜ್ಯಾದ್ಯಂತ ಕೊರೋನಾ ಸೋಂಕು ಹರಡುತ್ತಿದ್ದರೂ ಸೋಂಕಿತರ ಪೈಕಿ 94 ರಷ್ಟು ಪ್ರಮಾಣದ ಜನ ಹೋಮ್ ಐಸೋಲೇಷನ್‍ ನಲ್ಲಿದ್ದಾರೆ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಈ ಹಿನ್ನೆಲೆಯಲ್ಲಿ ಈಗ ವಿಧಿಸಿರುವ ವಾರಾಂತ್ಯದ ಲಾಕ್‍ಡೌನ್‍ನ್ನು ತೆಗೆದುಹಾಕುವ ಕುರಿತು ಶುಕ್ರವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ಅದೇ ಕಾಲಕ್ಕೆ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಸಭೆ,ಸಮಾರಂಭಗಳನ್ನು ಪಕ್ಷದ ಶಾಸಕರು ಸೇರಿದಂತೆ ಯಾರೇ ನಡೆದುಕೊಂಡರೂ ಅವರ ವಿರುದ್ಧ ಮೊಕದ್ದಮೆ ಹೂಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಿಸಿದ್ದಾರೆ.

ಇಂದು ಆರ್.ಟಿ. ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಫೆಬ್ರವರಿ ಆರಂಭದ ವೇಳೆಗೆ ಕೊರೋನಾ ಸೋಂಕಿತರ ಸಂಖ್ಯೆ ಗರಿಷ್ಟ ಮಟ್ಟ ತಲುಪಲಿದ್ದು ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ನುಡಿದರು.

ಜಗತ್ತಿನ ಎಲ್ಲೆಡೆ ಮೂರನೇ ಅಲೆ ಬೀರಿದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮಲ್ಲಿ ಫೆಬ್ರವರಿ ಆರಂಭದ ವೇಳೆಗೆ ಕೋವಿಡ್ ಸೋಂಕಿತರ ಸಂಖ್ಯೆ ಗರಿಷ್ಟ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

ಹೀಗೆ ಕೊರೋನಾ ಸೋಂಕು ವ್ಯಾಪಕವಾಗಿದ್ದರೂ ಆಸ್ಪತ್ರೆಗಳ ಮೇಲೆ ಹೊರೆ  ಬೀಳುತ್ತಿಲ್ಲ ಎಂದ ಅವರು ಬಹುತೇಕ ಸೋಂಕಿತರು ಮನೆಯಲ್ಲಿದ್ದೇ ಗುಣಮುಖರಾಗುತ್ತಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಧಿಸಿರುವ ವಾರಾಂತ್ಯದ ಲಾಕ್‍ಡೌನ್ ಮತ್ತು ಕರ್ಪ್ಯೂಗಳನ್ನು ತೆಗೆದುಹಾಕುವಂತೆ ಎಲ್ಲ ಪಕ್ಷಗಳ ಶಾಸಕರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಸಾಕು ಎನ್ನುವ ಪರಿಸ್ಥಿತಿ ಇರುವಾಗ ಹೆಚ್ಚಿನ ನಿರ್ಭಂಧಗಳು ಬೇಡ ಎಂಬುದು ಅವರ ಅಭಿಪ್ರಾಯವಾಗಿದೆ ಎಂದರು.

ಕೋವಿಡ್ ಸೋಂಕಿತನಾಗಿದ್ದ ನಾನೂ ಇದೀಗ ಗುಣಮುಖನಾಗಿದ್ದು ನೆಗೆಟೀವ್ ರಿಪೋರ್ಟ್ ಬಂದಿದೆ.ಹೀಗಾಗಿ ಎಂದಿನಂತೆ ಕಾರ್ಯ ನಿರ್ವಹಿಸಲು ಸಜ್ಜಾಗಿದ್ದೇನೆ ಎಂದರು.

ಹೀಗಾಗಿ ಶುಕ್ರವಾರ ತಜ್ಞರು ನೀಡುವ ಶಿಫಾರಸುಗಳನ್ನು ಪರಿಶೀಲಿಸಿ ನಿರ್ಭಂಧ ಸಡಿಲಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಲುವುದಾಗಿ ಹೇಳಿದರು.

ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಬಿಜೆಪಿ ನಾಯಕರು,ಶಾಸಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷ ನೀಡಿರುವ ದೂರಿನ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು:ಕಾಂಗ್ರೆಸ್‍ನವರ ದೂರಿನ ಅವಶ್ಯಕತೆಯೇ ಇಲ್ಲ,ನಾವೇ ಸ್ವಯಂಪ್ರೇರಿತವಾಗಿ ಈ ಕುರಿತು ಕ್ರಮ ಕೈಗೊಂಡಿದ್ದೇವೆ ಎಂದರು.

 ಈ ಬಗ್ಗೆ ಅದಾಗಲೇ ಮುಖ್ಯಕಾರ್ಯದರ್ಶಿಗಳಿಗೆ ಆದೇಶ ನೀಡಿ:ಯಾರೇ ನಿಯಮ ಉಲ್ಲಂಘಿಸಿದ್ದರೂ ಅಂತವರ ಮೇಲೆ ಕ್ರಮಕೈಗೊಳ್ಳಿ,ಮೊಕದ್ದಮೆ ದಾಖಲಿಸಿ ಎಂದಿರುವುದಾಗಿ ವಿವರ ನೀಡಿದರು.

ತಪ್ಪು ನಮ್ಮ ಪಕ್ಷದವರೇ ಮಾಡಿರಲಿ,ಇನ್ಯಾರೇ ಮಾಡಿರಲಿ,ಕಠಿಣ ಕ್ರಮ ಅನಿವಾರ್ಯ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಕಡಿಮೆ ಇರುವ ಜಿಲ್ಲೆಗಳಿಗೆ ಹೆಚ್ಚಿನ ಲಸಿಕೆಗಳನ್ನು ಕಳಿಸಿಕೊಡಲು ಆದೇಶ ನೀಡಲಾಗಿದೆ ಎಂದ ಅವರು,ಈಗ ಸೋಂಕಿತರ ಪೈಕಿ ಶೇಕಡಾ ತೊಂಭತ್ನಾಲ್ಕರಷ್ಟು ಜನ ಹೋಮ್ ಕ್ವಾರಂಟೈನ್‍ನಲ್ಲಿರುವುದರಿಂದ ಅವರಿಗೆ ಮೆಡಿಕಲ್ ಕಿಟ್‍ಗಳನ್ನು ಕೊಡಬೇಕು.ಮತ್ತು ಅವರ ಮೇಲೆ ನಿಗಾಇರಿಸಬೇಕು ಎಂದು ಸೂಚಿಸಲಾಗಿದೆ ಎಂದು ವಿವರಿಸಿದರು.

ಈ ಮಧ್ಯೆ ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಯೋಜನೆಯನ್ನು ಪುನರಾರಂಭಿಸುತ್ತಿರುವುದಾಗಿ ನುಡಿದ ಅವರು,ಕೋವಿಡ್ ಕಾರ್ಯಕರ್ತರಿಗೆ ಮತ್ತು ಅರವತ್ತು ವರ್ಷ ಮೀರಿದವರಿಗೆ ಬೂಸ್ಟರ್ ಡೋಸ್ ಕೊಡುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿರುವುದಾಗಿ ಅವರು ಹೇಳಿದರು.

 ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಾರ್ಯ ಸಂಕ್ರಾಂತಿಯ ನಂತರ ನಡೆಯಲಿದೆಯೇ ಎಂಬ ಮಾತಿಗೆ ಉತ್ತರಿಸಿದ ಅವರು,ಈ ಸಂಬಂಧ ಸಾರ್ವಜನಿಕವಾಗಿ ಚರ್ಚಿಸಲು ನಾನು ಬಯಸುವುದಿಲ್ಲ ಎಂದು ನುಡಿದರು.   


Post a Comment

0 Comments

Ad Code

Responsive Advertisement