ಬೆಂಗಳೂರಿನ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‌ಗೆ ಕೇವಲ ಏಳು ದಿನಗಳ ಅವಕಾಶ ನೀಡಿರುವುದರ ಹಿಂದೆ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡುವ ಉದ್ದೇಶವಿದೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.
ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, “ಸುಮಾರು 1,700 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಟೆಂಡರ್ ಕರೆಯದೇ 4ಜಿ ವಿನಾಯಿತಿ ಮೂಲಕ ಕಾರ್ಯರೂಪಕ್ಕೆ ತರಲು ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ಎಎಪಿ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಈಗ ತರಾತುರಿಯಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಕೆಗೆ ಟೆಂಡರ್ ಕರೆಯಲಾಗಿದೆ. ಜನವರಿ 19ರಂದು ಆಹ್ವಾನ ನೀಡಲಾಗಿದ್ದು, 27ರ ತನಕ ಅವಕಾಶ ನೀಡಲಾಗಿದೆ. ಈ 7 ದಿನಗಳಲ್ಲಿ 3 ದಿನಗಳು ರಜಾ ದಿನಗಳಾಗಿದ್ದು, ಗುತ್ತಿಗೆದಾರರಿಗೆ ಕೇವಲ 4 ದಿನಗಳು ಮಾತ್ರ ಅವಕಾಶ ಸಿಗಲಿದೆ. ಪೂರ್ವನಿರ್ಧರಿತ ಗುತ್ತಿಗೆದಾರರಿಗೆ ಕಾಮಗಾರಿ ವಹಿಸುವ ಉದ್ದೇಶದಿಂದಲೇ ಇಷ್ಟು ಕಡಿಮೆ ಅವಧಿಯನ್ನು ನೀಡಲಾಗುತ್ತಿದೆ” ಎಂದು ಹೇಳಿದರು.
“ಕಾನೂನಿನ ಪ್ರಕಾರ 5 ಲಕ್ಷಕ್ಕೂ ಅಧಿಕ ಮೊತ್ತದ ಟೆಂಡರ್‌ಗಳಿಗೆ ಒಂದು ತಿಂಗಳಾದರೂ ಕಾಲಾವಕಾಶ ನೀಡಬೇಕು. ಆಗ ಮಾತ್ರ ಯೋಗ್ಯ ಗುತ್ತಿಗೆದಾರರು ಆಯ್ಕೆಯಾಗಿ, ಗುಣಮಟ್ಟದ ಕಾಮಗಾರಿ ನಡೆಯುತ್ತದೆ. ರಾಜರಾಜೇಶ್ವರಿ ನಗರದಲ್ಲಿ 27.6 ಕೋಟಿ, ದಾಸರಹಳ್ಳಿ 36 ಕೋಟಿ, ಯಲಹಂಕ 39 ಕೋಟಿ, ಬೆಂಗಳೂರು ದಕ್ಷಿಣ 12.8 ಕೋಟಿ ಹಾಗೂ ವೃಷಭಾವತಿ ಕಾಲುವೆ ಅಭಿವೃದ್ಧಿಗೆ 90 ಕೋಟಿ ಮೊತ್ತದ ಗುತ್ತಿಗೆಯನ್ನು ತರಾತುರಿಯಲ್ಲಿ ಮಾಡುತ್ತಿರುವುದರ ಹಿಂದೆ ಅಲ್ಲಿನ ಶಾಸಕರುಗಳ 40% ದಂಧೆಯಿದೆ. ಇವು ತುರ್ತು ಆಗಬೇಕಾದ ಕಾಮಗಾರಿಗಳಲ್ಲದಿದ್ದರೂ ಕೇವಲ ಒಂದು ವಾರದ ಅವಕಾಶ ನೀಡಿರುವುದು ಖಂಡನೀಯ” ಎಂದು ಮೋಹನ್ ದಾಸರಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜಕೀಯ ಚಟುವಟಿಕೆಗಳ ಮುಖ್ಯಸ್ಥರಾದ ಚನ್ನಪ್ಪಗೌಡ ನೆಲ್ಲೂರು ಮಾತನಾಡಿ, “ಡಿಪಿಆರ್ ಜವಾಬ್ದಾರಿಯುತ ಕೆಲಸವಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳದೇ ಟೆಂಡರ್ ನೀಡುತ್ತಿರುವುದರ ಹಿಂದೆ ಪ್ರಭಾವಿಗಳ ಒತ್ತುವರಿಗಳನ್ನು ಪಕ್ಕಕ್ಕೆ ಇಟ್ಟು ರಾಜಕಾಲುವೆಗಳ ದಿಕ್ಕನ್ನೇ ಬದಲಾಯಿಸುವ ಹುನ್ನಾರವಿದೆ. ಕಳಪೆ ಕಾಮಗಾರಿ ಮೂಲಕ ಬಿಬಿಎಂಪಿ ಚುನಾವಣೆಗೆ ಹಣ ಸಂಗ್ರಹಿಸಲು ಬಿಜೆಪಿ ಈ ರೀತಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಎಲ್ಲೆಲ್ಲಿ ಒತ್ತುವರಿಯಾಗಿದೆಯೆಂದು ಪರಿಶೀಲನೆ ನಡೆಸಬೇಕು. ಡಿಪಿಆರ್ ಸಾರ್ವಜನಿಕರ ಗಮನಕ್ಕೆ ಬರುವಂತೆ ಮಾಡಬೇಕು. ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಲು ಅವಕಾಶ ನೀಡಬೇಕು” ಎಂದು ಹೇಳಿದರು.
ಎಎಪಿಯ ವಕ್ತಾರರಾದ ಉಷಾ ಮೋಹನ್ರವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ADVT.:
0 Comments