ಚಿಕ್ಕಬಳ್ಳಾಪುರ, ಡಿ. 24: ಹೊಸ ವರ್ಷವನ್ನು ಸ್ವಾಗತಿಸಲು ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ತೆರಳಿ ಸಂಭ್ರಮಾಚರಣೆ ನಡೆಸಿ ಮೋಜು, ಮಸ್ತಿಯಲ್ಲಿ ತೊಡಗುವ ಇಚ್ಚೆ ಹೊಂದಿದ್ದವರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ತಣ್ಣೀರು ಎರಚಿದೆ.
ಸಾಮಾನ್ಯವಾಗಿ ಜಿಲ್ಲಾಡಳಿತ ವರ್ಷದ ಕೊನೆಯ ದಿನ ಅಂದರೆ ೩೦ ಅಥವಾ ೩೧ರ ಸಂಜೆ ೩ ರಿಂದ ಹೊಸ ವರ್ಷದ ಮೊದಲ ಜನವರಿ ಅಂದರೆ ಜ. ೧ರ ಬೆಳಗ್ಗೆ ೬ ಗಂಟೆಯವರೆಗೂ ಮಾತ್ರ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸುತ್ತಿದ್ದ ಜಿಲ್ಲಾಡಳಿತವು ಒಮಿಕ್ರಾನ್ ಆತಂಕದ ಹಿನ್ನಲೆಯಲ್ಲಿ ಜ. ೧ರಂದು ಕೂಡ ಸಂಪೂರ್ಣ ಗಿರಿಧಾಮವನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ.
ಇದರಿಂದ ನಂದಿಗಿರಿಧಾಮದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಯೋಜನೆ ರೂಪಿಸಿಕೊಂಡಿದ್ದವರು, ಪ್ರವಾಸಕ್ಕೆ ಬುಕ್ಕಿಂಗ್, ರೆಸಾರ್ಟ್ ಬುಕ್ಕಿಂಗ್ ಮಾಡಿದವರು ತಮ್ಮ ಯೋಜನೆ ಬದಲಿಸಿಕೊಳ್ಳುವುದು ಅನಿರ್ವಾಯವಾಗಿದೆ.
೨೦೨೨ರ ಜನವರಿ ೧ರ ಹೊಸ ವರ್ಷದ ದಿನಾಚರಣೆಯ ಸಂಬ0ಧವಾಗಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳ ನಂದಿ ಬೆಟ್ಟಕ್ಕೆ ರಾಜ್ಯದ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇರುವುದರಿಂದ ಒಮಿಕ್ರಾನ್ ಹರಡುವ ಹಿನ್ನೆಲೆಯಲ್ಲಿ ಡಿ.೩೧ ರ ಮಧ್ಯರಾತ್ರಿ ಹಾಗೂ ೨೦೨೨ರ ಜನವರಿ ೧ ರಂದು ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಡಿ. ೩೦ರ ಸಂಜೆ ೬ ಗಂಟೆಯಿ0ದ ೨೦೨೨ರ ಜನವರಿ ೨ರ ಬೆಳಗ್ಗೆ ೬ ಗಂಟೆಯವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
Varthajala Daily, Bengaluru
0 Comments