Ticker

6/recent/ticker-posts

Ad Code

Responsive Advertisement

ಇದು ಡಬಲ್ ಇಂಜಿನ್ ಸರ್ಕಾರವಲ್ಲ, ಡಮ್ಮಿ ಸರ್ಕಾರ: ಪೃಥ್ವಿ ರೆಡ್ಡಿ

ಬಸವರಾಜ ಬೊಮ್ಮಾಯಿ ನೇತೃತ್ವದ ಜಿಜೆಪಿ ಸರ್ಕಾರ ಕೇವಲ ಪರಿಹಾರ ಕೊಡುವುದರಲ್ಲಿ, ಆಡಳಿತದಲ್ಲಿ ಮಾತ್ರ ಸೋತಿಲ್ಲ, ಬದಲಿಗೆ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿಹೋಗಿದೆ. ಅಕ್ರಮ ಮತ್ತು ಅನಾಚಾರಗಳಲ್ಲಿ ಮಿಂದೆದ್ದಿದೆ. ತಾವು ಮಾಡಿರುವ ಅಚಾತುರ್ಯಗಳಿಗೆ ಜವಾಬು ಕೊಡಲಾಗದೇ, ಜನರ ದೃಷ್ಟಿಯನ್ನು ಬೇರೆಡೆ ಸೆಳೆಯಲು ಕುತಂತ್ರಗಳನ್ನು ಅನುಸರಿಸುತ್ತಿದೆ ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿಯವರು ಆಕ್ರೋಶ ವ್ಯಕ್ತಪಡಿಸಿದರು.

“ಜನರ ದೃಷ್ಟಿಯನ್ನು ಬೇರೆಡೆ ಸೆಳೆಯಲು ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾನೂನು ತಂದಿರುವುದು. ಇಂಥದ್ದೇ ಬಿಲ್‌ಗಳನ್ನು ತಾನು ಅಧಿಕಾರದಲ್ಲಿರುವ ಇತರೆ ರಾಜ್ಯಗಳಲ್ಲಿ ಬಿಜೆಪಿ ತಂದಿತ್ತು. ಆದರೆ ಅಲ್ಲಿನ ನ್ಯಾಯಾಲಯಗಳು ಛೀಮಾರಿ ಹಾಕಿದ್ದವು, ಅದನ್ನು ತಡೆಹಿಡಿದಿದ್ದವು. ಜನಾಂಗಗಳ ಮಧ್ಯೆ ವಿಷಬೀಜ ಬಿತ್ತುತ್ತಾ ವೈಷಮ್ಯ ಹೆಚ್ಚಿಸುವುದು ಬಿಟ್ಟರೆ, ಇದಕ್ಕೆ ಬೇರೆ ಕಾರಣವೇ ಇಲ್ಲ. ಗುಜರಾತ್ ನ್ಯಾಯಾಲಯವು ಈ ಕಾಯ್ದೆಯನ್ನು ತಡೆದಿತ್ತು, ಅದರ ಅನುಷ್ಠಾನಕ್ಕೆ ಬಿಡದೇ ಕಾರಣಗಳನ್ನು ನೀಡಿತ್ತು. ನಮ್ಮ ಸಂವಿಧಾನವೇ ಹೇಳುವ ಪ್ರಕಾರ ಒಬ್ಬ ಪ್ರಜೆಗೆ ತನ್ನಿಷ್ಟದ ಧರ್ಮವನ್ನು ಅನುಸರಿಸುವ ಹಕ್ಕು ಇದೆ. ಅಲ್ಲದೆ ಬಲವಂತದ ಮತಾಂತರ ತಡೆಯಲು ಈಗಾಗಲೇ ಕಾನೂನು ದೇಶದಲ್ಲಿ ಇದೆ. ಅದನ್ನು ಜಾರಿ ಮಾಡಲು ಇಚ್ಛಾಶಕ್ತಿ ಇರಬೇಕಷ್ಟೇ” ಎಂದು ಪೃಥ್ವಿ ರೆಡ್ಡಿ ಹೇಳಿದರು.

“ಇಲ್ಲಿಯವರೆಗೂ ಬಲವಂತವಾಗಿ ಮತಾಂತರಗೊಂಡಿರುವ ಒಂದೇ ಒಂದು ಪ್ರಕರಣದ ಉದಾಹರಣೆಯು ಸರಕಾದ ಮುಂದಿಲ್ಲ (ಶಾಸಕ ಗೂಳಿಹಟ್ಟಿ ಶೇಖರ್ ರದ್ದು ಹೊರತುಪಡಿಸಿ). ಸರ್ಕಾರವೇ ತಹಶಿಲ್ದಾರರ ಮೂಲಕ ನಡೆಸಿದ ವಿಚಾರಣೆಯಲ್ಲೂ ಬಲವಂತ ಮತಾಂತರ ಆಗಿದೆ ಎಂದು ಸಾಬೀತಾಗಿಲ್ಲ. ಅದನ್ನು ಒಪ್ಪದ ಬಿಜೆಪಿ ಸರ್ಕಾರ ಆ ತಹಶಿಲ್ದಾರರನ್ನೇ ವರ್ಗಾವಣೆ ಮಾಡಿತ್ತು. ಇದರಿಂದ ಸರ್ಕಾರದ ಆಲೋಚನೆ ಸ್ಪಷ್ಟವಾಗಿ ಕಾಣಿತ್ತಿದೆ. ಇವರಿಗೆ ಶೋಷಣೆ ತಡೆಯುವುದು ಬೇಕಿಲ್ಲ, ಮತಾಂತರ ನಿಲ್ಲಿಸುವುದು ಬೇಕಿಲ್ಲ. ಬದಲಾಗಿ ತಮ್ಮಿಷ್ಟದ ಧರ್ಮಕ್ಕೆ ಮತಾಂತರ ಆದವರನ್ನೂ ಶಿಕ್ಷಿಸಲು ಅಸ್ತ್ರವೊಂದು ಬೇಕಷ್ಟೇ. ಇದರಿಂದ ಧರ್ಮಗಳ ನಡುವೆ ಘರ್ಷಣೆಗಳನ್ನು ಸೃಷ್ಟಿಸಲು ಪ್ರೋತ್ಸಾಹ ನೀಡಿದಂತಾಗಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

ನಮ್ಮ ದುರದೃಷ್ಟಕ್ಕೆ, ಪ್ರಮುಖ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಚರ್ಚೆ ಮಾಡಲು ಅನೇಕ ಜಟಿಲ ಸಮಸ್ಯೆಗಳು ರಾಜ್ಯದಲ್ಲಿವೆ.

- 40% ಕಮಿಷನ್ ಕೊಡಬೇಕಾಗಿದೆ ಎಂದು ಕಾಂಟ್ರಾಕ್ಟರ್‌ಗಳು ರಾಜ್ಯದ ಶಾಸಕರು ಮಂತ್ರಿಗಳ ವಿರುದ್ಧ ಪ್ರಧಾನಿಗಳಿಗೇ ಪತ್ರ ಬರೆದಿದ್ದಾರೆ.

- ಭೂ ಹಗರಣದಲ್ಲಿ ಬಡವರ ಜಮೀನನ್ನು ಕಬ್ಜ ಮಾಡಿರುವ ಬಿಜೆಪಿಯ ಪ್ರಭಾವಿ ಮಂತ್ರಿ ಭೈರತಿ ಬಸವರಾಜ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವಿದೆ

- ಬೆಲೆ ಏರಿಕೆ ಮತ್ತು ರೈತರ ಸಮಸ್ಯೆ

- ಪ್ರವಾಹ ಮತ್ತು ಬರದ ಪರಿಹಾರಗಳು

- ರಸ್ತೆಗುಂಡಿಗಳಿಂದ ಪ್ರಾಣ ಕಳಿದುಕೊಂಡವರ ಬಗ್ಗೆ

- ಸರ್ಕಾರಿ ಶಾಲೆಗಳ ದುರವಸ್ಥೆ ಮತ್ತು ಖಾಸಗಿ ಶಾಲೆಗಳ ದರ್ಬಾರ್ 

- ಸರ್ಕಾರಿ ಆಸ್ಪತ್ರೆಗಳ ಶೋಚನೀಯ ಸ್ಥಿತಿಗಳು

ಇನ್ನಿತರ ನಿಜವಾದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ಮಾಡುವುದ ಬಿಟ್ಟು ಅನಗತ್ಯ ಬಿಲ್ ತರುವುದರ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಪೃಥ್ವಿ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಕ್ಷವು ರಾಜ್ಯದ ಸಮಸ್ತ ಜನರ ಪರವಾಗಿ ಆಗ್ರಹಿಸುವುದೇನೆಂದರೆ, ಸರ್ಕಾರವು ಜಟಿಲ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆದು ಮೋಸ ಮಾಡುವುದನ್ನು ಬಿಟ್ಟು, ನಾಡಿನ ಕಷ್ಟಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳಬೇಕು ಮತ್ತು ಜನರ ಕಷ್ಟಕ್ಕೆ ಸ್ಪಂದಿಸಲು ಈಗಲಾದರೂ ಶುರುಮಾಡಬೇಕು ಎಂದು ಪೃಥ್ವಿ ರೆಡ್ಡಿ ಹೇಳಿದರು.

Post a Comment

0 Comments

Ad Code

Responsive Advertisement