ಡಿ.6, ಪಾಟ್ನಾ: ಇಂದು ಕೋವಿಡ್ಗೆ ಲಸಿಕೆ ಪಡೆದಂತಹ ವ್ಯಕ್ತಿಗಳ ಹೆಸರಲ್ಲಿ ಭಾರಿ ಗೋಲ್ ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಅಮಿತ್ ಶಾ, ನರೇಂದ್ರ ಮೋದಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಚೋಪ್ರಾ ಇವರೆಲ್ಲಾ ಸರ್ಕಾರಿ ಕಾರ್ಯಕ್ರಮಕ್ಕೆ ಬಂದ ಗಣ್ಯ ಅತಿಥಿಗಳ ಹೆಸರಲ್ಲ. ಹೌದು ಬಿಹಾರದ ಅರ್ವಾಲ್ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆದವರ ದಾಖಲೀಕರಣದಲ್ಲಿ ಭಾರಿ ಮೋಸ ನಡೆದಿದೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬ0ಧಿಸಿದ0ತೆ ಇಬ್ಬರು ಕಂಪ್ಯೂಟರ್ ಆಪರೇಟರ್ಗಳನ್ನು ಮತ್ತಿರರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಅರ್ವಾಲ್ ಜಿಲ್ಲೆಯ ಕರ್ಪಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ ಕೋವಿಡ್ ಲಸಿಕೆ ಪಡೆದವರ ಪಟ್ಟಿಯನ್ನು ಇತ್ತೀಚೆಗೆ ಲಸಿಕಾ ಪೋರ್ಟಲ್ಗೆ ಹಾಕಲಾಗಿತ್ತು. ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸೋನಿಯಾ ಗಾಂಧಿ ಹಾಗೂ ನಟಿ ಪ್ರಿಯಾಂಕಾ ಚೋಪಾ. ಅವರ ಹೆಸರನ್ನು ಒಂದಲ್ಲ ಎರಡೆರಡು ಬಾರಿ ನಮೂದಿಸಲಾಗಿದೆ. ಇದನ್ನು ಇತ್ತೀಚೆಗೆ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿರುವುದು ತಿಳಿದುಬಂದಿದೆ.
ಈ ಪಟ್ಟಿಯಲ್ಲಿ ಗಣ್ಯ ವ್ಯಕ್ತಿಗಳನ್ನು ತೋರಿಸುವ ವಿಡಿಯೊಗಳು ವೈರಲ್ ಆದ ನಂತರ ಮುಜುಗರಕ್ಕೊಳಗಾದ ಸ್ಥಳೀಯ ಆಡಳಿತವು ಪ್ರಕರಣದ ತನಿಖೆಗೆ ಆದೇಶಿಸಿದೆ. ಘಟನೆಗೆ ಸಂಬ0ಧಿಸಿದ0ತೆ ಪ್ರತಿಕ್ರಿಯಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಜೆ ಪ್ರಿಯದರ್ಶಿನಿ ಡಾಟಾ ವಂಚನೆ ಹೇಗೆ ಮತ್ತು ಯಾರ ನಿರ್ದೇಶನದ ಮೇಲೆ ನಡೆದಿದೆ ಎಂಬುದನ್ನು ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇದೊಂದು ತುಂಬಾ ಗಂಭೀರವಾದ ಪ್ರಕರಣ ಆಗಿದ್ದು, ನಾವು ಕೋವಿಡ್ ಪರೀಕ್ಷೆ ಮತ್ತು ಲಸಿಕೆಯನ್ನು ಹೆಚ್ಚಿಸಲು ತುಂಬಾ ಪ್ರಯತ್ನಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಈ ರೀತಿ ಅಕ್ರಮಗಳು ನಡೆಯುತ್ತಿವೆ. ಇದು ಕೇವಲ ಕರ್ಪಿಯಲ್ಲಿ ಮಾತ್ರ ನಡೆದಿಲ್ಲ, ಇಡೀ ರಾಜ್ಯದಲ್ಲಿ ನಡೆದಿರುಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಪ್ರಕರಣ ಸಂಬ0ಧ ‘ಎಫ್ ಐ ಆರ್’ ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇತ್ತೀಚೆಗೆ ತಪಾಸಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಘಟನೆ ಸಂಬ0ಧ ಇಬ್ಬರು ಆಪರೇಟರ್ಗಳನ್ನು ತೆಗೆದು ಹಾಕಲಾಗಿದೆ. ಆದರೆ ಇತರರನ್ನು ಸಹ ತನಿಖೆ ಮಾಡಬೇಕು, ಒಂದು ವೇಳೆ ತನಿಖೆಯಲ್ಲಿ ಹಗರಣ ನಡೆದಿರುವುದ ಕಂಡುಬ0ದರೆ ಅವರ ವಿರುಧ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು. ನಾನು ಜಿಲ್ಲಾಧಿಕಾರಿ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ಯಾವುದೇ ದೋಷಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇತರ ಆಸ್ಪತ್ರೆಗಳ ದತ್ತಾಂಶವನ್ನು ಸಹ ನೋಡುವಂತೆ ಕೇಳಿದ್ದೇನೆ. ಒಂದು ವೇಳೆ ಈ ಮಾಹಿತಿಯಲ್ಲಿ ದೋಷವಿದ್ದರೆ ಆರೋಪಿಗಳನ್ನು ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು ಎಂದು ಪ್ರಿಯದರ್ಶಿನಿ ಹೇಳಿದರು.
ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಈ ವಿಷಯವು ತಮ್ಮ ಇಲಾಖೆಯ ಮುಂದೆ ಬಂದ ತಕ್ಷಣ, ಡೇಟಾ ಎಂಟ್ರಿಯನ್ನು ವಹಿಸಿಕೊಟ್ಟ ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳನ್ನು ವಜಾಗೊಳಿಸಲಾಗಿದೆ ಎಂದು ಹೇಳಿದರು. ಅಲ್ಲದೇ ಪಾಟ್ನಾದಲ್ಲಿಯೂ ಸಹ ಡಾಟಾ ವಂಚನೆಯ ಮತ್ತೊಂದು ಪ್ರಕರಣ ಬಯಲಾಗಿದೆ. ಇದರಲ್ಲಿ ತಮ್ಮ ಎರಡನೇ ಡೋಸ್ ಸ್ವೀಕರಿಸಲು ಲಸಿಕಾ ಕೇಂದ್ರಕ್ಕೆ ಹೋದ ಜನರಿಗೆ ಅಲ್ಲಿ ಈಗಾಗಲೇ ಎರಡೂ ಡೋಸ್ಗಳನ್ನು ತಾವು ಪಡೆದಿದ್ದೀರಿ ಎಂದು ಹೇಳಿ ವಾಪಸ್ ಕಳುಹಿಸಿದ್ದರೆನ್ನಲಾಗಿದೆ. ಈ ವಿಚಾರದ ಬಗ್ಗೆಯೂ ಸಚಿವರು ಪ್ರಶ್ನಿಸಿದ್ದು ತನಿಖೆಗೆ ಆದೇಶಿಸಿದ್ದಾರೆ. ಇವು ತಾಂತ್ರಿಕ ವಿಷಯಗಳು, ಈ ವ್ಯವಸ್ಥೆಯಲ್ಲಿ ದೋಷಗಳಿಗೆ ಅವಕಾಶ ಇಲ್ಲ, ನೀವು ತಪ್ಪು ಮಾಡಿದರೆ, ನೀವು ಕ್ರಮ ಎದುರಿಸಬೇಕಾಗುತ್ತದೆ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Varthajala Daily, Bengaluru
0 Comments