ದೊದ್ದಬಳ್ಳಾಪುರ, ಡಿ ೧೮: ಆರ್ ಎಲ್ ಜಾಲಪ್ಪ ಒಬ್ಬ ಧೀಮಂತ ನಾಯಕ. ನಾನು ಕಾಂಗ್ರೆಸ್ ಪಕ್ಷ ಸೇರಲು ಅವರೇ ಕಾರಣ. ನೀನು ಸಿಎಂ ಆಗಲೇಬೇಕು ಎಂದು ನನ್ನನ್ನು ಕಾಂಗ್ರೆಸ್ಗೆ ಸೇರಿಸಿದ್ರು. ನಾನು ಸಿಎಂ ಆದಾಗ, ಬಡವರ ಬಗ್ಗೆ ಕಾಳಜಿ ವಹಿಸು ಎಂದು ನನಗೆ ಕಿವಿಮಾತೂ ಹೇಳಿದ್ರು” ಎಂದು ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಹೇಳಿದರು.
ಅಹಿಂದ ಹುಟ್ಟುಹಾಕಿದ್ದೇ ಜಾಲಪ್ಪ ಎಂದ ಸಿದ್ದರಾಮಯ್ಯ. ಸಿದ್ದರಾಮಯ್ಯ ಸಿಎಂ ಆಗಲು ಕಾರಣವಾಗಿದ್ದು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಹೋರಾಟ. ಜೆಡಿಎಸ್ನಲ್ಲಿದ್ದಾಗಲೇ ಅವರು ಅಹಿಂದ ಸಮಾವೇಶ ರೂಪಿಸಿದ್ದರು. ಅಲ್ಲಿಂದ ಕಾಂಗ್ರೆಸ್ಗೆ ಬಂದಾಗ ಅಹಿಂದವೇ ಅವರಿಗೆ ಅಸ್ತ್ರವಾಯಿತು. ಮುಂದೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನಾದೇಶ ಸಿಕ್ಕಿತು. ಇಂದು ಜಾಲಪ್ಪ ಅಂತ್ಯಸ0ಸ್ಕಾರದ ವೇಳೆ ಮಾತನಾಡುತ್ತಾ ಈ ವಿಚಾರ ಎತ್ತಿದ ಸಿದ್ದರಾಮಯ್ಯ, ಅಹಿಂದ ಹೋರಾಟ ಹುಟ್ಟುಹಾಕಿದ್ದೇ ಆರ್ ಎಲ್ ಜಾಲಪ್ಪ ಎಂಬ ಸಂಗತಿಯನ್ನ ತಿಳಿಸಿದರು.
“ಅಹಿಂದ ಹುಟ್ಟುಹಾಕಿದ್ದೇ ಆರ್. ಎಲ್. ಜಾಲಪ್ಪ. ಕೋಲಾರದಲ್ಲಿ ಮೊದಲ ಸಮಾವೇಶ ಮಾಡಿದೆವು ಜಾಲಪ್ಪ ಅವರು ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು ಎಂಬ ಆಶಯ ಹೊಂದಿದ್ದವರು. ಯಾವುದನ್ನೇ ಆಗಲಿ ನೇರವಾಗಿ ಹೇಳುತ್ತಿದ್ದರು” ಎಂದು ಅಗಲಿದ ಧೀಮಂತ ಕಾಂಗ್ರೆಸ್ ನಾಯಕನಿಗೆ ಸಿದ್ದರಾಮಯ್ಯ ಗುಣಗಾನ ಮಾಡಿದರು.
ನನ್ನ ಶ್ರೇಯಸ್ಸು ಬಯಸುತ್ತಿದ್ದರು. ಆರ್ ಎಲ್ ಜಾಲಪ್ಪ ಅವರು ಬಡವರು, ದಲಿತರು, ಹಿಂದುಳಿದವರ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದರು. ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ನನಗಿಂತ ೨೦ ವರ್ಷ ಹಿರಿಯರಾಗಿದ್ದ ಅವರು ಸದಾ ನನ್ನ ಶ್ರೇಯಸ್ಸು ಬಯಸುತ್ತಿದ್ದರು. ದೇವೇಗೌಡ ಸಿಎಂ ಆದ ಮೇಲೆ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಗಲಾಟೆ ಮಾಡಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಜಾಲಪ್ಪ ಒಬ್ಬ ಧೀಮಂತ ನಾಯಕ. ರಾಮಕೃಷ್ಣ ಹೆಗಡೆ ಕಾಲದಲ್ಲಿ ಮೆಡಿಕಲ್ ಕಾಲೇಜು ಮಾಡಿದ್ದರು. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಜಾಲಪ್ಪ ಅವರು ವ್ಯವಸಾಯದ ಮೇಲೆ ಆಸಕ್ತಿ ಇದ್ದಂಥವರು. ನಾನು ಕಂದಾಯ ಸಚಿವ ಸ್ಥಾನ ಕೇಳಿದಾಗ, ಬೇಡ ನೀನು ಹಣಕಾಸು ಸಚಿವನಾಗು ಎಂದು ಬುದ್ಧಿಮಾತು ಹೇಳಿದರು. ಜಾಲಪ್ಪ ಅವರ ಸಾವು ನನಗೆ ವೈಯಕ್ತಿಕವಾಗಿ ಬಹಳ ದುಃಖ ತಂದಿದೆ. ಜಾಲಪ್ಪ ತಮ್ಮ ಬದುಕನ್ನ ಸಾರ್ಥಕ ಮಾಡಿ ಹೋಗಿದ್ದಾರೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Varthajala Daily, Bengaluru
0 Comments