ಶಾಸಕ ಮಾಜಿ ಮಂತ್ರಿ ಅರವಿಂದ್ ಲಿಂಬಾವಳಿ ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಕೋಟಿ ಅನುದಾನವನ್ನು ಯಶವಂತಪುರ ಕ್ಷೇತ್ರಕ್ಕೆ ತಂದರೂ ಕ್ಷೇತ್ರ ಅಭಿವೃದ್ಧಿಯಾಗದಿರುವುದಕ್ಕೆ ಅವರು ಮಾಡಿರುವ 40% ಭ್ರಷ್ಟಾಚಾರವೇ ಕಾರಣ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಗುತ್ತಿಗೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ಖಂಡಿಸಿ ಆಮ್ ಆದ್ಮಿ ಪಾರ್ಟಿಯು ಬೆಂಗಳೂರಿನಾದ್ಯಂತ ನಡೆಸುತ್ತಿರುವ ಹತ್ತು ದಿನಗಳ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಸಹಿ ಸಂಗ್ರಹಿಸಿ ಮೋಹನ್ ದಾಸರಿ ಮಾತನಾಡಿದರು.
ಕ್ಷೇತ್ರದ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳಿವೆ. ಸರ್ಕಾರದ ಅನುದಾನವನ್ನು ತಮ್ಮ ಜೇಬಿಗೆ ಹಾಕಿಕೊಂಡು ಶಾಸಕರು ಅಭಿವೃದ್ಧಿಯಾಗಿದ್ದಾರೆ. ತೆರಿಗೆ ಕಟ್ಟಿದ ಸಾಮಾನ್ಯ ಜನರು ಜೀವಭಯದಲ್ಲಿ ವಾಹನ ಚಾಲನೆ ಮಾಡಬೇಕಾಗಿದೆ. ಸಹಿ ಸಂಗ್ರಹಿಸಲು ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿರುವಾಗ ಜನರು ಶಾಸಕರಿಗೆ ಹಿಡಿಶಾಪ ಹಾಕುತ್ತಿರುವುದು ಕೇಳಿಸುತ್ತಿದೆ” ಎಂದು ಮೋಹನ್ ದಾಸರಿ ಹೇಳಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಮಾತನಾಡಿ, “ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಅಕ್ರಮವನ್ನು ಬಿಚ್ಚಿಟ್ಟಿದ್ದರೂ ಸೂಕ್ತ ತನಿಖೆಗೆ ಆದೇಶಿಸಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗದ ಹೊರತು ಆರೋಪಿಗಳಿಗೆ ಸೂಕ್ತ ಶಿಕ್ಷೆ ಆಗುವುದಿಲ್ಲ” ಎಂದು ಹೇಳಿದರು
ಬೆಂಗಳೂರು ನಗರ ಎಎಪಿ ಪಕ್ಷದ ಮುಖಂಡರಾದ, ಕೆ ಎನ್ ಜಗದೀಶ್ ಮಹದೇವ್, ಬಿ ಟಿ ನಾಗಣ್ಣ ,ಸುರೇಶ್ ರಾಥೋಡ್, ಸುಹಾಸಿನಿ, ಹಾಗೂ ಇನ್ನಿತರ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
0 Comments