ಮಧುಗಿರಿ - ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡಕ್ಕೆ ಸಿಲುಕದೆ ಕೆಲಸ ನಿರ್ವಹಿಸಿ ಎಂದು ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದರು.
ಪಟ್ಟಣದ ಡಿಡಿಪಿಐ ಕಚೇರಿ ಸಭಾಂಗಣದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ -2022 ಕ್ಯಾಲೆಂಡರ್ ಬಿಡುಗಡೆ ಸಮಾರಂಭಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರಿ ಸಿಗುವುದು ಒಂದು ಭಾಗ್ಯ. ನಮ್ಮ ಯಾವುದೋ ಜನ್ಮದಲ್ಲಿ ತಂದೆತಾಯಿಗಳು ಮಾಡಿದ ಕರ್ಮ ಮತ್ತು ನಮ್ಮಗಳ ಪುಣ್ಯದ ಫಲ ಅವಕಾಶ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಕರ್ತವ್ಯಕ್ಕೆ ಹಾಜರಾಗಿ ಅವಧಿ ಮುಗಿಯುವವರೆಗೂ ಶ್ರದ್ಧೆ ಮತ್ತು ಮನಸ್ಪೂರಕವಾಗಿ ಕೆಲಸವನ್ನು ನಿರ್ವಹಿಸಬೇಕು. ಹೆಚ್ಚುವರಿ ಕೆಲಸ ಸಿಕ್ಕಿದಾಗ ನಾವು ಅದನ್ನು ತಲೆಗೆ ಹಾಕಿಕೊಳ್ಳದೆ ಖುಷಿಯಿಂದ ಕರ್ತವ್ಯವನ್ನು ನಿರ್ವಹಿಸುವ ಮನಸ್ಥಿತಿಗೆ ಬರಬೇಕು ಎಂದರು.
ಹೆಚ್ಚುವರಿ ಹುದ್ದೆಗಳು ಮತ್ತು ಕರ್ತವ್ಯ ನಿರ್ವಹಿಸುವ ನಾವುಗಳು ಬಲಹೀನರು ಎನ್ನುವ ಬದಲು ಸದೃಢ ಮತ್ತು ಸವಾಲಾಗಿ ಸ್ವೀಕರಿಸಿ ಕರ್ತವ್ಯ ನಿರ್ವಹಿಸಬೇಕು ಎಂದ ಅವರು, ಕೇಂದ್ರ ಸರ್ಕಾರ 6ನೇ ವೇತನ ಆಯೋಗವನ್ನು ನೀಡಿ ಬಹಳ ವರ್ಷಗಳಾಗಿದ್ದು, ರಾಜ್ಯ ಸರ್ಕಾರವೂ ಸಹ ಆರನೇ ವೇತನ ಆಯೋಗ ಜಾರಿಗೊಳಿ ಈ ತಾರತಮ್ಯ ಹೋಗಲಾಡಿಸ ಬೇಕು ಎಂದರು.
ಸರ್ಕಾರಿ ನೌಕರರಿಗೂ ಕೆಲಸ ನಿರ್ವಹಣೆ ವೇಳೆ ಭದ್ರತೆ, ವಸತಿ ಇನ್ನಿತರ ಸೌಲಭ್ಯಗಳನ್ನು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಾಗಬೇಕಾಗಿದ್ದು, ಭಗವಂತ ನೂತನ ವರ್ಷದಲ್ಲಿ ಪ್ರತಿಯೊಬ್ಬರಿಗೂ ಶಾಂತಿ ನೆಮ್ಮದಿ ಆರೋಗ್ಯ ನೀಡಲಿ, ಆರೋಗ್ಯವಿದ್ದಲ್ಲಿ ಐಶ್ವರ್ಯ ತಾನಾಗಿಯೇ ಬರುತ್ತದೆ ಎಂದರು.
ತಹಸೀಲ್ದಾರ್ ಕೆ.ಅರುಂಧತಿ ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಿ ನೌಕರರ ಸೇವೆ ಶ್ಲಾಘನೀಯ. ನೌಕರರಿಗೂ ಕುಟುಂಬವಿದ್ದು, ಕುಟುಂಬದ ಜತೆಗೆ ಸಾರ್ವಜನಿಕ ಸೇವೆಯಲ್ಲಿ ಉತ್ತಮ ಹೆಸರು ಗಳಿಸಲಿ ಎಂದು ಆಶಿಸಿ, ಬೇರೆಡೆ ಕ್ಯಾಲೆಂಡರ್ ಗಳನ್ನು ವರ್ಷ ಆರಂಭವಾಗಿ 2 ತಿಂಗಳ ನಂತರ ಕ್ಯಾಲೆಂಡರ್ ಮತ್ತು ಡೈರಿಗಳನ್ನು ನೀಡುವ ಸಂಸ್ಕøತಿಯನ್ನು ಕಂಡಿದ್ದೆನೆ, ಇಲ್ಲಿನ ತಾಲ್ಲೂಕು ಘಟಕ ನಾಲ್ಕು ದಿನ ಮುಂಚಿತವಾಗಿಯೇ ಕ್ಯಾಲೆಂಡರ್ ಗಳನ್ನು ಬಿಡುಗಡೆ ಮಾಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಪಂ ಇಒ ಲಕ್ಷ್ಮಣ್ ಮಾತನಾಡಿ, ಸರ್ಕಾರಿ ನೌಕರರ ಸಂಘಗಳು ಹಿಂದೆ ಕ್ರಿಯಾಶೀಲವಾಗಿರಲಿಲ್ಲ. ರಚನಾತ್ಮಕವಾಗಿರಲಿಲ್ಲ ಚಟುವಟಿಕೆಯಿಂದ ಕೂಡಿರದೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಸಂಘ ನೆನಪಿಗೆ ಬರುತ್ತಿತ್ತು. ಮಂಜೂರಾದ ಹುದ್ದೆಗಳಲ್ಲಿ ಅರ್ಧದಷ್ಟ್ಟು ಖಾಲಿ ಹುದ್ದೆಗಳು ಇರುವುದರಿಂದ ಒತ್ತಡದಲ್ಲಿ ಕೆಲಸ ಮಾಡುವಂಥ ಸ್ಥಿತಿ ಸರ್ಕಾರಿ ನೌಕರರದ್ದಾಗಿದೆ. ಅದಕ್ಕಾಗಿ ಮನೋ ಬಲ ಮತ್ತು ಆತ್ಮವಿಶ್ವಾಸ ತುಂಬುವಂತಹ ಕೆಲಸಗಳಾಗಬೇಕು. ಸರ್ಕಾರದ ಆದೇಶಗಳು, ಮಾಹಿತಿ ಹಕ್ಕು ಅಧಿನಿಯಮ ಮತ್ತಿತರ ಕಾರ್ಯಗಳನ್ನು ನೌಕರರಿಗೆ ತಿಳಿಸುವ ಕೆಲಸ ಸಂಘದಿಂದ ಆಗಬೇಕು. ಆತ್ಮವಿಶ್ವಾಸದಿಂದ ಕೆಲಸ ನಿರ್ವಹಿಸಿ ನೌಕರ ಸ್ನೇಹಿ ಪರಿಸರವನ್ನು ನಿರ್ಮಾಣ ಮಾಡುವಂಥ ಕೆಲಸವಾಗಬೇಕಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಹೆಚ್.ವೆಂಕಟೇಶಯ್ಯ ಮಾತನಾಡಿ, ಸರ್ಕಾರಿ ನೌಕರರ ಸಂಘಕ್ಕೆ ನೂರು ವರ್ಷದ ಇತಿಹಾಸವಿದ್ದು, ಈಗಿನ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆರನೇ ವೇತನ ಆಯೋಗ ಜಾರಿ ಮಾಡಿಸುವ ಪ್ರಯತ್ನದಲ್ಲಿದ್ದಾರೆ. ತಾಲ್ಲೂಕು ಘಟಕ ಅತೀ ಕ್ರಿಯಾಶೀಲವಾಗಿದ್ದು, ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸರ್ಕಾರಿ ನೌಕರರನ್ನು ಮಾನಸಿಕ ಒತ್ತಡದಿಂದ ಹೊರ ತರುವ ಎಲ್ಲಾ ಪ್ರಯತ್ನಗಳನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಸನ್ಮಾನ:- ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಏರ್ಪಡಿಸಿದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿದ ಕಸಬಾ ಗ್ರಾಮ ಲೆಕ್ಕಿಗ ಶರಣಪ್ಪ ರವರನ್ನು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 4 ಪದಕಗಳನ್ನು ಗಳಿಸಿದ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್ ಅವರನ್ನು ಉಪವಿಭಾಗಧಿಕಾರಿ ಸೋಮಪ್ಪ ಕಡಕೋಳ ಸನ್ಮಾನಿಸಿದರು.
ಸರಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಜಯರಾಮಯ್ಯ, ಉಪಾಧ್ಯಕ್ಷ ಅಬಕಾರಿ ಡಿವೈಎಸ್ಪಿ ಎಸ್.ಸುರೇಶ್, ಬಿಇಒ ನಂಜುಂಡಯ್ಯ, ತಾಲೂಕು ಅರೋಗ್ಯಾಧಿಕಾರಿ ರಮೇಶ್ ಬಾಬು , ಸಂಘದ ಉಪಾಧ್ಯಕ್ಷರುಗಳಾದ ಶಶಿ ಕುಮಾರ್, ಗೋವಿಂದ ರಾಜು, ಕೆ.ಟಿ.ಸಿದ್ದೇಶ್ವರ್, ಖಜಾಂಚಿ ಚಿಕ್ಕರಂಗಪ್ಪ ಹಾಗೂ ಇತರರು ಹಾಜರಿದ್ದರು.
0 Comments