ಡಿಸೆಂಬರ್ 1, ಬೆಳಗಾವಿ: ನನ್ನ ಬಗ್ಗೆ ಡಿ. ಕೆ. ಶಿವಕುಮಾರ್ ಏನೇ ಆರೋಪ ಮಾಡಿದರೂ ನಾನು ಈಗ ಉತ್ತರ ಕೊಡುವ ಅವಶ್ಯಕತೆ ಇಲ್ಲ. ನಾನು ಈಗ ಚುನಾವಣೆಯ ಮೂಡ್ನಲ್ಲಿದ್ದೇನೆ. ನಾನು ನನ್ನ ಗುರಿ ಮುಟ್ಟಬೇಕಿದೆ. ನನ್ನ ಶಕ್ತಿ ಏನೆಂದು ಡಿ. ಕೆ. ಶಿವಕುಮಾರ್‌ಗೆ ತೋರಿಸುತ್ತೇನೆ. 'ನಾನೀಗ ಎಲೆಕ್ಷನ್ ಮೂಡ್ನಲ್ಲಿ ಇದ್ದೀನಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮರ್ಗೆ ಈಗ ಉತ್ತರ ನೀಡುವುದಿಲ್ಲ. ವಾರ್ ಆದ್ರೂ ಚಿಂತೆಯಿಲ್ಲ. ಡಿಸೆಂಬರ್ 14ಕ್ಕೆ ನಾನು ಏನೆಂಬುದನ್ನು ತೋರಿಸುತ್ತೀನಿ'..! ಹೀಗಂತಾ ಗುಡುಗಿದ್ದು, ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿಯವರು.
ಬೆಳಗಾವಿ ನಗರದ ಬೆಳಗುಂದಿಯಲ್ಲಿ ಬಿಜೆಪಿ ಗ್ರಾ. ಪಂ. ಸದಸ್ಯರೊಂದಿಗೆ ಸಭೆ ನಡೆಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಬೇರೆಯವರ ಹಾಗೆ ನಾನು ಹತಾಶ ಮನೋಭಾವದಿಂದ ಮಾತನಾಡುವುದಿಲ್ಲ. ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ಡಿ. ಕೆ. ಶಿವಕುಮಾರ್ ವ್ಯಕ್ತಿತ್ವ ಹಾಗೂ ನನ್ನ ವ್ಯಕ್ತಿತ್ವ ಏನು ಎಂಬುದನ್ನು ಹೇಳುತ್ತೇನೆ ಎಂದರು. ಬೇಕಿದ್ದರೆ ವಾರ್ ಆಗಲಿ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮದೆ ಶೈಲಿಯಲ್ಲಿ ಹರಿಹಾಯ್ದರು..!
ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು. ಜಿಲ್ಲೆಯ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದ ರಮೇಶ್ ಜಾರಕಿಹೊಳಿ, ಮಾಧ್ಯಮಗಳಿಗೆ ಬೇಕಿರೋ ಉತ್ತರ ಇಂದು ಸಿಗಲ್ಲ ಎಂದು ಮಾರ್ಮಿಕವಾಗಿ ನುಡಿದರು. ಪರಿಷತ್ ಫಲಿತಾಂಶದ ದಿನ ಡಿಸೆಂಬರ್ 14ರಂದು ಡಿಕೆಶಿ ಆಡಿದ ಪ್ರತಿ ಶಬ್ದಕ್ಕೂ ಉತ್ತರ ಸಿಗಲಿದೆ, ಅತ್ಯಂತ ಕಠೋರವಾಗಿ ಉತ್ತರ ಕೊಡುತ್ತೇನೆ ಎಂದರು.
1985 ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತೇನೆ. ಆಗ ನನ್ನ ವ್ಯಕ್ಯಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎಂದು ಹೇಳುತ್ತೇನೆ. ಓಪನ್ ವಾರ್ ಆಗಲಿ ಅಂದು ರಮೇಶ್ ಜಾರಕಿಹೊಳಿ ಖಡಕ್ಕಾಗಿ ಹೇಳಿದರು. ಫಲಿತಾಂಶದ ದಿನವೇ ಎಲ್ಲಕ್ಕೂ ಉತ್ತರ ಕೊಡುತ್ತೇನೆ ಎಂದು ಖಾರವಾಗಿ ಉತ್ತರಿಸಿದರು.
ಡಿಕೆಶಿ ಕುಟುಂಬ, ಜಾರಕಿಹೊಳಿ ಕುಟುಂಬದ ನಡುವೆ ಏನಿತ್ತು ಎಂಬುದರ ಬಗ್ಗೆ ಬಹಿರಂಗವಾಗಿ ಹೇಳುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜಾರಕಿಹೊಳಿ, ನನ್ನ ಮೇಲೆ ದಿಲ್ಲಿ ವರಿಷ್ಠರ ಆಶಿರ್ವಾದ ಇರುವುದರಿಂದ ಇಂದು ನಾನು ಜೀವಂತವಾಗಿ ಇದ್ದೇನೆ. ಇಲ್ಲವಾದ್ರೆ ಇಷ್ಟೊತ್ತಿಗೆ ನನ್ನನ್ನು ಮುಗಿಸಿ ಬಿಡುತ್ತಿದ್ದರು. ಇಷ್ಟೊತ್ತಿಗೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತಿದ್ದರು. ಸಂಘ ಪರಿವಾರದ ನಾಯಕರ ಬೆಂಬಲದಿ0ದ ನಾಯಕನಾಗಿದ್ದೇನೆ ಎಂದ ರಮೇಶ್ ಜಾರಕಿಹೊಳಿ, ಬ್ಲ್ಯಾಕ್ ಮೇಲ್ ಯಾರು ಮಾಡ್ತಾರೆ ಎಂದು 14 ನೇ ತಾರೀಕು ಹೇಳುತ್ತೇನೆ. ಈಗ ಇರುವ (ಎಮ್ ಎಲ್ ಎ) ಉಳಿಸಿಕೊಳ್ಳಿ ಆಮೇಲೆ ನೋಡೋಣ ಎಂದರು. ಡಿಸೆಂಬರ್ 14 ರಂದು ಡಿಕೆಶಿ ಹಾಗೂ ಜಾರಕಿಹೊಳಿ ನಡುವೆ ವಾರ್ ಆಗಲಿ ನೋಡೋಣ, 2023ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಹಾಗು ನಾವು ಪ್ರಯತ್ನ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
0 Comments