ಬೆಂಗಳೂರು: ಉಡುಪಿಯ ಪೇಜಾವರ ಶ್ರೀಗಳ ಬಗ್ಗೆ ಎಲ್ಲ ಧರ್ಮದವರಿಗೆ ಗೌರವವಿದೆ. ಅವರನ್ನು ಪೂಜ್ಯ ಭಾವದಿಂದ ಕಾಣುತ್ತಾರೆ. ಅವರು ನಮಗೆ ಅಮೂಲ್ಯವಾದ ರತ್ನ, ಅಂಥವರ ಬಗ್ಗೆ ಹಂಸಲೇಖರವರು ನೀಡಿದ ಕೀಳು ಮಟ್ಟದ ಹೇಳಿಕೆಯನ್ನು ಬಿಜೆಪಿ ಮಾತ್ರವಲ್ಲ. ಪ್ರತಿಯೊಬ್ಬರೂ ಖಂಡಿಸುತ್ತಾರೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತಿಳಿಸಿದ್ದಾರೆ.
ಪತ್ರಕರ್ತರ ಜೊತೆ ಮಾತನಾಡಿದ ಅವರು, ಹಂಸಲೇಖ ಅವರ ಬಗ್ಗೆ ನನಗೆ ಗೌರವವಿತ್ತು. ಆದರೆ, ಅವರು ಹಿಂದುಗಳ ಭಾವನೆಗೆ ವಿರುದ್ಧವಾಗಿ ಕೀಳು ಮಟ್ಟದ ಹೇಳಿಕೆ ಮತ್ತು ಪ್ರಚಾರ ಪಡೆಯುವುದಕ್ಕೋಸ್ಕರ ಹೇಳಿಕೆ ನೀಡಿದ್ದು ಆಕ್ಷೇಪಾರ್ಹ ಎಂದು ಅವರು ತಿಳಿಸಿದ್ದಾರೆ. ದಲಿತರು ಮತ್ತು ಮುಂದುವರಿದವರ ನಡುವಿನ ಕಂದಕವನ್ನು ಸರಿಪಡಿಸಲು ಪೇಜಾವರ ಶ್ರೀಗಳು ಶ್ರಮಿಸಿದ್ದಾರೆ. ಅದಕ್ಕಾಗಿ ಅವರು ದಲಿತರ ಕಾಲೊನಿಗಳಿಗೆ ಭೇಟಿ ಕೊಟ್ಟಿದ್ದರು ಮತ್ತು ಮಾನವೀಯ ಮೌಲ್ಯಗಳನ್ನು ಅವರು ಎತ್ತಿ ಹಿಡಿದಿದ್ದರು ಎಂದು ವಿವರಿಸಿದ್ದಾರೆ. ಇನ್ನು ಮುಂದೆ ಇದೇ ರೀತಿಯ ಹೇಳಿಕೆಗಳನ್ನು ಕೊಡಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಬಿಟ್ ಕಾಯಿನ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಅವರು ಯಾಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ಬೆಗೆ ಉತ್ತರಿಸಿದ ಅವರು, ನಮ್ಮ ರಾಜ್ಯಾಧ್ಯಕ್ಷರದು ಸೌಮ್ಯ ಸ್ವಭಾವ. ಅವರು ಹಸುವಿನಂಥ ಮನುಷ್ಯ. ಅವರಿಗೆ ಭ್ರಷ್ಟಾಚಾರದ ಕಲ್ಪನೆಯೇ ಇಲ್ಲ; ಅವರು ಸಂಘಟನೆಯಲ್ಲೇ ತಮ್ಮನ್ನು ತೊಡಗಿಸಿಕೊಂಡವರು ಎಂದು ಉತ್ತರಿಸಿದರು. ನಮ್ಮ ಅಧ್ಯಕ್ಷರು ಯಾವುದೇ ತಪ್ಪು ಮಾಡಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರು ಆರಂಭಶೂರರು; ಸುದ್ದಿಶೂರರು. ಸುದ್ದಿಗಾಗಿ ಏನಾದರೂ ಮಾಡುತ್ತಾರೆ. ಅವರು ತಮ್ಮ ಕರ್ಮಕಾಂಡವನ್ನು ನೋಡಿಕೊಳ್ಳಲಿ ಎಂದರು. ಜೆಡಿಎಸ್ ಪಕ್ಷದಂತೆ ಬಿಜೆಪಿ ಕುಟುಂಬ ರಾಜಕೀಯವನ್ನು ನೆಚ್ಚಿಕೊಂಡಿಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರ ಮಕ್ಕಳು ಇದ್ದಾರೆ ಎಂಬುದು ಗೊತ್ತಿದೆ. ವಿಧಾನಪರಿಷತ್ ಚುನಾವಣೆಯಲ್ಲಿ 18ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂಬ ಆತಂಕದಿಂದ ಮತ್ತು ಹತಾಶ ಮನೋಭಾವದಿಂದ ಬಿಟ್ ಕಾಯಿನ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. 2023ರ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಸೋಲಲಿದೆ ಎಂದು ಅವರು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು. ದೇಶ ಮಾತ್ರವಲ್ಲದೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷದ ಸ್ಥಿತಿ ಹೀನಾಯವಾಗಿದೆ. ಆದ್ದರಿಂದ ಈ ವಿಷಯವನ್ನು ಜೀವಂತವಾಗಿಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ವಿಷಯಾಂತರ ಮಾಡಲು ಬಿಟ್ ಕಾಯಿನ್ ವಿಚಾರವನ್ನು ಕಾಂಗ್ರೆಸ್ ಪ್ರಸ್ತಾಪಿಸುತ್ತಿದೆ. ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ. ಆದರೆ, ಈ ನಾಡಿನ ಜನ ಈ ರೀತಿಯ ಆರೋಪಗಳನ್ನು ಕಡೆಗಣಿಸಲಿದ್ದಾರೆ ಎಂದರು.
ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್. ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಹಣದಲ್ಲಿ ಭವ್ಯ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ. ನಿಮ್ಮ ಭ್ರಷ್ಟಾಚಾರದ ವಿಚಾರವನ್ನು ಎಳೆಎಳೆಯಾಗಿ ಬಿಜೆಪಿಯು ಜನರ ಮನೆ ಬಾಗಿಲಿಗೆ ತಲುಪಿಸಲಿದೆ ಎಂದು ತಿಳಿಸಿದರು. ದಾಖಲೆ ಇದ್ದರೆ ನೀವ್ಯಾಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಅಥವಾ ಅಧಿವೇಶನದಲ್ಲಿ ಚರ್ಚೆಗೆ ಬನ್ನಿ ಎಂದು ಪಂಥಾಹ್ವಾನ ನೀಡಿದರು.

0 Comments