Ticker

6/recent/ticker-posts

Ad Code

Responsive Advertisement

ಬೆಂಗಳೂರು : ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಂದ ಬೆದರಿಕೆ !

ನವಂಬರ್ 24, ಬೆಂಗಳೂರು: ನಿಂಗೆ ಬಿಟ್ಟಿ ಎಜುಕೇಷನ್ ಬೇಕಾ? 'ಹೇಯ್ ಸುಮ್ನೆ ಕೂತ್ಕೋಳಯ್ಯ, ಎಷ್ಟು ಮಾತಾಡ್ತೀಯಾ? ಯಾವ್ ಡಿಪಾಟ್‍ಮೆಂಟ್ ನಿಂದು? ಸರಕಾರಿ ಸ್ಕೂಲ್ ಆಪ್ಷನ್ ಇತ್ತಲ್ಲಾ, ಸೇರಿಸಬೇಕಾಗಿತ್ತು, ಫೀಸ್ ಕಟ್ಟೋಕೆ ಆಗಲ್ವಾ? ಸುಮ್ನೆ ಬಂದು ನಮ್ಮ ಟೈಂ ವೆಸ್ಟ್ ಮಾಡಿಸ್ತೀರಾ? ಇಡಿಯಟ್. ಐ ಯಾಮ್ ಡೆಪ್ಯೂಟಿ ಕಮಿಷನರ್ ಸ್ಪೀಕಿಂಗ್' ..ಹೀಗೆಂದು ಖಾಸಗಿ ಶಾಲೆಗಳ ಶುಲ್ಕ ವಸೂಲಿ ನಿಯಂತ್ರಣಕ್ಕೆ ದೂರು ನೀಡಲು ಬಂದ ಸಾರ್ವಜನಿಕರಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬೆದರಿಕೆ ಹಾಕಿದ್ದಾರೆಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.



ಕರ್ನಾಟಕ ರಾಜ್ಯ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ ಈ ವಿಚಾರವಾಗಿ, ಜಿಲ್ಲಾಧಿಕಾರಿ ಉದ್ಧಟತನದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಮುಖ್ಯಮಂತ್ರಿ, ಶಿಕ್ಷಣ ಸಚಿವ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದೆ.


ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ನೀಡುವಂತೆ ಬಲವಂತ ಮಾಡಿದರೆ ಜಿಲ್ಲಾ ವ್ಯಾಪ್ತಿಯಲ್ಲಿನ 'ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ'ಕ್ಕೆ ದೂರು ನೀಡಬಹುದು ಎಂದು ಸರಕಾರದ ಆದೇಶ. ಈ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಯೇ ಮುಖ್ಯಸ್ಥರು. ಹೀಗಾಗಿ ದೂರು ನೀಡಲು ತೆರಳಿದ ಸಾರ್ವಜನಿಕರೊಂದಿಗೆ ಜಿಲ್ಲಾಧಿಕಾರಿ ಮಂಜುನಾಥ್ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

'ವಾಣಿ ಎಜುಕೇಷನ್ ಸೆಂಟರ್ ವಿರುದ್ಧ ಪ್ರಾಧಿಕಾರಕ್ಕೆ ಶಾಲ ಮಕ್ಕಳ ಪೋಷಕರು ದೂರು ನೀಡಲು ತೆರಳಿದ್ದರು, ಆ ಸಂದರ್ಭದಲ್ಲಿ ಮೇಲ್ಕಂಡ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಮಾನವ ಹಕ್ಕುಗಳ ಆಯೋಗದ ಸದಸ್ಯ ಆರ್.ಕೆ.ದತ್ತ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಈ ಬಗ್ಗೆ ವರದಿ ನೀಡುವಂತೆ ಆಯೋಗವು ಸರಕಾರಕ್ಕೆ ಸೂಚನೆ ನೀಡಿದೆ ಎಂದು ತಿಳಿಸಲಾಗಿದೆ.

'ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಬಗ್ಗೆ ದಾಖಲಾಗಿದ್ದ ದೂರುಗಳನ್ನು ಪರಿಶೀಲಿಸಲು ಆ.5ರಂದು ಜಿಲ್ಲಾಧಿಕಾರಿ ಸಭೆ ನಡೆಸಿದ್ದರು. ದೂರು ಸಲ್ಲಿಸಿದ್ದ ಪೋಷಕರ ವಿರುದ್ಧ ಜಿಲ್ಲಾಧಿಕಾರಿ ಬೆದರಿಕೆ ಹಾಕಿದ್ದು, ಅಲ್ಲದೆ, ಯಾವ ಡಿಪಾರ್ಟ್‍ಮೆಂಟ್ ನಿಂದು, ನಿಂಗೆ ಬಿಟ್ಟಿ ಎಜುಕೇಷನ್ ಬೇಕಾ, ಫೀಸ್ ಕಟ್ಟೋಕೆ ಆಗಲ್ವಾ, ನಿಂಗೆ ಸಂಬಳ ಕೊಡೊದು ಏಕೆ, ಸಂಬಳ ಕಟ್ ಮಾಡಿಸ್ತೀನಿ, ಡಾಕ್ಟರ್ ಅಂತೀಯ ಎಷ್ಟು ಸಂಬಳ, ನಿನ್ನ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಬಾರದು ಎಂದೆಲ್ಲಾ.. ಮನಸೋ ಇಚ್ಛೇ ಏಕವಚನದಲ್ಲೇ ನಿಂದಿಸಿದ್ದಾರೆ' ಎಂದು ವೇದಿಕೆ ಆರೋಪಿಸಿದೆ.

'ದೂರು ನೀಡಲು ಹೋದವರನ್ನೇ ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದು, ಅಲ್ಲದೆ, ಬೇಕಾಬಿಟ್ಟಿ ಶುಲ್ಕ ವಸೂಲಿಗೆ ಮಾಡುವ ಖಾಸಗಿ ಶಾಲೆಗಳ ಪ್ರೋತ್ಸಾಹ ನೀಡುವ ರೀತಿಯಲ್ಲಿ ನಡೆದುಕೊಂಡಿದ್ದು ಅವರ ವಿರುದ್ಧ ಕೂಡಲೇ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ವೇದಿಕೆಯ ರವಿಕುಮಾರ್ ಜಿ. ಲಕ್ಷ್ಮಿ ನಾರಾಯಣ ಹಾಗೂ ಡಾ.ಅರುಣ್ ಕುಮಾರ್ ಜಿ. ಆಗ್ರಹಿಸಿದ್ದಾರೆ.

Post a Comment

0 Comments

Ad Code

Responsive Advertisement