ಮಧುಗಿರಿ : ಸಂವಿಧಾನ ಜಾರಿಯಿಂದ ಶತಮಾನಗಳಿಂದ ಶೋಷಣೆಗೆ ಒಳಗಾದ ಜನರು ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಸಾಮಾನ್ಯ ಪ್ರಜೆಯೂ ಸಹ ಅತ್ಯುನ್ನತ ಅಧಿಕಾರ ಪಡೆಯಲು ಸಂವಿಧಾನ ಅವಕಾಶ ಕಲ್ಪಿಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಶ್ರೇಷ್ಟ ವ್ಯಕ್ತಿಯನ್ನಾಗಿ ಮಾಡುವ ಸಾಮಥ್ರ್ಯ ಸಂವಿಧಾನಕ್ಕಿದೆ. ವಿಭಿನ್ನ ಧರ್ಮ, ಜಾತಿ ಜನರ ನಡುವೆ ಐಕ್ಯತೆಯನ್ನು ಸಾರಿ, ಸಹೋದರತೆ, ಸಮಾನತೆಯ ಅಡಿಪಾಯವೇ ಸಂವಿಧಾನವಾಗಿದೆ. ಆದುದರಿಂದ ಸಂವಿಧಾನವನ್ನು ಎಲ್ಲರೂ ಆಳವಾದ ಅಧ್ಯಯನ ಮಾಡಬೇಕು ಎಂದು ಪ್ರಾಂಶುಪಾಲರಾದ ನರಸಿಂಹಮೂರ್ತಿ ಟಿ.ಎನ್. ಕರೆನೀಡಿದರು.
ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚುನಾವಣಾ ಸಾಕ್ಷರತಾ ಸಮಿತಿ ಏರ್ಪಡಿಸಿದ್ದ ಸಂವಿಧಾನ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂವಿಧಾನ ಜಾರಿಯಿಂದ ಭಾರತದಲ್ಲಿದ್ದ ಶತಮಾನಗಳ ಶೊಷಣೆಯನ್ನು ಅನುಭವಿಸಿದ ನೋವನ್ನು ಹೊಡೆದೋಡಿಸಲು ಸಾಧ್ಯವಾಗಿದೆ. ಸಂವಿಧಾನ ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿದೆ. ಎಲ್ಲ ಕಾನೂನುಗಳ ಮೂಲ ಸಂವಿಧಾನ. ಪ್ರಜಾಪ್ರಭುತ್ವದ ಅಡಿಪಾಯವಾದ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಯವಿಧಾನಗಳು ಸಂವಿಧಾನದಲ್ಲಿದೆ. ಸಂವಿಧಾನ ಭವ್ಯ ಭಾರತದ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರು ಬಹುಮುಖ್ಯ ಪಾತ್ರ ವಹಿಸಿದ್ದು, ವಿಶ್ವದ ಅನೇಕ ರಾಷ್ಟ್ರಗಳ ಸಂವಿಧಾನ, ವಿವಿಧ ಕಾನೂನುಗಳನ್ನು ಅಧ್ಯಯನ ನಡೆಸಿ ಜಾತ್ಯಾತೀತ ಭಾರತದ ನೆಲಕ್ಕೆ ಅನ್ವಯಿಸುವ ಸಂವಿಧಾನ ರಚಿಸಿ, ಸಮರ್ಪಿಸಿದ ನೆನಪು ಸುವರ್ಣಾಕ್ಷರದಲ್ಲಿ ಬರೆದಿಡುವಂತಹದಾಗಿದೆ. ವಿಶ್ವದ ಬೃಹತ್ ಸಂವಿಧಾನ ಎನ್ನುವ ಖ್ಯಾತಿ ಭಾರತದ ಸಂವಿಧಾನಕ್ಕಿದೆ. ವಿಶ್ವವಿದ್ಯಾನಿಲಯಗಳು ತಮ್ಮ ಪಠ್ಯದಲ್ಲಿ ಭಾರತೀಯ ಸಂವಿಧಾನ ವಿಷಯವನ್ನು ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದು, ಎಲ್ಲ ವಿದ್ಯಾರ್ಥಿಗಳು ಸಂವಿಧಾನದ ಆದರ್ಶಗಳನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಚುನಾವಣಾ ಸಾಕ್ಷರತಾ ಸಮಿತಿಯ ಸಂಚಾಲಕರಾದ ಇ.ಮುನಿರಾಜ ಮಾತನಾಡಿ ಡಾ.ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಲು ಸುದೀರ್ಘ ಸಮಯವನ್ನು ವ್ಯಯಿಸಿ, ಜ್ಯಾತ್ಯಾತೀತ ರಾಷ್ಟ್ರಕ್ಕೆ ಅನ್ವಯವಾಗುವಂತಹ ಸಂವಿಧಾನ ರಚಿಸಿದ್ದು, 1949ರ ನವೆಂಬರ್ 26ರಂದು ಸಮರ್ಪಿಸಲಾಯಿತು. ಸಂವಿಧಾನದಿಂದ ಇಂದು ಎಲ್ಲರೂ ಶಾಂತಿ ಸಹಬಾಳ್ವೆಯಿಂದ ಬಾಳುತ್ತಿದ್ದು, ಬಾಬಾ ಸಾಹೇಬರು ಎಲ್ಲರಿಗೂ ಸಮಾನವಾದ ನ್ಯಾಯವನ್ನು ಒದಗಿಸಿದ್ದಾರೆ. ಕಾನೂನು ದಿನವನ್ನು ನಾವು ಸಂವಿಧಾನ ದಿನ ಎಂದು ಆಚರಿಸಿ ಸಂವಿಧಾನದ ಬಗ್ಗೆ ಅರಿವನ್ನು ಮೂಡಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಸಂವಿಧಾನ ದಿನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಉಪನ್ಯಾಸಕರಾದ ಮುನೀಂದ್ರಕುಮಾರ್, ಸತೀಶ್ ಕುಮಾರ್ ಮಾತನಾಡಿದರು. ಪವಿತ್ರ ಪ್ರಿಯಭಾಷಿಣಿ ಮತ್ತು ವೀಣಾ ಉಪಸ್ಥಿತರಿದ್ದರು. ವಿದ್ಯಾರ್ಥಿ ದೇವರಾಜನಾಯ್ಕ ಕಾರ್ಯಕ್ರಮ ನಿರೂಪಿಸಿ, ಧನಂಜಯ ಪ್ರಾರ್ಥಿಸಿ ರವಿಕುಮಾರ್ ಟಿ. ಸ್ವಾಗತಿಸಿ, ಮಧುಸೂದನ್ ವಂದಿಸಿದರು.
0 Comments