ಮಧುಗಿರಿ - ಪಟ್ಟಣದ ತುಮಕೂರು ರಸ್ತೆಯಲ್ಲಿರುವ ತಾಲ್ಲೂಕು ನ್ಯಾಯಾಲಯ ಸಂಕೀರ್ಣಕ್ಕೆ ಹೊಂದಿಕೊಂಡಿರುವ ಹರಿಹರ ರೊಪ್ಪ ಗ್ರಾಮದ ಸರ್ವೆ ನಂಬರ್ 7ರಲ್ಲಿ 2ಎಕರೆ 15 ಗುಂಟೆ ಜಮೀನನ್ನು ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರ ಹೆಸರಿಗೆ ಕಾಯ್ದಿರಿಸಿ ಸದರಿ ಜಮೀನಿನ ಮಂಜೂರಾತಿ ಆದೇಶ ಪತ್ರವನ್ನು ತುಮಕೂರು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಧುಗಿರಿ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ತಾರಕೇಶ್ವರ ಗೌಡ ಪಾಟೀಲ್ ರವರಿಗೆ ತಹಸಿಲ್ದಾರ್ ವೈ.ರವಿ ರವರು ಶುಕ್ರವಾರ ಹಸ್ತಾಂತರಿಸಿದರು.
ನ್ಯಾಯಾಧೀಶರಾದ ತಾರಕೇಶ್ವರಗೌಡ ಪಾಟೀಲ್ ಮಾತನಾಡಿ, ಹೈಕೋರ್ಟಿನ ಆಡಳಿತಾತ್ಮಕ ನ್ಯಾಯಾಧೀಶರಾಗಿದ್ದ ವೀರಪ್ಪನವರ ನಿರ್ದೇಶನ ಆದೇಶದಂತೆ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯದೀಶರ ಆದೇಶದಂತೆ 2ಎಕರೆ ಹದಿನೈದು ಗುಂಟೆ ಜಾಗ ದೊರೆತಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯದ ಕಟ್ಟಡಗಳು, ವಕೀಲರ ಸಂಘದ ಕಟ್ಟಡ, ನ್ಯಾಯಾಧೀಶರುಗಳಿಗೆ ವಸತಿ ಸಮುಚ್ಚಯ ಸಿಬ್ಬಂದಿಗಳಿಗೆ ವಸತಿ ಸಮುಚ್ಚಯ ಕಟ್ಟಲು ಅನುಕೂಲಕರವಾಗಲಿದೆ. ಈಗ ಮಧುಗಿರಿ ನ್ಯಾಯಾಲಯವು ಒಟ್ಟು 8ಎಕರೆ ಬೌಂಡರಿ ಹೊಂದಿದ್ದು ಮುಂದಿನ ದಿನಗಳಲ್ಲಿ ಇದು ಜಿಲ್ಲಾ ಕೇಂದ್ರವಾದರೆ ನ್ಯಾಯಾಂಗ ಇಲಾಖೆಯ ಕಟ್ಟಡಗಳು ಹೆಚ್ಚಾಗಿ ಬರುವುದರಿಂದ ಸ್ಥಳ ನಿಗದಿಯಾಗಿರುವುದು ಸಂತೋಷಕರ ವಿಚಾರ ಈ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ಮತ್ತು ಕಂದಾಯ ನಿರೀಕ್ಷಕರ ಕೆಲಸಕ್ಕೆ ಧನ್ಯವಾದಗಳನ್ನು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃμÁ್ಣ ರೆಡ್ಡಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ನ್ಯಾಯಾಂಗ ಇಲಾಖೆ ಮತ್ತು ಕಂದಾಯ ಇಲಾಖೆ ಯವರು ನಿರಂತರ ಸಂಪರ್ಕದಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ವೀರಪ್ಪನವರ ಕಾಳಜಿಯಿಂದಾಗಿ ಈ ಜಾಗ ಮಂಜೂರಾತಿ ಆಗಿದೆ. ಇದರ ಜೊತೆಗೆ ನಮ್ಮ ನ್ಯಾಯಾಲಯದ ನ್ಯಾಯಾಧೀಶರುಗಳು ಮತ್ತು ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯದೀಶರ ಸಹಕಾರದಿಂದ ಜಾಗ ಮಂಜೂರಾತಿಯಾಯಿತು ಎಂದರು. ಮಧುಗಿರಿ ಜಿಲ್ಲಾಕೇಂದ್ರವಾಗುವ ದೂರದೃಷ್ಟಿಯ ಉದ್ದೇಶದಿಂದ ಈ ಸ್ಥಳ ನ್ಯಾಯಾಲಯದ ಸನಿಹ ದಲ್ಲೇ ದೊರಕಿರುವುದು ಸಂತಸ ತಂದಿದೆ, ಇದು ತುಮಕೂರು ಜಿಲ್ಲಾ ನ್ಯಾಯಾಧೀಶರ ಹೆಸರಿನಲ್ಲಿರುವುದರಿಂದ ಯಾರೂ ಹಸ್ತಕ್ಷೇಪ ಮಾಡು ವಂತಿಲ್ಲವೆಂದರು.
ವಕೀಲರ ಸಂಘಕ್ಕೆ ಹತ್ತು ಗುಂಟೆ ಜಾಗ ಕೊಡಿ ಎಂದು ತಹಸೀಲ್ದಾರ್ ಗೆ ವಕೀಲರ ಸಂಘದಿಂದ ಮನವಿ ಮಾಡಿದ್ದೆವು. ಆದರೆ ನಮ್ಮ ಅರ್ಜಿ ವಿಲೇವಾರಿಗೆ ಅರಣ್ಯ ಇಲಾಖೆ ಯವರ ಅಕ್ಷೇಪ ವ್ಯಕ್ತಪಡಿಸಿದರು. ಈ ಕಾರಣ ಅರ್ಜಿ ವಿಲೇವಾರಿಯಾಗದೆ ಹಿಂಬರಹ ಪಡೆದಿದ್ದೆವು. ಕಾರ್ಯಕ್ರಮವೊಂದಕ್ಕೆ ಮಧುಗಿರಿಗೆ ಆಗಮಿಸಿದ್ದ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವೀರಪ್ಪನವರ ಗೆ ವಕೀಲರ ಸಂಘದಿಂದ ಮನವಿ ಸಲ್ಲಿಸಿದ್ದ ಪ್ರತಿಫಲ ನಮಗೆ ಈ ಜಾಗ ದೊರೆತಿದೆ ಎಂದರು.
ನ್ಯಾಯಾಧೀಶ ಸಾಗರ್ ಗೌಡ ಪಾಟೀಲ್, ಉಪವಿಭಾಗಾಧಿಕಾರಿ ಸೋಮಪ್ಪಕಡಕೋಳ, ವಕೀಲರ ಸಂಘದ ಕಾರ್ಯದರ್ಶಿ ಎಂ.ವಿ.ದಯಾನಂದ ಸಾಗರ್, ಲೋಕೋಪಯೋಗಿ ಇಲಾಖೆಯ ಎಇಇ ರಾಜಗೋಪಾಲ್, ಕಂದಾಯ ನಿರೀಕ್ಷಕ ಜಿ.ಜಯರಾಮಯ್ಯ ಹಾಗೂ ಇತರರು ಇದ್ದರು.
0 Comments