ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ಹಣತೆಯೊಂದಿಗೆ ದೀಪಾವಳಿ ಆಚರಿಸುವ ದೀಪ ಸಂಜೀವಿನಿ ಅಭಿಯಾನಕ್ಕೆ ಇಲಾಖೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕಾರ್ಯದರ್ಶಿ ಡಾ|| ಸೆಲ್ವಕುಮಾರ್ ಅವರು ಇಂದು ಚಾಲನೆ ನೀಡಿದರು.
ನಂತರ ಮಾತನಾಡಿದ ಕಾರ್ಯದರ್ಶಿಗಳು, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕಾರ್ಯಕ್ರಮದಡಿ ಈ ವರ್ಷದ ದೀಪಾವಳಿಯ ವಿಶೇಷವಾಗಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ಹಣತೆಯನ್ನು ಬೆಳಗುವುದರೊಂದಿಗೆ ದೀಪಾವಳಿ ಆಚರಿಸೋಣ ಎಂಬ ಅಭಿಯಾನ ಆರಂಭಿಸಲಾಗಿದೆ. ರಾಜ್ಯಾದ್ಯಂತ ಆಚರಿಸಲ್ಪಡುತ್ತಿರುವ ಈ ಅಭಿಯಾನದಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಕರಕೌಶಲ್ಯ, ಕರಚಳಕದಿಂದ ವಿವಿಧ ವಿನ್ಯಾಸದ ಮಣ್ಣಿನ ಹಣತೆಗಳನ್ನು ತಯಾರಿಸಲಾಗಿದ್ದು ದಿನಾಂಕ: 25-10-2021 ರಿಂದ 30-10-2021ರ ಅವುಗಳ ಮಾರಾಟಕ್ಕಾಗಿ ವಿವಿಧ ಸ್ಥಳಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಬೆಂಗಳೂರಿನ ಬಹುಮಹಡಿ ಕಟ್ಟಡದ ಆವರಣದ ಅರಳಿಮರದ ಹತ್ತಿರ ಸ್ಥಾಪಿಸಿರುವ ಈ ದೀಪ ಸಂಜೀವಿನಿ ಕಾರ್ಯಕ್ರವನ್ನು ವಿದ್ಯುಕ್ತವಾಗಿ ಇಂದು ಉದ್ಘಾಟಿಸಲಾಯಿತು. ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿಗಳಾದ ಡಾ||-ಸೆಲ್ವಕುಮಾರ್ ಎಸ್. ಐ.ಎ.ಎಸ್. ರವರು ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ “ಮಹಿಳೆಯರು ಸಂಘಟನೆ ಮೂಲಕ ತಮ್ಮ ಕೌಶಲ್ಯ ಹಾಗೂ ಚಾಕಚಕ್ಯತೆಯನ್ನು ಉಪಯೋಗಿಸಿ ತಯಾರಿಸಿರುವ ಈ ಹಣತೆಗಳು ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿಯೊಬ್ಬರೂ ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಈ ಹಣತೆಗಳೊಂದಿಗೆ ದೀಪಾವಳಿ ಹಬ್ಬವನ್ನು ಅಚರಿಸುವ ಮೂಲಕ ಈ ಅಭಿಯಾನಕ್ಕೆ ಬೆಂಬಲ ನೀಡಬೇಕೆಂದು ಕರೆ ನೀಡಿದರು.”
ಬೆಂಗಳೂರಿನ ಬಿ.ಬಿಎಂ.ಪಿ ಆವರಣ, ಮೈಷುಗರ್ ಬಿಲ್ಡಿಂಗ್, ಖನಿಜ ಭವನ, ಕಾವೇರಿ ಭವನ ಸರ್ವೆ ಸೆಟಲ್‍ಮೆಂಟ್ ಕಛೇರಿ ಆವರಣ ಮುಂತಾದ ಕಡೆಗಳಲ್ಲಿ ಈ ದೀಪ ಮಾರಾಟದ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸ್ವ-ಸಹಾಯ ಮಹಿಳೆಯರು ತಯಾರಿಸಿರುವ ವಿಭಿನ್ನ ಮಾದರಿಯ ಹಣತೆಗಳು ಲಭ್ಯವಿರುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆಯ ಅಭಿಯಾನ ನಿರ್ದೇಶಕರಾದ ಕುಮಾರಿ. ಮಂಜುಶ್ರೀ ಎನ್. ರವರು ಮಾತನಾಡುತ್ತಾ, ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿಗಳ ಆವರಣಗಳಲ್ಲಿ ಈ ದೀಪ ಮಾರಾಟದ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯ ನೇತೃತ್ವದಲ್ಲಿ ಈ ಅಭಿಯಾನದ ಯಶಸ್ವಿಗೆ ಕಾರ್ಯಕ್ರಮ ರೂಪಿಸಲಾಗಿದ್ದು, ಸಾರ್ವಜನಿಕರು ಈ ದೀಪಗಳನ್ನು ಖರೀದಿಸುವ ಮೂಲಕ ಮಹಿಳೆಯರ ಉದ್ಯಮ ಬೆಳವಣಿಗೆಗೆ ಬೆಂಬಲಿಸಬೇಕೆಂದು ಕೋರಿದರು.
ಈಗಾಗಲೇ ಈ ದೀಪಗಳು ಅಮೇóಜಾನ್ ಆನ್‍ಲೈನ್ ಮಾರಾಟ ಜಾಲದಲ್ಲಿ ಲಭ್ಯವಿದ್ದು ಈ ವೇದಿಕೆ ಮೂಲಕವೂ ವಿವಿಧ ವಿನ್ಯಾಸದ ದೀಪಗಳನ್ನು ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ಸದ್ಯದಲ್ಲಿ ಕಲ್ಚರ್ ಸ್ಟ್ರೀಟ್ ಆನ್‍ಲೈನ್ ವೇದಿಕೆಯಲ್ಲಿ ಖರೀದಿಸಲು ಈ ದೀಪಗಳು ಲಭ್ಯವಾಗಲಿವೆ.
ಈ ಸಂದರ್ಭದಲ್ಲಿ ಬಹುಮಹಡಿ ಕಟ್ಟಡದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಸಂಜೀವಿನಿ ಸಂಸ್ಥೆಯ ಅಪರ ಅಭಿಯಾನ ನಿರ್ದೇಶಕರು, ಮುಖ್ಯ ಕಾರ್ಯಾಚರಣೆ ಅಧಿಕಾರಿ, ಯೋಜನಾ ನಿರ್ದೇಶಕರು ನಗರ ಅಭಿಯಾನ, ಉಪ ನಿರ್ದೇಶಕರುಗಳು, ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಉತ್ತಮ ಪ್ರತಿಕ್ರಿಯೆ:-
ಕಾರ್ಯಕ್ರಮದ ಉದ್ಘಾಟನೆಯ ನಂತರ ಬಹುಮಹಡಿ ಕಟ್ಟಡದ ಮಳಿಗೆಗಳಲ್ಲಿ ಸುತ್ತಲಿನ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಮತ್ತು ಸಾರ್ವಜನಿಕರು ಭೇಟಿ ನೀಡಿ ದೀಪಗಳನ್ನು ಖರೀದಿಸುವ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿರುವುದು ವರದಿಯಾಗಿದೆ.
0 Comments