ರಾಮನಗರ, ಬಿಡದಿ, ಸೆ.28: ಅಕ್ಟೋಬರ್ 30ರಂದು ನಡೆಯಲಿರುವ ಹಾನಗಲ್ ಮತ್ತು ಸಿಂಧಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್ ಸಿದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದ್ದಾರೆ.
ಎರಡೂ ಕ್ಷೇತ್ರಗಳ ಉಪ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸಿದ ಕೂಡಲೇ ಬಿಡದಿಯ ತಮ್ಮ ತೋಟದಮನೆಯಲ್ಲಿ ರಾಜಕೀಯ ಚಟುವಟಿಕೆ ಆರಂಭಿಸಿದ್ದು, ಅವರು ಮಾಧ್ಯಮಗಳ ಜತೆ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಎರಡು ಉಪ ಚುನಾವಣೆ ದಿನಾಂಕ ಘೋಷಣೆ ಆಗಿದೆ. ಇದನ್ನು ನಮ್ಮ ಪಕ್ಷ ಸ್ವಾಗತಿಸುತ್ತದೆ. ಸಿಂದಗಿ ಹಾಗೂ ಹಾನಗಲ್ ನಲ್ಲಿ ಶಾಸಕರ ಅಕಾಲಿಕ ಮರಣ ಹೊಂದಿದ್ದರು. ಈ ಕಾರಣಕ್ಕಾಗಿ ಇದೀಗ ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿದೆ. ಜೆಡಿಎಸ್ ಚುನಾವಣೆಗೆ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.
ನಿನ್ನೆಯಿಂದ ವಿನೂತನ ಕಾರ್ಯಗಾರ ಮಾಡುತ್ತಿದ್ದೇವೆ. ಈ ಸಮಯದಲ್ಲಿಯೇ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಹಬ್ಬ. ಇದು ನಮ್ಮ ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದತಾ ಪರೀಕ್ಷೆಯಂತೆ ಬಂದಿದೆ. ಈಗಾಗಲೇ ನಯಾಜ್ ಅವರನ್ನು ಹಾನಗಲ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇವೆ. ಅವರು ಸಕ್ರಿಯವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಐವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಈಗಾಗಲೇ ಚರ್ಚೆಗಳು ಕೂಡ ಮಾಡುತ್ತಿದ್ದೇವೆ. ಎರಡೂ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಹಾಕುತ್ತೇವೆ ಹಾಗೂ ಚುನಾವಣೆಗೆ ಸಾಮೂಹಿಕ ನಾಯಕತ್ವದಲ್ಲಿ ಹೋಗುತ್ತೇವೆ. ಇಂದಿನ ಸಭೆಯಲ್ಲಿ ಈ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಈ ಚುನಾವಣೆ ಗೆಲ್ಲಲು ಈ ಕಾರ್ಯಗಾರದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಸಹ ಅವರು ಹೇಳಿದರು.
ಈ ಚುನಾವಣೆಯೆಂಬ ಅಗ್ನಿಪರೀಕ್ಷೆಯಲ್ಲಿ ನಾವು ಖಂಡಿತವಾಗಿಯೂ ಗೆದ್ದು ಬರುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ತೋಟದ ಮನೆಯಲ್ಲಿ ಮಾಧ್ಯಮದವರೊಂದಿಗೆ ಹೇಳಿದರು. ಅಲ್ಪಸಂಖ್ಯಾತರು, ದಲಿತರು ಹಾಗೂ ಇತರೆ ದುರ್ಬಲವರ್ಗದ ಸಮಾಜವು ಜೆಡಿಎಸ್ ಪಕ್ಷದ ಪರವಾಗಿರುವುದು ಹಾಗೂ ರೈತ ಸಮೂಹ ನಮ್ಮ ಪಕ್ಷಕ್ಕೆ ಬೆಂಬಲ ನೀಡುವುದು ನಿಶ್ಚಿತ ಎಂದು ಸಹ ಹೇಳಿದರು. ಈಗಾಗಲೇ ಬಿಜೆಪಿ ಸರ್ಕಾರದಿಂದ ಜನರು ಬೆಲೆ ಏರಿಕೆ ಹಾಗೂ ಇತರ ಸಂಕಷ್ಟಗಳನ್ನು ಅನುಭವಿಸಿದ್ದು ಜನರಿಗೆ ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸವಿಲ್ಲದ ಕಾರಣ ನಮ್ಮ ಗೆಲುವು ಖಂಡಿತ ಎಂದು ಹೇಳಿದರು.
Shiva Prasad G , Varthajala Suddimane
0 Comments