ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯನ್ನು ಇನ್ನಷ್ಟು ತಿಂಗಳು ಮುಂದೂಡಿ, ಅನಧಿಕೃತವಾಗಿ ಅಧಿಕಾರ ಅನುಭವಿಸುವ ಉದ್ದೇಶದಿಂದ ಹಾಗೂ ಸೋಲಿನ ಭಯದಿಂದ ರಾಜ್ಯ ಸರ್ಕಾರವು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಆಯೋಗ ರಚಿಸಲು ಮುಂದಾಗಿದೆ.
ಮೂರು ನಗರಗಳ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಷ್ಟೇ ಅಕ್ರಮ ಮಾಡಿದರೂ ನಿರೀಕ್ಷಿತ ಫಲಿತಾಂಶ ಪಡೆಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸಿಲೆಂಡರ್ ಹಾಗೂ ಅನೇಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರು ತತ್ತರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿದೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಜನರು ಇನ್ನೂ ಮರೆತಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರಲ್ಲಿ ಆಡಳಿತವಿರೋಧಿ ಮನೋಭಾವ ಹುಟ್ಟಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ದರಿಂದ ಚುನಾವಣೆಗೆ ಹೆದರಿ ಸದಾ ಒಂದಿಲ್ಲೊಂದು ಕಾರಣ ಹುಡುಕಿಕೊಂಡು ಚುನಾವಣೆ ಮುಂದೂಡುವ ಕುತಂತ್ರ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ.
ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಬಹುತೇಕ ಚುನಾವಣೆಗಳು ನ್ಯಾಯಾಲಯ ಛೀಮಾರಿ ಹಾಕಿದ್ದರಿಂದಲೇ ನಡೆದಿವೆ. ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ಎಷ್ಟು ನಂಬಿಕೆ ಎನ್ನುವುದಕ್ಕೆ ಇದು ನಿದರ್ಶನ. ಈಗ ಜಿಲ್ಲಾ ಪಂಚಾಯ್ತಿ, ನಗರ ಪಂಚಾಯ್ತಿ ಚುನಾವಣೆ ನಡೆಸಲೂ ನ್ಯಾಯಾಲಯ ಆದೇಶಿಸಬಹುದೆಂಬ ಭಯ ರಾಜ್ಯ ಸರ್ಕಾರಕ್ಕಿದೆ. ಆದ್ದರಿಂದ ಕ್ಷೇತ್ರಗಳ ಪುನರ್ ವಿಂಗಡಣೆಗೆ ಪ್ರತ್ಯೇಕ ಆಯೋಗ ರಚಿಸುವ ಮೂಲಕ ಕಾಲಹರಣ ಮಾಡಲು ಮುಂದಾಗಿದೆ. ಇಂತಹ ಹೇಡಿತನದ ಮಾರ್ಗಗಳನ್ನು ಬದಿಗಿಟ್ಟು, ಶೀಘ್ರವೇ ಚುನಾವಣೆ ನಡೆಸುವ ದಿಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಲಿ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ..

0 Comments