ಕನ್ನಡ ಸಾಹಿತ್ಯ ಪರಿಷತ್ತು ಇಂದು (16-08-2021) ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ‘ವಿವಿಧ ಗ್ರಂಥಗಳಿಗೆ ದತ್ತಿ ಪ್ರಶಸ್ತಿ ಪ್ರದಾನ’ ಸಮಾರಂಭವನ್ನು ಆಯೋಜಿಸಿತ್ತು. ಹಿರಿಯ ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹಾಗೂ ಡಾ. ನರಹಳ್ಳಿ ಬಾಲಸುಬ್ರಮಣ್ಯ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಮಾತನಾಡಿ ಇದೊಂದು ಅಕ್ಷರ ಸಂಭ್ರಮ. ನಾಡಿನ ವಿವಿಧ ಭಾಗಗಳ 50ಕ್ಕೂ ಹೆಚ್ಚು ಲೇಖಕರು ಇಲ್ಲಿ ಸಮಾವೇಶಗೊಂಡಿದ್ದಾರೆ. ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡುವಾಗ ಶ್ರೇಷ್ಠತೆಯೇ ಆಯ್ಕೆಯ ಮಾನದಂಡವಾಗಿರುತ್ತದೆ. ಆದರೆ ಪರಿಷತ್ತು ವಿವಿಧ ಪ್ರಶಸ್ತಿಗಳಿಗೆ ವ್ಯಕ್ತಿಗಳನ್ನು ಆಯ್ಕೆಮಾಡುವಾಗ ಪ್ರಾದೇಶಿಕ, ಸಾಮಾಜಿಕ ಹಾಗೂ ಅರ್ಹತೆಯನ್ನು ಮಾನದಂಡಗಳನ್ನಾಗಿ ಇರಿಸಿಕೊಳ್ಳುತ್ತದೆ. ಲಿಂಗ ಸಮಾನತೆಯನ್ನೂ ಗಮನದಲ್ಲಿಟ್ಟುಕೊಳ್ಳುತ್ತದೆ ಎಂದರು.
ತಮ್ಮ ಸಂಪಾದಕತ್ವದ ಪಾಲಿ-ಕನ್ನಡ ನಿಘಂಟಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರ ಲಭಿಸಿದೆ. ಇದು ಪರಿಷತ್ತಿನಿಂದ ಇದು ನನಗೆ ದೊರೆತ ಮೊದಲ ದತ್ತಿ ಪುರಸ್ಕಾರ ಎಂದು ಸಂಭ್ರಮಿಸಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಬರೆಹದ ಸಮಯ ನಮ್ಮ ಜೀವನದ ಅತ್ಯುತ್ತಮ ಕ್ಷಣಗಳು. ನಮ್ಮ ಓದು, ತಿಳಿವಳಿಕೆ ನಿರರ್ಗಳವಾಗಿದ್ದರೆ ಒಳ್ಳೆಯ ಬರೆಹ ಸಾಧ್ಯವಾಗುತ್ತದೆ. ಬೇಡವಾದ ಕಸವನ್ನು ಮನಸ್ಸಿನಿಂದ ಹೊರಗೆಸೆದು ಮುಂದಕ್ಕೆ ನಡೆದರೆ ಲೇಖಕರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕನ್ನಡ ಪುಸ್ತಕಗಳಿಗೆ ವೈವಿಧ್ಯಮಯ ಓದುಗರಿದ್ದಾರೆ. ತಮ್ಮ ತಮ್ಮ ಆಸಕ್ತಿಗೆ ಅನುಗುಣವಾಗಿ ಅವರು ತಮಗೆ ಬೇಕಾದ ಪ್ರಕಾರದ ಕೃತಿಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಾರೆ ಎಂದರು.
ಮತ್ತೊಬ್ಬ ಮುಖ್ಯ ಅತಿಥಿ ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಜಾಗತಿಕ ಮಟ್ಟದವರೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಪರಿಷತ್ತಿನ ಹಾಗೆ ಸಾಹಿತ್ಯದ ಎಲ್ಲ ವಲಯಗಳನ್ನು ಒಳಗೊಂಡ ಘನತೆಯುಳ್ಳ ಇನ್ನೊಂದು ಸಂಸ್ಥೆ ಇಲ್ಲ. ಪರಿಷತ್ತು ನೀಡುವ ಮೊತ್ತವು ಪ್ರಶಸ್ತಿಯ ಮೌಲ್ಯವನ್ನು ಅಳೆಯುವ ಮಾನದಂಡವಾಗಬಾರದು. ಪರಿಷತ್ತಿನ ಪ್ರಶಸ್ತಿಗಳಿಗೆ ವಾಣಿಜ್ಯೀಕರಣದ ಪ್ರಭಾವ ಇಲ್ಲ ಎಂದರು. ಲೇಖಕನು ಪ್ರಶಸ್ತಿ ಬಂದಾಗ ಸಂಭ್ರಮಿಸುವುದು ಸಹಜ. ಅದರ ಜೊತೆಗೆ ದಿವ್ಯ ನಿರ್ಲಕ್ಷö್ಯವನ್ನೂ ರೂಢಿಸಿಕೊಂಡರೆ ಮಾತ್ರ ಒಳ್ಳೆಯ ಬರೆಹಗಾರರಾಗಲು ಸಾಧ್ಯವೆಂದರು.
ಈ ಸಮಾರಂಭದಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮರಾಜ ದಂಡಾವತಿ, ಶ್ರೀ ಕೆ. ರಾಜಕುಮಾರ್ ಹಾಗೂ ಗೌರವ ಕೋಶಾಧ್ಯಕ್ಷರಾದ ಶ್ರೀ ಪಿ. ಮಲ್ಲಿಕಾರ್ಜುನಪ್ಪ ಅವರು ಉಪಸ್ಥಿತರಿದ್ದರು.


0 Comments