ಪಾಡಿಗಾರು - ಉಡುಪಿ , ಆಗುಸ್ಟ್ 1 : ಬಾಲ್ಯದ ಅಮೂಲ್ಯ ಸಮಯವನ್ನು ವ್ಯರ್ದಗೊಳಿಸಬಾರದು. ಕಠಿಣವಾದ ಪರಿಶ್ರಮದಿಂದ ಅಧ್ಯಯನವನ್ನು ತಪಸ್ಸಿನಂತೆ ನಡೆಸಬೇಕು. ಈ ಮೂಲಕ ನಾವು ಪಡೆದ ವಿದ್ಯೆಯೇ ನಮಗೆ ಉನ್ನತ ಸ್ಥಾನವನ್ನು ನೀಡುತ್ತದೆ. ಸುಮಾರು 35 ವರ್ಷಗಳ ಹಿಂದೆ ನಾನು ಉನ್ನತಾಭ್ಯಾಸಕ್ಕಾಗಿ ನವದೆಹಲಿಯಲ್ಲಿದ್ದಾಗ ಪರಮಪೂಜ್ಯ ಶ್ರೀ ಪುತ್ತಿಗೆ ಶ್ರೀಪಾದರ ಸನ್ನಿಧಿಯಲ್ಲಿ ವೇದಾಂತ ಪರೀಕ್ಷೆಯನ್ನು ಕೊಟ್ಟಿದ್ದೆ. ಅಂದು ಶ್ರೀಗಳು ನನ್ನನ್ನು ವಿಶೇಷವಾಗಿ ಅನುಗ್ರಹಿಸಿದ್ದರು. ಇದೆಲ್ಲದರ ಫಲವಾಗಿ ಇವತ್ತು ಈ ಉನ್ನತ ಪದವಿ ದೊರೆತಿದೆ.
ಆದ್ದರಿಂದ ಕಠಿಣವಾದ ಪರಿಶ್ರಮದಿಂದ ಅಧ್ಯಯನವನ್ನು ನಡೆಸಿ ಎಂದು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ಕೆ.ಇ.ದೇವನಾಥನ್ ಇವರು ತಿಳಿಸಿದರು. ಶ್ರೀ ಪುತ್ತಿಗೆ ಶ್ರೀಪಾದರ ಕಾರ್ಯಕ್ರಮಗಳನ್ನು ಅಭಿನಂದಿಸಿದರು.
ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರ ನೇತೃತ್ವದಲ್ಲಿ ಪಾಡಿಗಾರಿನಲ್ಲಿ ನಡೆಯುತ್ತಿರುವ ಶ್ರೀ ಪುತ್ತಿಗೆ ವಿದ್ಯಾಪೀಠಕ್ಕೆ ವಿದ್ಯಾರ್ಥಿಗಳಿಗೆ ಹಿತವಚನ ನನ್ನು ನೀಡಿದರು. ಶ್ರೀ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ಪ್ರೊ.ದೇವನಾಥನ್ ಇವರ ವಿದ್ವತ್ತು ಜೊತೆಗೆ ಅವರು ನಡೆದುಕೊಳ್ಳುವ ಸರಳತೆಯು ಎಲ್ಲರಿಗೂ ಆದರ್ಶ. ಸಂಸ್ಕೃತದ ಉನ್ನತ ವಿದ್ವಾಂಸರು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಆಗಮಿಸಿದ್ದರಿಂದ ಸಂಸ್ಕೃತ ಕ್ಷೇತ್ರವು ಇನ್ನೂ ವ್ಯಾಪಕವಾಗಿ ಬೆಳಗಲಿ ಎಂದು ಅಭಿನಂದಿಸಿದರು. ಕುಲಪತಿಗಳಾಗಿ ಮೊದಲಬಾರಿಗೆ ಉಡುಪಿಗೆ ಆಗಮಿಸಿದ ಮಾನ್ಯ ಕುಲಪತಿಗಳನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಪುತ್ತಿಗೆ ವಿದ್ಯಾಪೀಠದ ಪ್ರಾಚಾರ್ಯರಾದ ವಿದ್ವಾನ್ ಸುನೀಲ್ ಆಚಾರ್ಯ, ವಿದ್ವಾನ್ ಶ್ರೀಪತಿ ಆಚಾರ್ಯ, ಮೊದಲಾದವರು ಉಪಸ್ಥಿತರಿದ್ದರು. ವಿದ್ವಾನ್ ಬಿ.ಗೋಪಾಲಾಚಾರ್ಯರು ಕಾರ್ಯಕ್ರಮವನ್ನು ನಿರೂಪಿಸಿದರು.




0 Comments