ಬಳ್ಳಾರಿ,ಆ.27: ಜಿಲ್ಲೆಯ ರೈತರು ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟ ಕೇಂದ್ರಗಳಿ0ದಲೇ ಖರೀದಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್ಲಾ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾರಾಟ ಮಾಡುತ್ತಿರುವ ವಿವಿದ ರಸಗೊಬ್ಬರಗಳ ದಾಸ್ತಾನು ಹಾಗೂ ಮಾರಾಟದ ವಿವರಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಅವರ ಮಾರಾಟ ಪರವಾನಿಗೆಯನ್ನು ಅಮಾನತ್ತು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೃಷಿ ಪರಿಕರ ಮಾರಾಟಗಾರರು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಕೃಷಿ ಪರಿಕರಗಳನ್ನು ಮಾರಾಟ ಮಾಡದಿರುವಂತೆ ಅವರು ತಿಳಿಸಿದ್ದಾರೆ.
ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಖರೀದಿಸಿದ ನಂತರ ಮಾರಾಟಗಾರರಿಂದ ಕಡ್ಡಾಯವಾಗಿ ತಪ್ಪದೆ ರಸಿದಿಯನ್ನು ಕೇಳಿ ಪಡೆಯಬೇಕು. ಬಿತ್ತನೆ ಬೀಜ ಖರೀದಿ ರಸಿದಿಯಲ್ಲಿ ತಳಿ ಹೆಸರು, ಲಾಟ್ ಸಂಖ್ಯೆ, ಮಾರಾಟಗಾರರ ಮತ್ತು ಉತ್ಪಾದಕರ ವಿಳಾಸವನ್ನು ಗಮನಿಸಬೇಕು. ಬಿತ್ತನೆ ಬೀಜದ ಚೀಲದಲ್ಲಿ ಸ್ವಲ್ಪ ಪ್ರಮಾಣದ ಬೀಜ ಮತ್ತು ಬಿತ್ತನೆ ಬೀಜದ ದೃಢೀಕರಣದ ಬಗ್ಗೆ ಲಗತ್ತಿಸಿದ ಟ್ಯಾಗ್‌ನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿರಿಸಿಕೊಳ್ಳಬೇಕು.
ಕೀಟನಾಶಕಗಳನ್ನು ಖರೀದಿಸುವಾಗ ಬಾಟಲಿ/ಟಿನ್/ಪಾಲಿಥೀನ್ ಪೌಚ್ ಮೇಲೆ ತಯಾರಕರ ಹೆಸರು, ತಯಾರಿಸಿದ ಹಾಗೂ ಎಕ್ಸ್ಪೈರಿ ದಿನಾಂಕ, ಬ್ಯಾಚ್ ಸಂಖ್ಯೆ ಮತ್ತು ಎರಡು ತ್ರಿಕೋನಗಳ ಚಿನ್ಹೆಯನ್ನು ತಪ್ಪದೇ ಗಮನಿಸಬೇಕು. ರಸಗೊಬ್ಬರದ ಚೀಲವನ್ನು ಖರೀದಿಸುವಾಗ ಚೀಲವನ್ನು ಯಂತ್ರದಿAದ ಹೊಲಿದಿರಬೇಕು ಮತ್ತು ನಮೂದಿಸಿದಂತೆ ತೂಕ ಸರಿಯಾಗಿದೇಯೇ ಎಂಬುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಸಂಶಯವಾದಲ್ಲಿ ತೂಕ ಮಾಡಿಸಿ ಖರೀದಿಸಬೇಕು. ರಸಗೊಬ್ಬರದ ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿಗೆ ಹಣವನ್ನು ನೀಡಬಾರದು. ರಸಗೊಬ್ಬರ ಖರೀದಿ ರಸೀದಿಯಲ್ಲಿ ರಸಗೊಬ್ಬರದ ಹೆಸರು, ಬ್ರಾಂಡ್ ಹೆಸರು ಮತ್ತು ಬ್ಯಾಚ್ ಸಂಖ್ಯೆ ನಮೂದಿಸಿರಬೇಕು. ರಸಗೊಬ್ಬರವನ್ನು ಖರೀದಿಸಬೇಕಾದರೆ ರೈತರು ತಪ್ಪದೇ ಆಧಾರ್ ಸಂಖ್ಯೆಯನ್ನು ನೀಡಿ ಪಿ.ಓ.ಎಸ್ ಮಷಿನ್ ಬಿಲ್ಲನ್ನು ತಪ್ಪದೇ ಪಡೆಯಬೇಕು ಎಂದು ಅವರು ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಬಳಕೆಯು ಹೆಚ್ಚಾಗುತ್ತಿರುವುದು ಕಂಡು ಬಂದಿದ್ದು, ಉತ್ತಮವಾಗಿ ಮಳೆಯಾಗಿರುವುದರಿಂದ ತೇವಾಂಶವೂ ಹೆಚ್ಚಿದ್ದು ಇದರ ಜೊತೆಗೆ ಅಧಿಕ ಪ್ರಮಾಣದ ಯೂರಿಯಾ ಬಳಕೆ ಮಾಡಿದ್ದಲ್ಲಿ ರೋಗ ಹಾಗೂ ಕೀಟ ಬಾಧೆ ಹೆಚ್ಚಾಗುವ ಸಂಭವವಿರುತ್ತದೆ. ಯೂರಿಯಾ ರಸಗೊಬ್ಬರದ ಮಾರಾಟ ದರವು ಉಳಿದೆಲ್ಲಾ ರಸಗೊಬ್ಬರಗಳಿಗಿಂತ ಕಡಿಮೆ ಇರುವುದರಿಂದ ಬಿತ್ತನೆ ಸಮಯದಲ್ಲಿ ಯೂರಿಯಾ ಮಾತ್ರ ಖರೀದಿಸದೆ ಸಮತೋಲನ ಪೋಷಕಾಂಶಗಳನ್ನು ಒದಗಿಸಲು ಕಾಂಪ್ಲೆಕ್ಸ್, ಡಿಎಪಿ ಮತ್ತು ಎಂಓಪಿ ರಸಗೊಬ್ಬರಗಳನ್ನೂ ಸಹ ಬಳಸುವುದು, ತೋಟಗಾರಿಕೆ ಬೆಳೆಗಳಿಗೆ ಹಾಗೂ ಹನಿ ನೀರಾವರಿ ಬೆಳೆಗಳಿಗೆ ಶೇ.100 ರಷ್ಟು ನೀರಿನಲ್ಲಿ ಕರಗುವ ರಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದು. ಕಬ್ಬು ಬೆಳೆಗಾರರು ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ಅಮೋನಿಯಂ ಸಲ್ಫೇಟ್ ಬಳಸುವುದು. ಯೂರಿಯಾ ರಸಗೊಬ್ಬರದಲ್ಲಿ ದಪ್ಪ ಕಾಳು ಹಾಗೂ ಸಣ್ಣ ಕಾಳಿನ ರಸಗೊಬ್ಬರ ಸರಬರಾಜಾಗುತ್ತಿದ್ದು, ಪೋಷಕಾಂಶಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದ್ದರಿಂದ ಲಭ್ಯವಿರುವ ಯಾವುದೇ ಗಾತ್ರದ ಯೂರಿಯಾ ರಸಗೊಬ್ಬರವನ್ನು ರೈತರು ಬಳಕೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ರೈತರು ರಸಗೊಬ್ಬರಗಳನ್ನು ಖರೀದಿಸುವಾಗ ತಪ್ಪದೇ ತಮ್ಮ ಗುರುತಿನ ಚೀಟಿ/ಆಧಾರ್ ಕಾರ್ಡ್ನ ಮಾಹಿತಿಯನ್ನು ಪರಿಕರ ಖರೀದಿಸುವ ಸಂದರ್ಭದಲ್ಲಿ ಪರಿಕರ ಮಾರಾಟ ಮಾಲೀಕರಿಗೆ ಒದಗಿಸಿ, ಪಿ.ಓ.ಎಸ್. ಯಂತ್ರದ ಮೂಲಕವೇ ಖರೀದಿಸುವುದು ಮತ್ತು ರಸೀದಿಯನ್ನು ಪಡೆಯಬೇಕು.
ರೈತ ಬಾಂಧವರಿಗೆ ನಕಲಿ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ತಯಾರಿಕೆ ಹಾಗೂ ಮಾರಾಟ ಮಾಡುವುದು ಕಂಡು ಬಂದಲ್ಲಿ ಆಯಾ ರೈತ ಸಂಪರ್ಕ ಕೇಂದ್ರದ/ತಾಲೂಕಿನ ಪರೀವೀಕ್ಷಕರಿಗೆ ದೂರವಾಣಿ ಮುಖಾಂತರ ಅಥವಾ ಲಿಖಿತ ದೂರು ನೀಡಿದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ರೈತ ಬಾಂಧವರು ನಕಲಿ ಪರಿಕರಗಳ ಮಾರಾಟ ತಡೆ ಹಿಡಿಯಲು ಇಲಾಖೆಗೆ ಸಹಕರಿಸುವಂತೆ ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ದೂ.ಸಂ:08392-276224 ಗೆ ಸಂಪರ್ಕಿಸಬಹುದು.

0 Comments