Ticker

6/recent/ticker-posts

Ad Code

Responsive Advertisement

ಕೋವಿಡ್ ಸಂದರ್ಭದಲ್ಲಿ ಮಾಧ್ಯಮಗಳಿಂದ ಸಮರ್ಥ ಕಾರ್ಯನಿರ್ವಹಣೆ

ಬೆಂಗಳೂರು,  ಜುಲೈ 01,  (ಕರ್ನಾಟಕ ವಾರ್ತೆ):‘ಕೋವಿಡ್ ಸಂಕಷ್ಟದ ಸಮಯದಲ್ಲಿ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿವೆ’ ಎನ್ನುವ ಅಭಿಪ್ರಾಯವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾದ ಡಿ.ಪಿ. ಮುರಳೀಧರ್ ವ್ಯಕ್ತಪಡಿಸಿದರು.

ಜುಲೈ 1 ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಏರ್ಪಡಿಸಿದ್ದ “ಜನಸಾಮಾನ್ಯರ ಮನಸ್ಸುಗಳ ಮೇಲೆ ಮಾಧ್ಯಮಗಳ ಪರಿಣಾಮ” ಫೇಸ್‍ಬುಕ್ ಆನ್‍ಲೈನ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
     ‘ಕರೋನಾ ಸಂದರ್ಭದಲ್ಲಿ ಮಾಧ್ಯಮಗಳು ವರದಿ ಮಾಡಿದ್ದನ್ನು ಕೆಲವೊಮ್ಮೆ ಅತಿರೇಕ ಅಥವಾ ಅತಿರಂಜಿತ ಎಂದು ವ್ಯಾಖ್ಯಾನಿಸಲಾಯಿತು. ಆದರೆ ವಾಸ್ತವವಾಗಿ ಮಾಧ್ಯಮಗಳು ಇರುವುದನ್ನು ಇದ್ದಂತೆ ತೋರಿಸಿ ಸಾರ್ವಜನಿಕರು ಎಚ್ಚರದಿಂದ ಇರಲು ಸಹಕರಿಸಿದವು. ಕೆಲವು ಹಂತದಲ್ಲಿ, ‘ವರದಿಗಳು ಜನತೆಯನ್ನು ಭಯಭೀತಗೊಳಿಸುವಂತಿವೆ’ ಎನ್ನುವ ಅನಿಸಿಕೆ ವ್ಯಕ್ತಪಡಿಸಿ ಕೆಲವರು ಇಂತಹ ವರದಿಗಳ ವಿರುದ್ಧ ಕೋರ್ಟ್ ಮೆಟ್ಟಿಲನ್ನೂ ಏರಿದರು. ಆದರೆ ಇಂತಹ ಬೆಳವಣಿಗೆಗಳು ನಿಜಕ್ಕೂ ಕಳವಳಕಾರಿ. ಪ್ರಜಾಪ್ರಭುತ್ವದಲ್ಲಿ ಇದ್ದುದನ್ನು ಇದ್ದಹಾಗೆ ಅಭಿವ್ಯಕ್ತಿ ಪಡಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಕೊರೊನಾ ಸಂಕಷ್ಟ ಸಂದರ್ಭವನ್ನು ಮಾಧ್ಯಮಗಳು ಜವಾಬ್ದಾರಿಯುತವಾಗಿ ನಿರ್ವಹಿಸಿ ಜನರ ಸಂಕಷ್ಟ ಏನು ಎಂಬುದನ್ನು ಸರ್ಕಾರಕ್ಕೆ ತಿಳಿಸಿಕೊಡುವ ಕಾರ್ಯ ಮಾಡಿವೆ. ಸರ್ಕಾರ ಕೂಡ ಇದಕ್ಕೆ ಸಮರ್ಥವಾಗಿ ಸ್ಪಂದಿಸಿ ಕಾಲಕಾಲಕ್ಕೆ ಆಸ್ಪತ್ರೆ ವ್ಯವಸ್ಥೆ, ಲಸಿಕೆ ವಿತರಣೆ, ಆಹಾರ ಸಾವiಗ್ರಿಗಳ ಪೂರೈಕೆ ಮಾಡಿ ಸೂಕ್ತ ಕ್ರಮ ಕೈಗೊಂಡಿದೆ.  ಮಾಧ್ಯಮಗಳಿಲ್ಲದ ಸರ್ಕಾರವನ್ನು ಪ್ರಜಾಪ್ರಭುತ್ವದಲ್ಲಿ ಊಹಿಸಿಕೊಳ್ಳುವುದು ಕಷ್ಟ. ಆದ್ದರಿಂದಲೇ  ಮಾಧ್ಯಮಗಳು ಸಮಾಜದ ಅವಿಭಾಜ್ಯ ಅಂಗ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.


‘ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಓರೆಕೋರೆಗಳನ್ನು ದಿಟ್ಟವಾಗಿ ಎತ್ತಿ ತೋರಿಸಿ  ರಚನಾತ್ಮಕ ಸಮಾಜ ನಿರ್ಮಾಣ, ದೇಶ ನಿರ್ಮಾಣದಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ.. ಆದ್ದರಿಂದ ಟಿಆರ್‍ಪಿಯನ್ನು ಗಮನದಲ್ಲಿ ಇಟ್ಟುಕೊಂಡು ರೋಚಕ ಸುದ್ದಿಗಳನ್ನು ಭಿತ್ತರಿಸದೇ ವಸ್ತುನಿಷ್ಠವಾಗಿ ವರದಿ ಮಾಡಿದ್ದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಕೋವಿಡ್ ಸಂದರ್ಭದಲ್ಲಿ ಮಾಧ್ಯಮ ಮಿತ್ರರು ಮೊದಲ ಸಾಲಿನ ಕರೋನಾ ಯೋಧರಾಗಿ ಕಾರ್ಯನಿರ್ವಹಿಸಿರುವುದು ಸಂತೋಷ.  ವೈದ್ಯಕೀಯ ಹಿನ್ನೆಲೆಯ ಸುದ್ದಿಗಳನ್ನು ಜನತೆಗೆ ನೀಡುವಾಗ ವೈದ್ಯಕೀಯ ಅಧ್ಯಯನ ಮಾಡಿದಲ್ಲಿ ಅತ್ಯುತ್ತಮ ವರದಿಗಳನ್ನು ನಿರೀಕ್ಷಿಸಬಹುದು ಎಂದು ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಪ್ರ್ರೊಫೆಸರ್ ಡಾ. ವಿಷ್ಣು ಎನ್ ಹಯಗ್ರೀವ ಅಭಿಪ್ರಾಯ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯ ರಾಜಕೀಯ ವಿಭಾಗದ ಮುಖ್ಯಸ್ಥರು ಹಾಗೂ ವರದಿಗಾರರಾದ ಹೆಚ್.ಎಸ್. ರವೀಶ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಮಾಧ್ಯಮಗಳು ಧನಾತ್ಮಕವಾದ ವರದಿಗಳನ್ನು ನೀಡಿವೆ. ಕಾಲಕಾಲಕ್ಕೆ ಸರ್ಕಾರದ ಆದೇಶಗಳನ್ನು ಮಾರ್ಗಸೂಚಿಗಳನ್ನು ಜನತೆಗೆ ತಲುಪಿಸುವ ಕಾರ್ಯ ಮಾಡಿವೆ. ಜನಸಾಮಾನ್ಯರು ಕೂಡ ಈ ಘಟ್ಟದಲ್ಲಿ ಮಾಧ್ಯಮಗಳ ಮೇಲೆ ಅತಿ ಹೆಚ್ಚು ಅವಲಂಬಿತರಾಗಿದ್ದರು. ನಗರ ಪ್ರದೇಶಗಳಲ್ಲಿನ ವೀಕ್ಷಕರು ಪ್ರಸಾರವಾಗುವ ಸುದ್ದಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದರೆ ಗ್ರಾಮೀಣ ಭಾಗಗಳಲ್ಲಿನ ವೀಕ್ಷಕರು ಮಾಧ್ಯಮಗಳಲ್ಲಿ ಭಿತ್ತರವಾಗುವ ವಿಷಯಗಳನ್ನೇ ವಿಶ್ವಾಸಾರ್ಹ ಸುದ್ದಿ ಮೂಲವಾಗಿ ಪರಿಗಣಿಸಿದ್ದರು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಿ. ರೂಪಾ ರವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement