ಕನ್ನಡ ಸಾಹಿತ್ಯ ಪರಿಷತ್ತು ಇಂದು (೦೧-೦೭-೨೦೨೧) ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಪ್ರಸಿದ್ಧ ಸಂಸ್ಕೃತಿ ಚಿಂತಕ ಡಾ. ಎಂ. ಮೋಹನ್ ಆಳ್ವ ಅವರಿಗೆ ೨೦೨೧ನೇ ಸಾಲಿನ ಈ ಪ್ರತಿಷ್ಠಿತ ದತ್ತಿ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಪ್ರದಾನ ಮಾಡಿದರು. ರೂ. ೫೧,೦೦೦/- ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಫಲಕ ನೀಡಿ ಪುರಸ್ಕೃತರನ್ನು ಗೌರವಿಸಲಾಯಿತು.
ದತ್ತಿ ಪುರಸ್ಕಾರವನ್ನು ಪ್ರದಾನ ಮಾಡಿ ಮಾತನಾಡಿದ ನಾಡೋಜ ಡಾ. ಮನು ಬಳಿಗಾರ್ ಅವರು ‘ಮಾತಿನಿಂದ ಅಲ್ಲದೆ ಕೃತಿಯಿಂದ ನಾಡಿಗೆ ಪರಿಚಯವಾದ ಡಾ. ಎಂ. ಮೋಹನ್ ಆಳ್ವ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ೨೦೨೧ನೆಯ ಸಾಲಿನ ಈ ಮೌಲಿಕ ದತ್ತಿ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಆತ್ಮ, ಮನಸ್ಸು ಮತ್ತು ಹೃದಯ ಶುದ್ಧಿಗಳನ್ನು ಉಳ್ಳ ಡಾ. ಆಳ್ವ ಅವರು ಶಿಕ್ಷಣ, ಸಂಸ್ಕೃತಿ, ಸಾಹಿತ್ಯ, ಕೃಷಿ, ಉದ್ದಿಮೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಈ ನಾಡು ಕಂಡ ಅತ್ಯಂತ ದಕ್ಷ ಹಾಗೂ ಕ್ರಿಯಾಶೀಲ ವ್ಯಕ್ತಿ. ಶ್ರೀ ನಾಲ್ವಡಿ ಅವರ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶಿಫಾರಸ್ಸು ಮಾಡುತ್ತದೆ’ ಎಂದರು.
ದತ್ತಿ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಮೂಡುಬಿದರೆಯ ಆಳ್ವಾಸ್ ಫೌಂಡೇಶ್‌ನ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಅವರು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅದೂ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿರುವ ಈ ಪ್ರಶಸ್ತಿಯನ್ನು ಸ್ವೀಕರಿಸಲು ಅತ್ಯಂತ ಸಂತೋಷವಾಗುತ್ತಿದೆ. ಪ್ರಶಸ್ತಿ ನನ್ನನ್ನು ವಿನೀತನನ್ನಾಗಿ ಮಾಡಿದೆ ಎಂದರು. ನಾಲ್ವಡಿಯವರು ಸಮರ್ಥ ಆಡಳಿತಗಾರರು, ಈ ನಾಡಿನ ಅಭಿವೃದ್ಧಿಯ ಚಹರೆಯನ್ನೇ ಬದಲಿಸಿದವರು. ಅವರನ್ನು ರಾಜರ್ಷಿ ಎಂದಷ್ಟೇ ಅಲ್ಲ; ಬ್ರಹ್ಮರ್ಷಿ ಎಂದು ಕರೆದರೂ ತಪ್ಪಿಲ್ಲ ಎಂದರು. ಸಾಮಾನ್ಯವಾದ ಸರ್ಕಾರಿ ಬಯಲು ಕನ್ನಡ ಶಾಲೆಯಲ್ಲಿ ಕಲಿತ ನನ್ನನ್ನು ಸಕಾರಾತ್ಮಕ ಧೋರಣೆಯೇ ಇಲ್ಲಿಯವರೆಗೆ ಮುನ್ನಡೆಸಿದೆ ಎಂದರು. ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಸಮಸ್ಯೆಗಳು ಮತ್ತು ಅವುಗಳನ್ನು ಪರಿಹರಿಸಲು ಸರ್ಕಾರ ಕ್ರಿಯಾಶೀಲವಾಗಬೇಕು ಎಂದರು.
ಈ ಸಮಾರಂಭದಲ್ಲಿ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮರಾಜ ದಂಡಾವತಿ, ಶ್ರೀ ಕೆ. ರಾಜಕುಮಾರ್ ಹಾಗೂ ಗೌರವ ಕೋಶಾಧ್ಯಕ್ಷರಾದ ಶ್ರೀ ಪಿ. ಮಲ್ಲಿಕಾರ್ಜುನಪ್ಪ ಅವರುಗಳು ಉಪಸ್ಥಿತರಿದ್ದರು.
0 Comments