ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಶಿವರಾಜು ಹಾಗೂ ಅಬ್ದುಲ್ ವಾಜೀದ್ ಅವರುಗಳು ಶೀಘ್ರ ಚುನಾವಣೆ ನಡೆಸಲು ಸರ್ಕಾರಕ್ಕೆ ಸೂಚಿಸುವಂತೆ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿಕೊಂಡಿದ್ದರು. ಬಿಬಿಎಂಪಿ ಚುನಾವಣೆ ವಿಚಾರ ಸುಪ್ರೀಂಕೋರ್ಟ್ ಅಂಗಳದಲ್ಲಿರುವುದರಿಂದ ಹಾಗೂ ಡಿಲಿಮಿಟೇಷನ್ ಸಮಿತಿ ಇನ್ನು ವರದಿ ನೀಡಿಲ್ಲ. ಹೀಗಾಗಿ ಕನಿಷ್ಠ ಒಂದೂವರೆ ವರ್ಷಗಳ ಕಾಲ ಬಿಬಿಎಂಪಿಗೆ ಚುನಾವಣೆ ನಡೆಯುವುದು ಅನುಮಾನ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.
198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪರಿವರ್ತಿಸಿ ವಾರ್ಡ್ ವಿಂಗಡಣೆ, ಹೊಸ ಪ್ರದೇಶಗಳ ಸೇರ್ಪಡೆ, ಗಡಿ ಗುರುತಿಸುವಿಕೆ ಕಾರ್ಯ ಪೂರ್ಣಗೊಳಿಸಲು ಸರ್ಕಾರಕ್ಕೆ ಕನಿಷ್ಠ ಒಂದು ವರ್ಷಗಳ ಕಾಲವಕಾಶ ಬೇಕಾಗುತ್ತದೆ. ಬಿಬಿಎಂಪಿ ಹೊರ ವಲಯದಲ್ಲಿರುವ ಕೆಲ ಗ್ರಾಮ ಪಂಚಾಯಿತಿ ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಂಡು 243 ವಾರ್ಡ್ ರಚಿಸಲು ಸರ್ಕಾರ ನಿರ್ಧರಿಸಿದೆ.
ಆದರೆ, ಬಿಬಿಎಂಪಿಗೆ ಸೇರ್ಪಡೆಯಾಗಲಿವೆ ಎಂದು ಗುರುತಿಸಲ್ಪಟ್ಟಿರುವ ಕೆಲ ಪ್ರದೇಶಗಳಲ್ಲಿ ಈಗಾಗಲೇ ಗ್ರಾ.ಪಂ ಚುನಾವಣೆ ಪೂರ್ಣಗೊಂಡು ಸದಸ್ಯರು ಐದು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಒಂದು ವೇಳೆ ಬಿಬಿಎಂಪಿಗೆ ಸೇರ್ಪಡೆಗೊಳ್ಳುವ ಪ್ರದೇಶಗಳಿಂದ ಆಯ್ಕೆಯಾಗಿರುವ ಗ್ರಾ.ಪಂ ಸದಸ್ಯರು ಕೋರ್ಟ್ ಮೆಟ್ಟಿಲೇರಿದರೆ ಚುನಾವಣೆ ಮತ್ತಷ್ಟು ಕಾಲ ಮುಂದೂಡಿಕೆಯಾಗುವುದು ಖಚಿತ.
ವಾರ್ಡ್ ಪುನರ್‍ವಿಂಗಡಣಾ ಆಯೋಗ ಈಗ ಡಿಲಿಮಿಟೇಷನ್ ಕಾರ್ಯ ಆರಂಭಿಸಿದರೂ ವರದಿ ನೀಡಲು ಆರು ತಿಂಗಳ ಸಮಯ ಬೇಕು. ಸರ್ಕಾರ ಅಂದುಕೊಂಡಂತೆ ಎಲ್ಲಾ ಪ್ರಕ್ರಿಯೆಗಳನ್ನುಪೂರ್ಣಗೊಳಿಸಿ 243 ವಾರ್ಡ್‍ಗಳ ರಚನೆ ಕಾರ್ಯ ಅಂತಿಮಗೊಳಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಬೇಕು. 243 ವಾರ್ಡ್‍ಗಳಿಗೆ ಚುನಾವಣಾ ಆಯೋಗ ಹೊಸ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲು ಕನಿಷ್ಠ ಐದು ತಿಂಗಳ ಕಾಲವಕಾಶ ಬೇಕಾಗುತ್ತದೆ. ಹೀಗಾಗಿ ಕನಿಷ್ಠ ಒಂದೂವರೆ ವರ್ಷ ಬಿಬಿಎಂಪಿಗೆ ಚುನಾವಣೆ ನಡೆಯುವುದು ಅನುಮಾನವಾಗಿದೆ.
ಇನ್ನು ಒಂದೂವರೆ ವರ್ಷ ಬಿಬಿಎಂಪಿಗೆ ಚುನಾವಣೆ ನಡೆಯುವುದು ಅನುಮಾನವಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ರಚನೆ ಮಾಡಲಾಗಿರುವ ಡಿಲಿಮಿಟೇಶನ್ ಆಯೋಗ ಆರು ತಿಂಗಳೊಳಗೆ ಸಭೆ ನಡೆಸಿ ವರದಿ ನೀಡಬೇಕಿತ್ತು. ಆಯೋಗ ರಚನೆ ಮಾಡಿ ಆರು ತಿಂಗಳು ಕಳೆದರೂ ಇದುವರೆಗೆ ಒಂದೇ ಒಂದು ಸಭೆ ನಡೆಸಿಲ್ಲ. ಹೀಗಾಗಿ ಕನಿಷ್ಠ ಒಂದೂವರೆ ವರ್ಷ ಬಿಬಿಎಂಪಿಗೆ ಚುನಾವಣೆ ನಡೆಯುವುದು ಅಸಾಧ್ಯ ಎಂಬಂತಾಗಿದೆ.
ಈ ಹಿಂದೆ ರಾಜ್ಯ ಚುನಾವಣಾ ಆಯೋಗ 198 ವಾರ್ಡ್‍ಗಳಿಗೆ ಚುನಾವಣೆ ನಡೆಸಲು ತೀರ್ಮಾನಿಸಿ ಮೀಸಲಾತಿ ಪಟ್ಟಿ ಪ್ರಕಟಿಸಿತ್ತು. ಮಾತ್ರವಲ್ಲ ಬಿಬಿಎಂಪಿಗೆ ಸಕಾಲಕ್ಕೆ ಚುನಾವಣೆ ನಡೆಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ, ಬಿಬಿಎಂಪಿಯ ಅಭಿವೃದ್ಧಿ ದೃಷ್ಟಿಯಿಂದ 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಿರುವುದರಿಂದ ಹೈಕೋರ್ಟ್ ಸೂಚನೆಯಂತೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಮತ್ತಷ್ಟು ಕಾಲವಕಾಶ ನೀಡುವಂತೆ ಸರ್ಕಾರ ಸುಪ್ರೀಂ ಕೋರ್ಟ್ ಮೇಟ್ಟಿಲೇರಿತ್ತು.
ಸರ್ಕಾರದ ಷಡ್ಯಂತ್ರ: ಹೊಸ ವಾರ್ಡ್‍ಗಳ ರಚನೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಷಡ್ಯಂತ್ರ ರೂಪಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಆರೋಪಗಳಿಗೆ ಪುಷ್ಠಿ ನೀಡುವಂತೆ ಸರ್ಕಾರ ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಸುಪ್ರೀಂಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಲು ಮೀನಾಮೇಷ ಎಣಿಸುತ್ತಿರುವುದು ಕಣ್ಣಿಗೆ ಕಾಣುವ ಸತ್ಯವಾಗಿದೆ.
ಬಿಬಿಎಂಪಿ ಅವಧಿ 2020 ಸೆ.10ಕ್ಕೆ ಪೂರ್ಣಗೊಂಡ ನಂತರ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿತ್ತು. ಇದರ ಜತೆಗೆ ವಾರ್ಡ್ ಪುನರ್‍ವಿಂಗಡಣೆ ಮಾಡಿ ಆರು ತಿಂಗಳಳೊಗೆ ವರದಿ ನೀಡುವಂತೆ 2021 ಜನವರಿ 29 ರಂದು ಮುಖ್ಯ ಆಯುಕ್ತರ ನೇತೃತ್ವದಲ್ಲಿ ಡಿಲಿಮಿಟೇಷನ್ ಆಯೋಗ ರಚಿಸಿ ಆರು ತಿಂಗಳ ಒಳಗೆ ವರದಿ ನೀಡುವಂತೆ ಸೂಚನೆ ನೀಡಿತ್ತು.
ಬಿಎಂಪಿಗೆ ಚುನಾವಣೆ ನಡೆಸಲು ಇಷ್ಟವಿಲ್ಲದ ಕಾರಣ ವಾರ್ಡ್ ಪುನರ್‍ವಿಂಗಡಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಸರ್ಕಾರ ಚುನಾವಣೆಯನ್ನು ಮುಂದೂಡುವ ಕಾರ್ಯದಲ್ಲಿ ನಿರತವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ನಮೂದಿಸಿದೆ ಎಂದು ತಿಳಿದುಬಂದಿದೆ.
ಒಟ್ಟಾರೆ, ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿ, ಚುನಾವಣಾ ಆಯೋಗದ ಅಭಿಪ್ರಾಯ ಹಾಗೂ ಶೀಘ್ರ ಚುನಾವಣೆ ನಡೆಸುವಂತೆ ಕೆಲ ಬಿಬಿಎಂಪಿ ಮಾಜಿ ಸದಸ್ಯರು ಮಾಡಿಕೊಂಡಿರುವ ಅರ್ಜಿಗಳ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಆಧಾರದ ಮೇಲೆ ಬಿಬಿಎಂಪಿ ಚುನಾವಣಾ ಹಣೆಬರಹ ನಿರ್ಧಾರವಾಗಲಿದೆ.

0 Comments