Ticker

6/recent/ticker-posts

Ad Code

Responsive Advertisement

ಮಾಧ್ಯಮದವರ ಮುಂದೆ ತಬ್ಬಿಬ್ಬಾದ ಶಾಸಕ ರೇಣುಕಾಚಾರ್ಯ


ಮಾಧ್ಯಮಗಳನ್ನು ನೋಡಿದ ತಕ್ಷಣ ಮಾತನಾಡಲು ಮುಂದಾಗುವ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ   ಭೇಟಿ ಮಾಡಿದ್ದರು. ನಂತರ ವಿಧಾನಸೌಧಕ್ಕೆ ಬಂದಿದ್ದ ಅವರು ಆ ಬಗ್ಗೆ ಸ್ಪಷ್ಟನೆ ಕೊಡಲು ಮುಂದಾದಾಗ ತಬ್ಬಿಬ್ಬಾಗಿ, ತಮ್ಮ ಮಾತನ್ನು ಅರ್ಧಕ್ಕೆ ಮೊಟಕುಗೊಳಿಸಿದ ಬೆಳವಣಿಗೆ ನಡೆಯಿತು.

 "ಸಿಎಂ ಯಡಿಯೂರಪ್ಪ ಅವರ ಬಳಿ ಹೋಗಿದ್ದು ಕೇವಲ ಅನುದಾನ ಕೇಳಲು ಅಷ್ಟೇ. ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತೇನೆ. ಕೊರೊನಾ ಸೋಂಕು ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇನೆ" ಎಂದು ಸಿಎಂ ಭೇಟಿ ಕುರಿತು ರೇಣುಕಾಚಾರ್ಯ ಸ್ಪಷ್ಟನೆ ಕೊಟ್ಟರು.

"ಮೈಸೂರಿನಲ್ಲಿ ಯಾರೋ ಒಬ್ಬರು ಸಿಎಂ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರೂ ಪದೇ ಪದೇ ಮಾತನಾಡುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲು ರಾಜೀನಾಮೆ ಕೊಡಲಿ. ರಾಜಕಾರಣದ ಬಗ್ಗೆ ಅಸಹ್ಯ ವಾಗುತ್ತಿದೆ. ಹೀಗಾಗಿ ದೆಹಲಿಗೆ ಹೋಗಿ ರಾಷ್ಟ್ರೀಯ ‌ನಾಯಕರನ್ನು ಭೇಟಿ ಮಾಡುತ್ತೇವೆ. ಇಬ್ಬರು ಶಾಸಕರ ವಿರುದ್ಧ ದೂರು ಕೊಡುತ್ತೇವೆ. ಆ ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಒತ್ತಡ ಹಾಕುತ್ತೇವೆ. ನಮ್ಮ‌ ಹೈಕಮಾಂಡ್ ಬಹಳ‌ ಬಲಿಷ್ಠವಾಗಿದೆ" ಎಂದರು. 

ಶಾಸಕರ ಉಚ್ಛಾಟನೆ, ಶಾಸಕಾಂಗ ಪಕ್ಷ, ಹೈಕಮಾಂಡ್ ಹೀಗೆ ಒಂದಕ್ಕೊಂದು ಸಂಬಂಧವಿಲ್ಲದಂತೆ  ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡುತ್ತಲೇ ಇದ್ದರು. ಆಗ ಮಧ್ಯ ಪ್ರವೇಶಿಸಿದ ಮಾಧ್ಯಮ ಪ್ರತಿನಿಧಿಗಳು, "ಶಾಸಕರಿಗೆ ಎಚ್ಚರಿಕೆ ಕೊಡಲು ನೀವು ಯಾರು? ಯಾರು ಬಿಜೆಪಿ ಶಾಸಕರಿಗೆ ಎಚ್ಚರಿಕೆ ಕೊಟ್ಟರು? ಎಂದು ನಾವು ಸುದ್ದಿಕೊಡಬೇಕು. ನೀವು ಪಕ್ಷ ಹೈಕಮಾಂಡಾ? ಅಥವಾ ಪಕ್ಷದ ಅಧ್ಯಕ್ಷರಾ? ಇಲ್ಲವೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾ? ಅಥವಾ ನೀವು ಮುಖ್ಯಮಂತ್ರಿ ಆಗಿದ್ದೀರಾ? ಈ ಬಗ್ಗೆ ಮೊದಲು ಸ್ಪಷ್ಟನೆ ಕೊಡಿ" ಎಂದು ಪ್ರಶ್ನೆಗಳನ್ನು ಕೇಳಿದರು.

ಆಗ ಪ್ರಶ್ನೆಗಳಿಗೆ ಉತ್ತರಿಸಲಾಗದೇ ತಬ್ಬಿಬ್ಬಾದ ರೇಣುಕಾಚಾರ್ಯ ಅವರು, ಅಲ್ಲಿಂದ ತೆರಳಿದರು. "ಇರಿ ಸರ್. ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಸುದ್ದಿಯನ್ನು ಪ್ರಸಾರ ಮಾಡಲು ಅನುವು ಮಾಡಿಕೊಡಿ" ಎಂದು ಮಾಧ್ಯಮ ಪ್ರತಿನಿಧಿಗಳು ಮನವಿ ಮಾಡಿಕೊಂಡರೂ ಸಹ ಶಾಸಕ ರೇಣುಕಾಚಾರ್ಯ ಹಿಂದಿರುಗಿಯೂ ನೋಡಲಿಲ್ಲ! ಮಾಧ್ಯಮ ಪ್ರತಿನಿಧಿಗಳನ್ನು ನೋಡಿ ಮಾತನಾಡಲು ಮುಂದಾಗಿದ್ದ ಶಾಸಕ ರೇಣುಕಾಚಾರ್ಯ ಅವರಿಗೆ ತೀವ್ರ ಇರಿಸು ಮುರುಸಾಗಿದ್ದು ಅವರ ಮುಖದಲ್ಲಿಎದ್ದು ಕಾಣುತ್ತಿತ್ತು.


Post a Comment

0 Comments

Ad Code

Responsive Advertisement