Ticker

6/recent/ticker-posts

Ad Code

Responsive Advertisement

ತಮಿಳುನಾಡು ಕಾವೇರಿ ನದಿ ಜೋಡಣೆಯ ‘ಬೃಹತ್‌ ಯೋಜನೆ’ಗೆ ಆಕ್ಷೇಪ ಎತ್ತದ ರಾಜ್ಯ!

 


ಕಾವೇರಿಯ 45 ಟಿಎಂಸಿ ಅಡಿ ಹೆಚ್ಚುವರಿ ನೀರಿನ ಬಳಕೆಯ ಉದ್ದೇಶದೊಂದಿಗೆ ತಮಿಳುನಾಡು ಸರ್ಕಾರ ಆರಂಭಿಸಿರುವ ನದಿ ಜೋಡಣೆಯ ‘ಬೃಹತ್‌ ಯೋಜನೆ’ಗೆ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸುವುದಕ್ಕೂ ರಾಜ್ಯ ಸರ್ಕಾರ ಮೀನ–ಮೇಷ ಎಣಿಸುತ್ತಿದೆ.

ಕಾವೇರಿ ಕಣಿವೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಬರಪೀಡಿತ ಜಿಲ್ಲೆಗಳ ಜನರಿಗೆ ಕುಡಿಯಲು ಪೂರೈಸುವ ಸದುದ್ದೇಶದೊಂದಿಗೆ ರಾಜ್ಯ ಆರಂಭಿಸುವ ಪ್ರತಿ ಯೋಜನೆಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸುವುದನ್ನು ತಮಿಳುನಾಡು ರೂಢಿ ಮಾಡಿಕೊಂಡಿದೆ. ಆದರೆ, ಕರ್ನಾಟಕ ಸರ್ಕಾರ ತನ್ನ ಪಾಲಿನ ನ್ಯಾಯಸಮ್ಮತ ನೀರನ್ನು ಪಡೆದುಕೊಳ್ಳಲು ಕಾನೂನು ಹೋರಾಟಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಕಾವೇರಿ ನದಿಯನ್ನು ವೆಲ್ಲಾರು, ವೈಗೈ ಮತ್ತು ಗುಂಡಾರು ನದಿಗಳೊಂದಿಗೆ ಜೋಡಿಸುವ ಮೊದಲ ಹಂತದ ಯೋಜನೆಗೆ ಕಳೆದ ಫೆಬ್ರುವರಿ 21ರಂದೇ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿರಾಳಿಮಲೈ– ಕುಣ್ಣತ್ತೂರ್ ಬಳಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 

ಆಗ ರಾಜ್ಯದ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಈ ಸಂಬಂಧ ದೆಹಲಿಯಲ್ಲಿ ಕಾನೂನು ತಂಡದ ಸಭೆ ನಡೆಸಿ, ತಮಿಳುನಾಡಿನ ಯೋಜನೆಗೆ ಅನುಮತಿ ನೀಡದಿರುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದರು. ಯೋಜನೆ ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸುವುದಾಗಿ ಹೇಳಿದ್ದರು.

ಆ ಹೇಳಿಕೆ ನೀಡಿದ ಕೆಲವೇ ದಿನಗಳ ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ತಮಿಳುನಾಡು ಯೋಜನೆಗೆ ಚಾಲನೆ ನೀಡಿ ನಾಲ್ಕೂವರೆ ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆಯಾಗಿಲ್ಲ.
ಜಲವಿವಾದ ಕಾನೂನು ತಜ್ಞರ ರಾಜ್ಯ ತಂಡವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವ ನಿಟ್ಟಿನಲ್ಲಿ ಆಕ್ಷೇಪಣಾ ಅರ್ಜಿ ಸಿದ್ಧಪಡಿಸಿ 15 ದಿನಗಳೇ ಕಳೆದಿದ್ದರೂ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಪತ್ರ ಬರೆದಿದ್ದೇ ತಪ್ಪು: ‘ಮೇಕೆದಾಟು ಯೋಜನೆಗೆ ಅಡ್ಡಿಪಡಿಸಬಾರದು ಎಂದು ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಪತ್ರ ಬರೆದಿದ್ದೇ ತಪ್ಪು’ ಎಂಬ ಅಭಿಪ್ರಾಯ ಕಾನೂನು ತಂಡದಿಂದ ವ್ಯಕ್ತವಾಗಿದೆ.

ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ‘ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಿ’ ಎಂದು ನ್ಯಾಯಪೀಠ ಸಲಹೆಯನ್ನೂ ನೀಡಿಲ್ಲ. ಆದರೂ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿರುವುದು ಸರಿಯಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

Post a Comment

0 Comments

Ad Code

Responsive Advertisement