ಕೇರಳದ ನಂತರ ದಕ್ಷಿಣ ಭಾರತ ರಾಜ್ಯಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ. ಕೇರಳ ನಂತರ ತಮಿಳುನಾಡು, ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದೆ.
ತಮಿಳುನಾಡಿನಲ್ಲಿ ಇದುವರೆಗೆ 25,00,434 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಸಾವಿನ ಸಂಖ್ಯೆ 34,023ಗೆ ತಲುಪಿದೆ. 21,207 ಸಕ್ರಿಯ ಪ್ರಕರಣಗಳಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಸರ್ಕಾರ, ರಾಜ್ಯದಲ್ಲಿ ಆಗಸ್ಟ್ 9ರವರೆಗೂ ಲಾಕ್‌ಡೌನ್ ಮುಂದುವರೆಸುವುದಾಗಿ ಘೋಷಣೆ ಮಾಡಿದೆ. ಹಿಂದಿನ ಆದೇಶಕ್ಕೆ ಅನುಗುಣವಾಗಿ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಕೊರೊನಾ ನಿಯಮಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ತಿಳಿಸಿದೆ.
ಜುಲೈ 16ರಂದು ಲಾಕ್ಡೌನ್ ಆದೇಶವನ್ನು ಹೊರಡಿಸಲಾಗಿತ್ತು. ರಾಜ್ಯದಲ್ಲಿ ಈಜುಕೊಳಗಳು, ಬಾರ್, ರೆಸ್ಟೋರೆಂಟ್‌ಗಳು, ಶಿಕ್ಷಣ ಸಂಸ್ಥೆಗಳು, ಮೃಗಾಲಯಗಳು ಹಾಗೂ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿರಲಿಲ್ಲ. ಇದರೊಂದಿಗೆ ಅಂತರರಾಜ್ಯ ಪ್ರಯಾಣಕ್ಕೂ ನಿರ್ಬಂಧ ಹೇರಲಾಗಿತ್ತು. ಯಾವುದೇ ಕಾರ್ಯಕ್ರಮಗಳಿಗೂ ಅವಕಾಶ ನೀಡಿರಲಿಲ್ಲ. ಇದೀಗ ನಿಯಮಗಳನ್ನು ಇನ್ನೂ ಕೆಲವು ದಿನಗಳ ಕಾಲ ಮುಂದುವರೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕಳೆದ ತಿಂಗಳು ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿತ್ತು. ರಾಜ್ಯದ 31 ಜಿಲ್ಲೆಗಳಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮತ್ತೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮತ್ತೆ ಒಂದು ಸಾವಿರದ ಮೇಲೆ ದಿನನಿತ್ಯದ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ.
ರಾಜ್ಯದಲ್ಲಿ ಜನರು ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ. ಇದರಿಂದ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಸುಬ್ರಹ್ಮಣಿಯನ್ ಹೇಳಿದ್ದಾರೆ.
"ನಾವು ಈಗ ಹೆಚ್ಚಿನ ಜನರನ್ನು ಪರೀಕ್ಷಿಸುತ್ತಿದ್ದೇವೆ. ಸಂಪರ್ಕ ಪತ್ತೆ ಹಚ್ಚುವಿಕೆ ಕೂಡ ಹೆಚ್ಚಿದೆ. ವಾರದ ಹಿಂದೆ ದಿನಕ್ಕೆ ಸುಮಾರು 1.3 ಲಕ್ಷ ಪರೀಕ್ಷೆಗಳನ್ನು ಮಾಡುತ್ತಿದ್ದೆವು. ಈಗ 1.5 ಲಕ್ಷ ಜನರನ್ನು ಪರೀಕ್ಷಿಸುತ್ತಿದ್ದೇವೆ. ಆ ಪೈಕಿ ಹೆಚ್ಚಿನ ಪ್ರಕರಣಗಳು ಅಪಾಯಕಾರಿಯಾಗಿದೆ. ಹೊಸ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೇ 21 ರಿಂದ ಪ್ರತಿ ದಿನ ಹೊಸ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ದಾಖಲಿಸಿದ ನಂತರ, ತಮಿಳುನಾಡಿನಲ್ಲಿ ಗುರುವಾರ 69 ದಿನಗಳ ನಂತರ ದೈನಂದಿನ ಪ್ರಕರಣಗಳ ಹೆಚ್ಚಳವಾಗಿದೆ. ಚೆನ್ನೈ, ಕೊಯಮತ್ತೂರು ಮತ್ತು ಈರೋಡ್‌ನಲ್ಲಿ ಕಳೆದ ಐದು ದಿನಗಳಿಂದ ಪ್ರತಿ ದಿನವೂ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿದೆ.
ದೇಶದಲ್ಲಿ ಕೆಲವು ವಾರಗಳಿಂದ ಇಳಿಕೆಯಾಗಿದ್ದ ಕೊರೊನಾ ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಕಳೆದ ಎರಡು ದಿನಗಳಿಂದ ದಾಖಲಾಗುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಕೇರಳವೊಂದರಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸದ್ದಿಲ್ಲದೇ ಏರಿಕೆಯಾಗುತ್ತಿದೆ.

0 Comments