ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಬಗ್ಗೆ ಜಮೀರ್ ಅಹಮದ್ ಅವರು ಲಘುವಾಗಿ ಮಾತನಾಡಿದ್ದಾರೆ ಕೂಡಲೇ ಕ್ಷಮೆ ಕೇಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಒತ್ತಾಯಿಸಿದ್ದಾರೆ. ಕೇವಲವಾಗಿ ಮಾತನಾಡುತ್ತಿರುವ ಜಮೀರ್ ಅಹಮದ್ ಅವರು, ಕೂಡಲೇ ಕುಮಾರಣ್ಣ ಅವರ ಬಳಿ ಕ್ಷಮೆ ಕೇಳಬೇಕು. ಟೀಕೆ ಮಾಡೋದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದಿದ್ದಾರೆ.
ಪಕ್ಷದ ಕಾರ್ಯಕರ್ತರಲ್ಲಿ ತುಂಬಾ ಬೇಸರ ಮೂಡಿಸಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗಬಹುದು ಅಂದುಕೊAಡಿದ್ದಾರೆ ಎಂದು ಶರವಣ ಆರೋಪಿಸಿದರು.
ರಾಜಕೀಯ ನಿಂತ ನೀರಲ್ಲ ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯಲ್ಲಿದ್ದ ನಾಯಕರು ಏನಾದರೂ ಹೇಳಿ? ಅವರನ್ನು ನೇಪಥ್ಯಕ್ಕೆ ಸರಿಯುವಂತೆ ಮಾಡಿದವರು ಯಾರು? ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದನ್ನು ನಿಲ್ಲಿಸಿ ಎಂದರು. ತನು ಮನ ಧನ ಎಲ್ಲವನ್ನೂ ಕೊಟ್ಟು ನಿಮ್ಮನ್ನು ಗೆಲ್ಲಿಸಿಕೊಂಡಿದ್ದಾರೆ. ಚಾಮರಾಜಪೇಟೆಯ ಗಲ್ಲಿ ಗಲ್ಲಿಗಳಲ್ಲಿ ಓಡಾಡಿ ಗೆಲ್ಲಿಸಿಕೊಂಡರು. ಎರಡು ಬಾರಿ ಸಿಎಂ ಆಗಿದ್ದ ಕುಮಾರಣ್ಣ ಬಗ್ಗೆ ಯಾಕೆ ಹೀಗೆ ಮಾತನಾಡುತ್ತಿದ್ದೀರಿ. ಒಂದು ಸಮುದಾಯವನ್ನು ಗುರಿ ಮಾಡುತ್ತಿದ್ದಾರೆ. ಜೆಡಿಎಸ್‌ನಲ್ಲಿದ್ದಾಗ ಅಧಿಕಾರವನ್ನು ಅನುಭವಿಸಿ ಈಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಓಲೈಸಲು ಪಲ್ಟಿ ಹೊಡೆಯುತ್ತಿರೋದು ಜಮೀರ್ ಅಹಮ್ಮದ್. ನಿಮ್ಮದೇ ಪಕ್ಷದ ನಾಯಕರು ನಿಮಗೆ ಎಚ್ಚರಿಕೆ ಕೊಡುತ್ತಿದ್ದಾರೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದಿರುವ ಅವರು, ಕನ್ನಡಿಗರ ಕಪ್ಪು, ಕಸ್ತೂರಿ ಅಂತಾ ಗೊತ್ತಿದೆಯಾ ಎಂದು ಪ್ರಶ್ನಿಸಿದರು. ಕೋವಿಡ್ ಸಂದರ್ಭದಲ್ಲಿ ಕುಮಾರಣ್ಣ ಸಿಎಂ ಆಗಿರಬೇಕಾಗಿತ್ತು ಎಂದು ಜನರೇ ಹೇಳುತ್ತಿದ್ದಾರೆ. ಜನರು ಕಷ್ಟಪಡುವಂತಹ ಪರಿಸ್ಥಿತಿ ಬರುತ್ತಿರಲಿಲ್ಲ.
ಒಂದು ಸಮುದಾಯದ ನಾಯಕರ ವಿರುದ್ಧ ಟಾರ್ಗೆಟ್ ಮಾಡಲಾಗುತ್ತಿದೆ. ರಾಜ್ಯದ ಅಧ್ಯಕ್ಷರೆ ಸುಪ್ರೀಂ ಅಂತಾ ಕಾಂಗ್ರೆಸ್ ನಾಯಕ ಪರಮೇಶ್ವರ್ ಹೇಳಿದ್ದಾರೆ. ಈಗ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದರು.
ಸಹವಾಸ ದೋಷ ಬಿಟ್ಟಿದ್ದೇನೆ ಅಂತಾ ಕುಮಾರಣ್ಣ ಹೇಳಿದ್ದಾರೆ. ನಮ್ಮ ನಾಯಕರು ಇವರಂತೆ ಚಿಲ್ಲರೆ ರಾಜಕೀಯ ಮಾಡಲ್ಲ. ವೈಯಕ್ತಿಕ ಹೇಳಿಕೆ ನೀಡೋದನ್ನು ನಿಲ್ಲಿಸಿ. ರಾಜ್ಯದ ಜನ ನಿರ್ಧಾರ ಮಾಡುತ್ತಾರೆ. ಜಮೀರ್ ಹೇಳಿದ ತಕ್ಷಣ ಸಿದ್ದರಾಮಯ್ಯ ಸಿಎಂ ಆಗೋದಿಲ್ಲ. ನಮ್ಮ ಕುಮಾರಣ್ಣ ಮತ್ತೆ ಸಿಎಂ ಆಗೇ ಆಗುತ್ತಾರೆ. ಜಮರ‍್ಗೆ ಈ ಹಿಂದೆ ಕುಮಾರಣ್ಣ, ಈಗ ಸಿದ್ದರಾಮಯ್ಯ, ಮುಂದೆ ಯಾರೋ ಎಂದು ಪ್ರಶ್ನಿಸಿದರು.

0 Comments