Ticker

6/recent/ticker-posts

Ad Code

Responsive Advertisement

NATIONAL CO OP. BANK : ಕೇಂದ್ರ ಸರ್ಕಾರದಿಂದ ಸಹಕಾರಿ ಬ್ಯಾಂಕ್‌ಗಳ ಶಕ್ತಿಹರಣ

ಸಹಕಾರಿ ಬ್ಯಾಂಕುಗಳ ಮೇಲೆ ದಬ್ಬಾಳಿಕೆಯಾಗುತ್ತಿದ್ದು ಕೇಂದ್ರ ಸರ್ಕಾರದ ನೀತಿಯಿಂದ ಸಹಕಾರಿ ಬ್ಯಾಂಕುಗಳ ಶಕ್ತಿಹರಣ ಮಾಡುವಂತಹ ಕಾರ್ಯವಾಗುತ್ತಿದೆ ಎಂದು ಮಾಜಿ ಸಚಿವ ಸಹಕಾರಿ ಧುರೀಣ ಎಚ್.ಕೆ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.




ದಿ ನ್ಯಾಷನಲ ಕೋ ಆಪರೇಟಿವ್ ಬ್ಯಾಂಕ್ ಲಿ. ವತಿಯಿಂದ ಬ್ಯಾಂಕಿನ ಸಂಸ್ಥಾಪಕರಾದ ವೈ.ವಿ.ಕೇಶವಮೂರ್ತಿ ಸ್ಮರಣಾರ್ಥವಾಗಿ ರೂಪಿಸಲಾದ ‘ಕಿರು ಸಾಲ ಯೋಜನೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಸಹಕಾರಿ ಕೋ ಆಪರೇಟಿವ್ ಬ್ಯಾಂಕ್‌ಗಳ ಮೇಲೆ ದಬ್ಬಾಳಿಕೆ, ಅನ್ಯಾಯವಾಗುತ್ತಿದೆ. ಕಾನೂನಿನ ಮೂಲಕ ಇಂತಹ ಬ್ಯಾಂಕ್‌ಗಳ ಶಕ್ತಿಹರಣ ಮಾಡುವುದಕ್ಕೆ ಸರ್ಕಾರಗಳು ಮುಂದಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.


ಸಹಕಾರಿ ಬ್ಯಾಂಕ್‌ಗಳ ಸ್ವಾತಂತ್ರ್ಯ, ಕರ್ತವ್ಯ ನಿಭಾಯಿಸಲು ಇರಬೇಕಾದ ಅನುಕೂಲತೆಗೆ ರಿಸರ್ವ್ ಬ್ಯಾಂಕ್, ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ. ಇವುಗಳು ಹೇಳಿದಂತೆ ಮಾಡಿ ಮುಂದೆ ತೊಂದರೆಗೆ ಸಿಲುಕಿದರೆ ನಮ್ಮ ರಕ್ಷಣೆಗೆ ಬರುವುದಿಲ್ಲ. ಬದಲಿಗೆ ಸಹಕಾರಿ ಸಂಸ್ಥೆಗಳಿಗೇ ನೋಟಿಸ್ ಕೊಡುತ್ತಾರೆ. ಆದರೆ, ಶ್ರೀಮಂತರ ಸಾಲಗಳನ್ನು ಸರಿದೂಗಿಸಲು ರಾಷ್ಟ್ರೀಯ ಹಾಗೂ ವಾಣಿಜ್ಯ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರವು ೧.೮೦ ಲಕ್ಷ ಕೋಟಿ ರೂ. ಕೊಡುತ್ತಿದೆ. ಇದಕ್ಕೆ ಯಾರೂ ಕೂಡಾ ಆಕ್ಷೇಪಣೆ ಎತ್ತುವುದಿಲ್ಲ. ಆದರೆ, ಬಡವರಿಗೆ ೫ ಸಾವಿರ ರೂ. ಸಾಲ ಮನ್ನಾ ಮಾಡಿದರೆ ಹಲವರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಕಿಡಿಕಾರಿದರು.

ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಸಹಕಾರಿ ಬ್ಯಾಂಕುಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಒಂದೆರಡು ಸಹಕಾರಿ ಬ್ಯಾಂಕುಗಳ ಲೋಪ ಎಸಗಿರುವುದರಿಂದ ಎಲ್ಲ ಸಹಕಾರಿ ಬ್ಯಾಂಕುಗಳನ್ನು ಅನುಮಾನದಿಂದ ನೋಡುವಂತಾಗಿದೆ. ಕೆಲವು ಸಹಕಾರಿ ಬ್ಯಾಂಕುಗಳ ಮಾಡಿರುವ ತಪ್ಪಿನಿಂದ ಠೇವಣಿದಾರರು ಸಮಸ್ಯೆಗೆ ಸಿಲುಕಿದ್ದಾರೆ. ಇದರಿಂದ ಸಹಕಾರಿ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ತಾವು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೆರವಾಗಬೇಕು ಎಂದು ಎಚ್.ಕೆ. ಪಾಟೀಲರಿಗೆ ಮನವಿ ಮಾಡಿಕೊಂಡರು.

ಬ್ಯಾಂಕ್ ಸಂಸ್ಥಾಪಕ ವೈ.ವಿ. ಕೇಶವಮೂರ್ತಿ ಅವರ ಸ್ಮರಣಾರ್ಥ ಬಡವರಿಗೆ, ಆಟೋ ಚಾಲಕರು, ವ್ಯಾಪಾರಿಗಳಿಗೆ ಕಿರುಸಾಲ ನೀಡುವ ಯೋಜನೆ ಹಮ್ಮಿಕೊಂಡಿರುವ ಬ್ಯಾಂಕಿನ ಅಧ್ಯಕ್ಷ ಎಚ್.ಸಿ. ಕೃಷ್ಣ ಅವರು ಸಾಮಾಜಿಕ ಕಳಕಳಿ ಹೊಂದಿರುವವರು ಎಂದು ಬಣ್ಣಿಸಿದರು.




ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ,  ನಗರದ ಬಹುತೇಕ ಕಡೆ ಮೀಟರ್ ಬಡ್ಡಿ ದಂಧೆಕೋರರು ವ್ಯಾಪಾರಿಗಳ ಮನೆ, ವಾಹನ, ಚಿನ್ನ, ಹೊಲ ಅಡವಿರಿಸಿ ಹೆಚ್ಚಿನ ಬಡ್ಡಿಗೆ ಸಾಲ ಕೊಡುತ್ತಿದ್ದಾರೆ. ಇಂತಹ ಯೋಜನೆಗಳಿಂದ ಈ ಅಕ್ರಮ ತಡೆಗಟ್ಟಬಹುದು ಎಂದರಲ್ಲದೆ, ಕಿರುಸಾಲ ಯೋಜನೆ ಪೊಲೀಸರಿಗೂ ಅನುಕೂಲವಾಗುವ ಸಾಧ್ಯತೆ ಇದೆ ಎಂದರು.

ಈ ಸಂದರ್ಭದಲ್ಲಿ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಆರ್.ವೆಂಕಟೇಶ್, ದಿ ನ್ಯಾಷನಲ ಕೋ ಆಪರೇಟಿವ್ ಬ್ಯಾಂಕ್ ಲಿ. ಅಧ್ಯಕ್ಷ ಎಚ್.ಸಿ.ಕೃಷ್ಣ ಮತ್ತಿತರಿದ್ದರು.

೨೫ ಮಂದಿಗೆ ಸಾಲ ವಿತರಣೆ:

ದಿ ನ್ಯಾಷನಲ ಕೋ ಆಪರೇಟಿವ್ ಬ್ಯಾಂಕ್ ಲಿ. ವತಿಯಿಂದ ಕಿರು ಸಾಲ ಯೋಜನೆಯಡಿ ಸೋಮವಾರ ಸಾಂಕೇತಿಕವಾಗಿ ೨೫ ಸಣ್ಣ ವರ್ತಕರಿಗೆ ೫ ರಿಂದ ೨೫ ಸಾವಿರ ರೂ. ವರೆಗೆ ಸಾಲ ವಿತರಿಸಲಾಯಿತು.


Post a Comment

0 Comments

Ad Code

Responsive Advertisement