ಕೊರೊನಾ ಎರಡನೇ ಅಲೆಯಲ್ಲಿ ಸತತವಾಗಿ ಸಾವಿನ ಸಂಖ್ಯೆ ಏರುತ್ತಿದ್ದ ಕಾರಣ ಶವಸಂಸ್ಕಾರಕ್ಕೆ ತೊಂದರೆಯಾಗಿ, ನಗರದ ಹೊರವಲಯಗಳಲ್ಲಿ ತಾತ್ಕಾಲಿಕವಾಗಿ ಬಯಲು ಚಿತಾಗಾರಗಳನ್ನು ತೆರೆಯಲಾಗಿತ್ತು. ಇದೀಗ ಸಾವಿನ ಪ್ರಕರಣಗಳು ಕಡಿಮೆಯಾಗಿರುವ ಕಾರಣ ಚಿತಾಗಾರಗಳನ್ನು ಮುಚ್ಚಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಸದ್ಯಕ್ಕೆ ಸಾವಿನ ಸಂಖ್ಯೆ ಪ್ರತಿದಿನ 40-50 ಇದೆ. ಹೀಗಾಗಿ ಈಗಿರುವ ಚಿತಾಗಾರಗಳಲ್ಲಿಯೇ ನಿರ್ವಹಣೆ ಮಾಡಲಾಗುತ್ತಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಅಬ್ಬರ ತಗ್ಗುತ್ತಿದ್ದು, ಸಾವಿನ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ, ಬೆಂಗಳೂರಿನ ಹೊರವಲಯದಲ್ಲಿ ತೆರೆಯಲಾಗಿದ್ದ ತಾತ್ಕಾಲಿಕ ಬಯಲು ಚಿತಾಗಾರಗಳನ್ನು ಮುಚ್ಚಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಕೊರೊನಾ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾದ ಕಾರಣ ಯಲಹಂಕ, ತಾವರೆಕೆರೆಯ ಗಿಡ್ಡೇನಹಳ್ಳಿ ಹಾಗೂ ಕುರುಬರಹಳ್ಳಿಯಲ್ಲಿ ತಾತ್ಕಾಲಿಕವಾಗಿ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಗುರುವಾರ ರಾಜ್ಯದಲ್ಲಿ ಹೊಸದಾಗಿ 11042 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2739290ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 210652 ಆಗಿದೆ. ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ. 6.58ರಷ್ಟಿದ್ದು, ಮರಣ ಪ್ರಮಾಣ ಶೇ. 1.75 ರಷ್ಟಿದೆ. ಬೆಂಗಳೂರಿನಲ್ಲಿ 2191 ಪ್ರಕರಣಗಳು ದೃಢಪಟ್ಟಿದ್ದು, 47 ಸೋಂಕಿತರು ಸಾವನ್ನಪ್ಪಿದ್ದಾರೆ. 4846 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

0 Comments