ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 2.44 ಲಕ್ಷ ಕೋಟಿ ರೂಪಾಯಿ ಆದಾಯ ಪಡೆದಿದ್ದು, ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಉದ್ಯಮದ ಪುನಶ್ಚೇತನಕ್ಕೆ ಅದರಲ್ಲೇ ಶೇ.10ರಷ್ಟು ಹಣವನ್ನು ಬಳಸಿಕೊಂಡು ಪ್ಯಾಕೇಜ್ ಘೋಷಣೆ ಮಾಡುವಂತೆ ಎಫ್ ಕೆ ಸಿ ಸಿ ಐ ಒತ್ತಾಯಿಸಿದೆ. ಎಫ್ ಕೆ ಸಿ ಸಿಸ ಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿ ಜಿಎಸ್ಟಿ ರೂಪದಲ್ಲಿ ಸುಮಾರು 84 ಸಾವಿರ ಕೋಟಿ, ರಾಜ್ಯ ಅಬಕಾರಿ ತೆರಿಗೆಯಿಂದ 24 ಸಾವಿರ ಕೋಟಿ, ಪೆಟ್ರೋಲ್ ಮತ್ತು ಡೀಸೆಲ್ನಿಂದ ತೆರಿಗೆಯಿಂದ 16 ಸಾವಿರ ಕೋಟಿ, ಆದಾಯ ತೆರಿಗೆಯಿಂದ 1.20 ಲಕ್ಷ ಕೋಟಿ ಸೇರಿ 2.44 ಲಕ್ಷ ಕೋಟಿ ರೂಪಾಯಿಗಳ ಆದಾಯವನ್ನು ಸರ್ಕಾರಗಳು ಪಡೆದಿವೆ.
ಲಾಕ್ಡೌನ್ ಅವಧಿಯಲ್ಲಿ ವ್ಯಾಪಾರ ಮತ್ತು ಕೈಗಾರಿಕೆಗಳು ಪ್ರಸ್ತುತ ಎದುರಿಸುತ್ತಿರುವ ಕಷ್ಟವನ್ನು ಗಮನದಲ್ಲಿಟ್ಟುಕೊಂಡು, ವ್ಯಾಪಾರ ಮತ್ತು ಕೈಗಾರಿಕೆಗಳಿಂದ ಗಳಿಸಲ್ಪಟ್ಟ ಆದಾಯದ ಕನಿಷ್ಠ ಶೇ.10 ನಷ್ಟು ಹಣವನ್ನು ಅಂದರೆ 20 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕೋವಿಡ್-19ರ ಮೊದಲನೇ ಅಲೆಯಿಂದಾಗಿ 2020 ರ ಮಾರ್ಚಿಯಿಂದ ವ್ಯಾಪಾರ, ಕೈಗಾರಿಕೆ ಮತ್ತು ವ್ಯಾಪಾರ ನಷ್ಟವಾಗಿದ್ದು, ಉದ್ಯಮವು ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಂಡಿತು. ಅಷ್ಟರಲ್ಲಿ ದುರದೃಷ್ಟವಶಾತ್ ಎರಡನೇ ಅಲೆಯು ತೀವ್ರವಾಗಿತ್ತು. ಇದರಿಂದಾಗಿ ರಾಜ್ಯ ಮತ್ತು ರಾಷ್ಟ್ರದಾದ್ಯಂತ ವ್ಯಾಪಾರ, ಕೈಗಾರಿಕೆ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಮುಚ್ಚಲಾಗಿದೆ. ಲಾಕ್ ನಿಯಮಾವಳಿಗಳನ್ನು ಪಾಲಿಸುವ ಸಂದರ್ಭದಲ್ಲಿ ವ್ಯಾಪಾರೋದ್ಯಮಕ್ಕೆ ಸುಮಾರು 75 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಸರ್ಕಾರ ಕಷ್ಟದಲ್ಲಿರುವ ಉದ್ಯಮ ಹಾಗೂ ವ್ಯಾಪಾರಿಗಳಿಗೆ ಸೂಕ್ತ ನೆರವು ನೀಡಬೇಕು ಎಂದು 50ಕ್ಕೂ ಹೆಚ್ಚು ಮನವಿಗಳನ್ನು ಸಲ್ಲಿಸಿದ್ದೇವೆ. ಅವುಗಳಲ್ಲಿ ಕೆಲವನ್ನು ಸರ್ಕಾರ ಪರಿಗಣಿಸಿದೆ.
ಆಸ್ತಿ, ವಾಣಿಜ್ಯ ತೆರಿಗೆ ಪಾವತಿ ಅವಧಿಯನ್ನು ರಾಜ್ಯ ಸರ್ಕಾರ ಜೂನ್ 30ರವರೆಗೆ ವಿಸ್ತರಿಸಿದೆ, ವಿದ್ಯುತ್ ಬಿಲ್ ಪಾವತಿಯಲ್ಲಿ ರಿಯಾಯಿತಿ ನೀಡಿದೆ, ಎಪಿಎಂಸಿ ವಹಿವಾಟುಗಳ ಅವಧಿಯನ್ನು ವಿಸ್ತರಣೆ ಮಾಡಿದೆ. ಕೇಂದ್ರ ಸರ್ಕಾರ ಆದಾಯ ತೆರಿಗೆ ಹಾಗೂ ಜಿಎಸ್ ಟಿ ಪಾವತಿ ಅವಧಿಯನ್ನು ವಿಸ್ತರಣೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಇದರ ನಡುವೆ ರಾಜ್ಯ ಸರ್ಕಾರ ಇತ್ತೀಚಿಗೆ ವಿದ್ಯುತ್ ದರವನ್ನು 30 ಪೈಸೆಗೆ ಹೆಚ್ಚಿಸಿರುವುದು ಸರಿಯಲ್ಲ, ಕೂಡಲೇ ದರ ಹೆಚ್ಚಳದ ಆದೇಶವನ್ನು ಹಿಂಪಡೆಯಬೇಕು ಮತ್ತು ಮುಂದಿನ 2-3 ವರ್ಷಗಳ ವರೆಗೆ ವಿದ್ಯುತ್ ದರ ಹೆಚ್ಚಳ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ವಿದ್ಯುತ್ ತೆರಿಗೆಯನ್ನು ಶೇ.9 ರಿಂದ ಶೇ.3ಕ್ಕೆ ಇಳಿಸಬೇಕು, ಇದರಿಂದ ಪ್ರತಿ ಯೂನಿಟ್ ವೆಚ್ಚ 42 ಪೈಸೆಗಳಿಗೆ ಇಳಿಯುತ್ತದೆ. ಕೆಇಆರ್ ಸಿ ಅನುಮತಿಸಿದ ವಿದ್ಯುತ್ ದರ ಹೆಚ್ಚಳದ ಋಣಾತ್ಮಕ ಪರಿಣಾಮ ತಗ್ಗಿಸುತ್ತದೆ. ಗ್ರಾಹಕರಿಗೆ ವಿಶೇಷವಾಗಿ ಕೈಗಾರಿಕೆಗಳಿಗೆ ಸಹಾಯ ಮಾಡುತ್ತದೆ ಮತ್ತು ಹೂಡಿಕೆಗಳನ್ನು ಆಕರ್ಷಿಸುತ್ತದೆ ಎಂದು ಸಲಹೆ ನೀಡಿದ್ದಾರೆ.

0 Comments