Ticker

6/recent/ticker-posts

Ad Code

Responsive Advertisement

ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು - "ವಿಚಾರ ಕಲರವ"

 ಬೆಂಗಳೂರು, ಜೂನ್ 01, (ಕರ್ನಾಟಕ ವಾರ್ತೆ) : ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಾಗೂ ಕರೋನ 19ರ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು "ವಿಚಾರ ಕಲರವ" ಎಂಬ ಶೀರ್ಷಿಕೆ ಅಡಿಯಲ್ಲಿ ಮೊದಲ ಉಪನ್ಯಾಸ ಮಾಲಿಕೆಯನ್ನು ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ ಹಾಗೂ ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆಯವರು "ಪ್ರಜಾಪ್ರಭುತ್ವದಲ್ಲಿ ಉತ್ತಮ ಆಡಳಿತ" ಎಂಬ ವಿಚಾರವನ್ನು ಮಂಡಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿಕೊಟ್ಟರು.


ಭಾರತ ದೇಶದ 70ಕ್ಕು ಹೆಚ್ಚು ವರ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಉತ್ತಮ ಆಡಳಿತ ಕೊಡುವಲ್ಲಿ ನಾವು ವಿಫಲರಾಗಿದ್ದೇವೆ ಹೊರೆತು ಸಫಲರಾಗಿಲ್ಲ, ಸಂವಿಧಾನ ರಚನೆ ಸಂದರ್ಭದಲ್ಲಿನ ಕೆಲ ಲೋಪಗಳು ಇಂದಿನ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ನಿವೃತ್ತ ಲೋಕಾಯುಕ್ತ ಹಾಗೂ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

ವಿಚಾರ ಕಲರವ ಕಾರ್ಯಕ್ರಮದ ಉದ್ಘಾಟನೆ ಹಾಗೂ ಮೊದಲ ಉಪನ್ಯಾಸದ ಮಾಲಿಕೆಯ “ಪ್ರಜಾಪ್ರಭುತ್ವದಲ್ಲಿ ಉತ್ತಮ ಆಡಳಿತ” ಕುರಿತು ಮಾತನಾಡಿದ ಅವರು, ಸಂವಿಧಾನದ ಮೂರು ಅಂಗಳಲ್ಲಿಯೂ ನೂನ್ಯತೆಗಳಿರುವುದರಿಂದ ಉತ್ತಮ ಆಡಳಿತ ಎಷ್ಟರ ಮಟ್ಟಿಗೆ ನಿರೀಕ್ಷಿಸಲು ಸಾಧ್ಯವಾಗುತ್ತದೆ, ಸಂವಿಧಾನ ರಚನೆ ಸಂದರ್ಭದಲ್ಲಿನ ಹಿರಿಯರು ಜನಪ್ರತಿನಿಧಿಗಳಾಗಲು ವಿದ್ಯಾರ್ಹತೆಯನ್ನು ನಿರಾಕರಿಸಿದ್ದರ ಪರಿಣಾಮ ದೇಶವನ್ನು ಆಡಳಿತ ನಡೆಸುವವರು ಯಾರಾಗುತ್ತಿದ್ದಾರೆಂದು ಬೇರೆ ಹೇಳಬೇಕಿಲ್ಲ ಎಂದರು.

ಎಲೆಕ್ಷನ್ ವಾಚ್ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ಕಳೆದ ಚುನಾವಣೆಗೆ ಹೋಲಿಸಿದರೆ ಅಪರಾಧದ ಹಿನ್ನೆಲೆಯುಳ್ಳ ವ್ಯಕ್ತಿಗಳು ಜನಪ್ರತಿನಿಧಿಗಳಾದ ಪ್ರಮಾಣ ಶೇ 7.2ರಷ್ಟು ಹೆಚ್ಚಳವಾಗಿದೆ. ಅಪರಾಧದ ಹಿನ್ನೆಲೆಯುಳ್ಳ ವ್ಯಕ್ತಿಗಳು ಯಾವ ರೀತಿ ಆಡಳಿತ ಮಾಡಲು ಸಾಧ್ಯ? ಸಭೆಯಲ್ಲಿ ಯಾವುದೇ ಗಂಭೀರವಾದ ವಿಚಾರಗಳಾಗಲಿ ಉತ್ತಮ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ, ಅನೇಕ ಮಸೂದೆಗಳು ಸರಿಯಾಗಿ ಚರ್ಚೆಗಳಿಗೆ ಒಳಪಡದೇ ಪಾಸ್ ಆಗುತ್ತಿರುವುದು ಸದ್ಯದ ಬೇಜವಾಬ್ದಾರಿ ಆಡಳಿತಕ್ಕೆ ಕೈಗನ್ನಡಿ. ಈ ಸಂಬಂಧ 2005ರಲ್ಲಿ ಶೇಕಡ 25ರಷ್ಟು ಹಾಗೂ 2007ರಲ್ಲಿ ಶೇಕಡ 32ರಷ್ಟು ಮಸೂದೆಗಳು ಚರ್ಚೆಗೆ ಒಳಪಡದೆ ಕಾನೂನುಗಳನ್ನು ಮಾಡಿರುವುದನ್ನು ಕೆಲವು ಸಂಸ್ಥೆಗಳು ವರದಿ ಮಾಡಿರುವುದನ್ನು ನಾವು ಗಮನಿಸಬೇಕಾಗಿದೆ. ವೈಜ್ಞಾನಿಕವಾಗಿ ಚರ್ಚೆಗೆ ಒಳಪಡಿಸಿದ ಕಾನೂನನ್ನು ನೇರವಾಗಿ ಜನಸಾಮಾನ್ಯನ ಮೇಲೆ ಪ್ರಯೋಗ ಮಾಡುವುದು ಎಷ್ಟು ಸಮಂಜಸ?.ಉತ್ತಮ ವ್ಯಕ್ತಿತ್ವ ಇಲ್ಲದೇ ಇರುವ ವ್ಯಕ್ತಿಗಳಿಂದ ಉತ್ತಮ ಆಡಳಿತ ನಿರೀಕ್ಷಿಸುವುದೇ ತಪ್ಪು ಎಂಬಂತಾಗಿದೆ ಎಂದು ನುಡಿದರು.

ಕಾರ್ಯಾಂಗಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಶಾಸಕಾಂಗದ ಕೈವಾಡವಿಲ್ಲದೇ ಒಬ್ಬ ಅಧಿಕಾರಿ ನೇಮಕವಾಗುವುದಿಲ್ಲ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ಪಬ್ಲಿಕ್ ಸರ್ವಿಸ್ ಕಮಿಷನ್ನ ಮುಖ್ಯಸ್ಥರ ಬಗ್ಗೆ ಎಷ್ಟೆಷ್ಟು ಅಪರಾಧ ಪ್ರಕರಣಗಳು ದಾಖಲಿವೆ, ಹಾಗೆಯೆ ಕೆಲ ಸದಸ್ಯರ ಮೇಲಿನ ಪ್ರಕರಣಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದನ್ನು ಗಮನಿಸಿದರೆ ಕಾರ್ಯಾಂಗದ ಕಾರ್ಯವೈಖರಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ಎನಿಸುತ್ತಿದೆ

ನ್ಯಾಯಾಂಗದಲ್ಲಿಯೂ ಸಾಕಷ್ಟು ಬದಲಾವಣೆಗಳಾಗಬೇಕಾಗಿದೆ. ಶಾಸಕಾಂಗ, ಕಾಯಾಂಗದ ಮೇಲೆ ಜನರ ವಿಶ್ವಾಸವಿಟ್ಟಿಲ್ಲ. ಆದರೆ ಇನ್ನೂ ಸ್ವಲ್ಪ ನ್ಯಾಯಾಂಗದ ಮೇಲೆ ವಿಶ್ವಾಸ ವಿಟ್ಟಿದ್ದಾರೆ. ಆದರೆ ನ್ಯಾಯಾಂಗದಲ್ಲಿಯೂ ಕೆಲ ದೋಷಗಳಿವೆ. ಕೆಲವೊಂದು ಪ್ರಕರಣಗಳು 40-50 ವರ್ಷಗಳ ವರೆಗೆ ಇತ್ಯರ್ಥಕಾಣದೇ ಮುಂದುವರೆಸುತ್ತಾ ಸಾಗಿದರೆ ಕಕ್ಷಿದಾರರ ಗತಿಏನು? ನಮ್ಮಲ್ಲಿ ಹಂತಹಂತವಾಗಿ ಕೋರ್ಟ್ಗಳನ್ನು ನಿರ್ಮಿಸಿದ್ದಾರೆ. ಅವುಗಳು ವಿಳಂಬಕ್ಕೆ ಕಾರಣವಾಗುತ್ತಿವೆ ಹೊರತು ತ್ವರಿತ ನ್ಯಾಯ ನಿರ್ಣಯಕ್ಕೆ ಸಾಧ್ಯವಾಗುವುದಿಲ್ಲ,

ಮೂರು ಅಂಗಗಳಲ್ಲಿ ಪ್ರಾಮಾಣಿಕತೆ ಹುಡುಕುವುದು ಕಷ್ಟಸಾಧ್ಯ. ಭ್ರಷ್ಟಾಚಾರಕ್ಕೆ ಮೂಲ ಕಾರಣವೇ ದುರಾಸೆ, ದುರಾಸೆಗೆ ಸಮಾಜದ ಕಾರಣ, ಮೊದಲು ಪ್ರಾಮಾಣಿಕರನ್ನು ಮಾತ್ರ ಗೌರವಿಸುತ್ತಿದ್ದರು. ಆದರೆ ಈಗ ಭ್ರಷ್ಟರನ್ನು, ವಂಚಿಸಿದುಡ್ಡು ಮಾಡಿದವರನ್ನು ಮಾತ್ರ ಗೌರವಿಸುವ ಧೋರಣೆಗಳು ಬೆಳೆದುಬಿಟ್ಟಿದೆ, ಈ ಕಾರಣದಿಂದಲೇ ಸಮಾಜದಲ್ಲಿ ಬದಲಾವಣೆ ಅಗತ್ಯವಿದೆ ಎಂದು ಪದೇ ಪದೇ ಹೇಳುತ್ತಿದ್ದೇನೆ. ಭ್ರಷ್ಟಾಚಾರವು ಇಂದು ನಿನ್ನೆಯದಲ್ಲ, ಸುಮಾರು ವರ್ಷಗಳಿಂದಲೂ ಬಂದಿರುವಂತಹದು, ನಿರ್ಮೂಲನೆ ಮಾಡಲು ಸಾಧ್ಯವಾಗದಿದ್ದರೂ ನಿಯಂತ್ರಣಕ್ಕೆ ತರಬಹುದಾಗಿದೆ. ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಎರಡು ಮೌಲ್ಯಗಳನ್ನು ತಿಳಿಸಿಕೊಡಬೇಕು ಹಾಗೆಯೇ ಅದೇ ರೀತಿ ಬೆಳೆಯುವಂತೆ ನೋಡಿಕೊಳ್ಳಬೇಕು ತೃಪ್ತಿ ಹಾಗೂ ಮಾನವೀಯತೆ ಅವೇ ಎರಡು ಗುಣಗಳು. ಇವುಗಳನ್ನು ರೂಢಿಸಿಕೊಂಡರೆ ದುರಾಸೆ ಮೂಡುವುದಿಲ್ಲ, ಇದ್ದುದರಲ್ಲಿಯೇ ತೃಪ್ತಿಪಡುವ ಗುಣ ಹಾಗೂ ಮಾನವೀಯತೆಯಿಂದ ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಯುವಕರಿಗೆ ಸಲಹೆ ನೀಡಿದ್ದಾರೆ.

ವಸ್ತುನಿಷ್ಠತೆ, ಪ್ರಾಮಾಣಿಕತೆ, ಹೊಣೆಗಾರಿಕೆ ,ಉತ್ತಮ ನಾಯಕತ್ವ ಹಾಗೂ ಉತ್ತಮ ವ್ಯಕ್ತಿತ್ವ ಈ ಎಲ್ಲಾ ಅಂಶಗಳು ಉತ್ತಮ ಆಡಳಿತದಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು. ಕೊನೆಯದಾಗಿ ಮನುಷ್ಯನಿಗೆ ಆತ್ಮತೃಪ್ತಿ ಹಾಗೂ ಮಾನವೀಯತೆಯನ್ನು ಬೆಳೆಸಿಕೊಂಡಾಗ ದೇಶದ ಅಭಿವೃದ್ಧಿಯನ್ನು ಕಾಣಿಸಬಹುದು ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.

ಲೋಕಪಾಲ್ ಮಸೂದೆ ಜಾರಿಗೆ ಬರುವುದು ಮುಖ್ಯವಲ್ಲ. ಆ ಸಂಸ್ಥೆಗೆ ಕಲ್ಪಿಸಿಕೊಡುವ ಅಧಿಕಾರ ಹಾಗೂ ನೇಮಕಗೊಳ್ಳುವ ಅಧಿಕಾರಿಯ ಪ್ರಮಾಣಿಕತೆ ಮುಖ್ಯವಾಗಿದೆ. ಪ್ರಮಾಣಿಕವಾಗಿ ಆಸ್ತಿ ಎಷ್ಟೇ ಸಂಪಾದನೆ ಮಾಡಿದರೂ ತಪ್ಪಲ್ಲ, ಅನ್ಯಾಯವಾಗಿ ಇನ್ನೊಬ್ಬರ ಹೊಟ್ಟೆ ಮೇಲೆ ಹೊಡೆದು ಅಕ್ರಮವಾಗಿ ಸಂಪಾದನೆ ಮಾಡಿದ ಆಸ್ತಿಯಿಂದ ಯಾವುದೇ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ, ಕೆಲ ಅಧಿಕಾರಿಗಳು ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಭ್ರಷ್ಟಾಚಾರದ ಉದ್ದೇಶವಿರುತ್ತದೆ. ಇದಕ್ಕೆ ಸಾಮಾಜವೇ ಪ್ರೇರಣೆ, ಅನ್ಯಾಯದ ಮಾರ್ಗಕ್ಕೆ ದಾರಿಮಾಡಿಕೊಡುವವರು ನಾವುಗಳಾಗಿರತ್ತೇವೆ. ಭವಿಷ್ಯತ್ತಿನಲ್ಲಿ ಬಂಡವಾಳಶಾಹಿಗಳಿಂದಾಗಲಿ, ಪುರೋಹಿತಶಾಹಿಗಳಿಂದಾಗಲಿ ದೇಶಕ್ಕೆ ಯಾವುದೇ ತೊಂದರೆಗಳಿಲ್ಲ, ತಮ್ಮ ತಮ್ಮ ಕರ್ತವ್ಯನಿಷ್ಠೆ,
ಪ್ರಮಾಣಿಕತೆ ಹಾಗೂ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಣೆಯಿದ್ದರೆ ಅಪಾಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಪ್ರೊ. ಕೆ ಆರ್ ವೇಣುಗೋಪಾಲ್ ರವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಮಾತನಾಡುತ್ತಾ, ನೇರವಾಗ, ನಿಷ್ಠುರವಾಗಿ ಹಾಗೂ ಪಾರದರ್ಶಕತೆಯಿಂದ ಪ್ರಾಮಾಣಿಕವಾಗಿ ಮಾತನಾಡುವ ವ್ಯಕ್ತಿಗಳಿಂದ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ. ಹಲವಾರು ಹಂತದ ನ್ಯಾಯಾಲಯಗಳಿಂದ ಇಂದು ನ್ಯಾಯದಾನದಲ್ಲಿ ವಿಳಂಬವಾಗುತ್ತಿರುವುದನ್ನು ಕಾಣಬಹುದು. ಅತಿಯಾದ ನ್ಯಾಯ ವಿಳಂಬ ಹಾಗೂ ಶೀಘ್ರಗತಿಯಿಂದ ಇತ್ಯರ್ಥ ಮಾಡುವ ನ್ಯಾಯದಾನಗಳು ಅನ್ಯಾಯಕ್ಕೆ ನಾಂದಿಯಾಗುತ್ತದೆ. ಶಾಸಕಾಂಗ,ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ, ಭಾರತೀಯ ಆಡಳಿತ ಸೇವೆಸಲ್ಲಿಸುತ್ತಿರುವ ಅಧಿಕಾರಿಗಳು, ಸಿವಿಲ್ ಸೊಸೈಟಿ ಸಂಘ-ಸಂಸ್ಥೆಗಳು ಸಾಮೂಹಿಕವಾಗಿ ಹಾಗೂ ಜವಾಬ್ದಾರಿಯಿಂದ ಸಂವಿಧಾನದ ಪರಿ ವಿಧಿಯಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದಲ್ಲಿ ಉತ್ತಮ ಆಡಳಿತವನ್ನು ನಡೆಸಬಹುದು. ಆ ಮೂಲಕ ಪ್ರಜಾಪ್ರಭುತ್ವ ಮೂಲ್ಯ ಹಾಗು ಆಶಯಗಳನ್ನು ಈಡೇರಿಸಬಹುದು ಎಂದು ತಿಳಿಸಿದರು. ಭ್ರಷ್ಟಾಚಾರ ಉತ್ತಮ ಆಡಳಿತದ ಹಿತಶತ್ರು ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.

ಪ್ರತಾಪ್ ಲಿಂಗಯ್ಯ ಮಾತನಾಡಿ ಈ ರೀತಿಯ ವೈಚಾರಿಕ ಕಾರ್ಯಕ್ರಮಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಎನ್ಎಸ್ಎಸ್ ಕೋಶವು ವ್ಯವಸ್ಥಿತವಾಗಿ ಸಂಘಟನೆ ಮಾಡಿಕೊಂಡು ಬಂದಿರುವುದು ನಿಜಕ್ಕೂ ಸಂತಸದ ವಿಚಾರ ಎಂದು ತಿಳಿಸಿದರು.

ಎನ್ಎಸ್ಎಸ್ ಸಂಯೋಜನಾಧಿಕಾರಿ ಎನ್ ಸತೀಶ್ ಗೌಡ ಮಾತನಾಡುತ್ತಾ, ಈ ವಿಚಾರ ಕಲರವ ಎಂಬ ಶೀರ್ಷಿಕೆಯಡಿಯಲ್ಲಿ 75ನೇ ಸ್ವಾತಂತ್ರ್ಯ ಸಂಭ್ರಮಿಸುವ ಆಗಸ್ಟ್ 15 ರ ಒಳಗಾಗಿ, 75 ಉಪನ್ಯಾಸಮಾಲೆ ಗಳನ್ನು ಶಿಕ್ಷಣ, ಆರೋಗ್ಯ, ಪ್ರಜಾಪ್ರಭುತ್ವ ,ಸಂವಿಧಾನ , ವೈದ್ಯಕೀಯ ,ಕೃಷಿ, ವ್ಯಕ್ತಿತ್ವ ವಿಕಸನ ,ಮನೋವಿಜ್ಞಾನ , ಮಾಧ್ಯಮ, ಸಾರ್ವಜನಿಕ ಆಡಳಿತ, ಪರಿಸರ ಸಂಬಂಧಿ ವಿಚಾರಗಳು ಈ ರೀತಿಯ ಹತ್ತು ಹಲವಾರು ವಿಚಾರಗಳ ಬಗ್ಗೆ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕಾರ್ಯಕ್ರಮ ಅಧಿಕಾರಿಗಳು ಯೋಜನಾಧಿಕಾರಿಗಳು ವಿದ್ಯಾರ್ಥಿಗಳು ಪ್ರಾಧ್ಯಾಪಕರು ಪ್ರಾಂಶುಪಾಲರು ಸಂಘ-ಸಂಸ್ಥೆಗಳು ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಜನರು ಆನ್ಲೈನ್ ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Post a Comment

0 Comments

Ad Code

Responsive Advertisement