Ticker

6/recent/ticker-posts

Ad Code

Responsive Advertisement

ಶಿಕ್ಷಕರನ್ನು ಕೋವಿಡ್ ಕರ್ತವ್ಯದಿಂದ ಬಿಡುಗಡೆಗೊಳಿಸಲು ಬಿಎಸ್ಪಿ ಆಗ್ರಹ

ಸರ್ಕಾರ ಸುಮಾರು 60 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿದೆ. ಆದರೆ ಅವರನ್ನು ಇದುವರೆಗೂ ಕೋವಿಡ್ ವಾರಿಯರ್ಸ್ ಎಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ.

 ಕರ್ತವ್ಯನಿರತ ಶಿಕ್ಷಕರಿಗೆ ಕನಿಷ್ಠ ಮಾಸ್ಕ್ ,ಸ್ಯಾನಿಟೈಸರ್, ಗ್ಲೌಸ್ ನಂತಹ ಸುರಕ್ಷಿತ ಸಾಮಗ್ರಿಗಳನ್ನು ಸಹ ಒದಗಿಸಿಲ್ಲ.     ಶಿಕ್ಷಕರು ಸೋಂಕಿತರ ನೇರ ಸಂಪರ್ಕಕ್ಕೆ ಬರುವಂತಹ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.  ಆದರೂ ಯಾವ ಸೌಲಭ್ಯಗಳನ್ನು ಒದಗಿಸದಿರುವುದರಿಂದ ಶಿಕ್ಷಕರನ್ನು ಕೋವಿಡ್ ಕರ್ತವ್ಯದಿಂದ ತಕ್ಷಣ ಬಿಡುಗಡೆಗೊಳಿಸಬೇಕೆಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.

ಸರ್ಕಾರ ಮತ್ತು ಶಿಕ್ಷಣ ಸಚಿವರ ಬೇಜವಾಬ್ದಾರಿತನದಿಂದ ಉಪಚುನಾವಣೆ ಸೇರಿದಂತೆ, ಕೋವಿಡ್ ಕರ್ತವ್ಯ ನಿರ್ವಹಿಸಿದ ಸುಮಾರು 600ಕ್ಕೂ ಹೆಚ್ಚು ಶಿಕ್ಷಕರು ಕರ್ನಾಟಕದಲ್ಲಿ ಕೋವಿಡ್ ಗೆ ಬಲಿಯಾಗಿದ್ದಾರೆ.   ಇಷ್ಟೊಂದು ಶಿಕ್ಷಕರ ಸಾವಿಗೆ ಸರ್ಕಾರವೇ ನೇರ ಹೊಣೆಯಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಶಿಕ್ಷಕರನ್ನು ಕೋವಿಡ್ ಕರ್ತವ್ಯದಲ್ಲಿ ಮುಂದುವರಿಸುವುದೇ ಆದರೆ ಪ್ರಮುಖ ಬೇಡಿಕೆಗಳಾದ ಕೊವಿಡ್ ವಾರಿಯರ್ಸ್ ಗಳೆಂದು ಘೋಷಿಸುವುದು, ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ 30 ಲಕ್ಷ ಪರಿಹಾರ, ಸುರಕ್ಷತಾ ಸಾಮಗ್ರಿಗಳ ವಿತರಣೆ, ಶಿಕ್ಷಕರು ಮತ್ತು ಅವರ ಕುಟುಂಬಗಳಿಗೆ ಆದ್ಯತೆಯ ಮೇರೆಗೆ ಲಸಿಕೆ, ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲು ಹಾಗೂ ಅನುದಾನಿತ ಶಾಲೆ ಮತ್ತು ಗುತ್ತಿಗೆ ಶಿಕ್ಷಕರನ್ನು ಸಹ ಕೋವಿಡ್ ವಾರಿಯರ್ಸ್ ಗಳೆಂದು ಪರಿಗಣಿಸಬೇಕೆಂಬ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅನುದಾನಿತ ಶಾಲಾ ಶಿಕ್ಷಕರು ಕೋವಿಡ್ ನಿಂದ ಮೃತಪಟ್ಟರೆ ನಯಾಪೈಸೆ ಪರಿಹಾರವನ್ನು ನೀಡದಿರುವುದು ಅಮಾನವೀಯ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆ ಶಿಕ್ಷಕರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿದೆ. 

ಆದರೆ ಕೋವಿಡ್ ವಾರಿಯರ್ಸ್ ಗಳೆಂದು ಘೋಷಣೆ ಮಾಡುವುದಿರಲಿ, ಸುರಕ್ಷತಾ ಕಿಟ್ ಗಳಿರಲಿ, ಕನಿಷ್ಠ ಸಂಬಳವನ್ನು ಸರಿಯಾಗಿ ಪಾವತಿಸಿಲ್ಲದಿರುವುದು ಅಕ್ಷಮ್ಯ ಅಪರಾಧ ಎಂದಿದ್ದಾರೆ.

ಸರ್ಕಾರ ಈ ಕೂಡಲೇ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲಿ, ಇಲ್ಲವೇ ಅವರನ್ನು ಕೋವಿಡ್ ಕರ್ತವ್ಯದಿಂದ ತಕ್ಷಣ ಬಿಡುಗಡೆಗೊಳಿಸಬೇಕೆಂದು ತಮ್ಮ ಪಕ್ಷ ಆಗ್ರಹಿಸುತ್ತದೆ ಎಂದು ಬಹುಜನ ಸಮಾಜ ಪಾರ್ಟಿ, ರಾಜ್ಯಾಧ್ಯಕ್ಷ. . ಕೃಷ್ಣಮೂರ್ತಿ ಹೇಳಿದ್ದಾರೆ.

Post a Comment

0 Comments

Ad Code

Responsive Advertisement