ವಿಯೆಟ್ನಾಂ: ಕಳೆದ ಅಕ್ಟೋಬರ್ನಲ್ಲಿ ಮತ್ತೆ ಲಂಡನ್ನಲ್ಲಿ ಕಾಣಿಸಿಕೊಂಡ ಕೊರೋನಾ ರೂಪಾಂತರಿ ವೈರಸ್ ಮತ್ತೊಮ್ಮೆ ಇಡೀ ವಿಶ್ವದ ಎದುರು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂಗ್ಲೆಂಡ್ನಲ್ಲಿ ಕಾಣಿಸಿಕೊಂಡ ಅದೇ ರೂಪಾಂತರಿ ವೈರಸ್ ಇದೀಗ ಭಾರತದಲ್ಲೂ ದೊಡ್ಡ ಮಟ್ಟದ ಅನಾಹುತಗಳನ್ನು ಸೃಷ್ಟಿಸುತ್ತಿದೆ. ಈ ನಡುವೆ ಭಾರತ ಮತ್ತು ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿ ಕೊರೋನಾ ವೈರೈಸ್ ಈಗ ವಿಯೆಟ್ನಾಂ ದೇಶದಲ್ಲೂ ಕಾಣಿಸಿಕೊಂಡಿದ್ದು, ಈ ಮಾದರಿಯ ವೈರಸ್‌ಗಳು ಗಾಳಿಯಲ್ಲಿ ಅತಿ ಶೀಘ್ರವಾಗಿ ಹರಡಬಲ್ಲದು ಎಂದು ವಿಯೆಟ್ನಾಂ ತನ್ನ ಸಂಶೋಧನೆಯ ಮೂಲಕ ತಿಳಿಸಿದ್ದು, ಮತ್ತಷ್ಟು ಆಘಾತಕ್ಕೆ ಕಾರಣವಾಗಿದೆ.
ಕೊರೋನಾ ಮೊದಲ ಅಲೆ ಇಡೀ ವಿಶ್ವವನ್ನೇ ಕಾಡಿತ್ತು. ಒಂದು ಹಂತದಲ್ಲಿ ಎಲ್ಲಾ ದೇಶಗಳು ಲಾಕ್ಡೌನ್ ಘೋಷಿಸುವ ಮೂಲಕ ಈ ಸೋಂಕನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿತ್ತು.
ವಿಯೆಟ್ನಾಂ ದೇಶದಲ್ಲಿ ಇದುವರೆಗೆ 6,800 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದ್ದು 47 ಜನ ಬಲಿಯಾಗಿದ್ದಾರೆ ಎಂದು ವಿಯೆಟ್ನಾಂ ಸರ್ಕಾರ ತಿಳಿಸಿದೆ. ವಿಯೆಟ್ನಾಂ ನಲ್ಲಿ ಇದು ವರೆಗೆ 10 ಲಕ್ಷ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಈ ಹೊಸ ಸಂಶೋಧನೆ, "ಗಂಟಲ ದ್ರವದಲ್ಲಿ ಸೇರಿರುವ ಹೊಸ ರೂಪಾಂತರಿ ವೈರಸ್ ಶೀಘ್ರವಾಗಿ ಸುತ್ತಲಿನ ವಾತಾವರಣಕ್ಕೆ ಹರಡುವ ಶಕ್ತಿ ಹೊಂದಿದೆ" ಎಂದು ತಿಳಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಬ್ರಿಟನ್ ಮತ್ತು ಭಾರತದಲ್ಲಿ ರೂಪಾಂತರಗೊಂಡ ಹೊಸ ಕೋರೋನಾ ವೈರಸ್ ತಳಿ ವಿಯೆಟ್ನಾಂ ನಲ್ಲಿ ತೀವ್ರವಾಗಿ ಹರಡುತ್ತಿದೆ ಇದೆ ಎಂದು ವಿಯೆಟ್ನಾಂ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೋನಾ ಎರಡನೇಯ ಅಲೆಯ ಸಂದರ್ಭದಲ್ಲಿ ವಿಯೆಟ್ನಾಂ ನ ಅರ್ಧದಷ್ಟು ಭಾಗಕ್ಕೆ ಕೊರೋನಾ ವೈರಸ್ ಹರಡಿದೆ. ಹನೋಯಿ ಮತ್ತು ಹೋ ಚಿನ್ ಮಿನ್ಹ್ ನಂತಹ ಕೈಗಾರಿಕಾ ನಗರಗಳಲ್ಲಿ ಕೊರೋನಾ ಹೊಸ ರೂಪಾಂತರಿ ತಳಿ ವೈರಸ್ ತೀವ್ರವಾಗಿ ಹರಡುತ್ತಿದೆ. ಕೊರೋನಾ ಸೋಂಕಿನ ಹರಡುವಿಕೆ ಕಳೆದ ವರ್ಷಕ್ಕಿಂತ ಈ ವರ್ಷ ತೀವ್ರವಾಗಿದೆ ಎಂದು ವಿಯೆಟ್ನಾಂ ಸರ್ಕಾರ ತಿಳಿಸಿದೆ.
ನಾವು ಭಾರತ ಮತ್ತು ಬ್ರಿಟನ್ ನಲ್ಲಿ ಮೊತ್ತ ಮೊದಲಿಗೆ ಕಾಣಿಸಿಕೊಂಡ ಕೊರೋನಾ ಹೊಸ ರೂಪಾಂತರಿಯನ್ನು ವಿಯಾಟ್ನಾಂ ನಲ್ಲಿಯೂ ಪತ್ತೆ ಹಚ್ಚಿದ್ದೇವೆ. ಗಂಟಲುದ್ರವದಲ್ಲಿ ಸೇರಿರುವ ಈ ಹೊಸ ತಳಿ ವೈರಸ್‌ಗಳು ಅತ್ಯಂತ ಶೀಘ್ರವಾಗಿ ಮತ್ತು ತೀವ್ರ ಸ್ವರೂಪದಲ್ಲಿ ಗಾಳಿಯ ಮೂಲಕ ಸುತ್ತಲಿನ ಪರಿಸರಕ್ಕೆ ಹರಡುತ್ತಿರುವುದನ್ನು ಕಂಡುಕೊಂಡಿದ್ದೇವೆ ಎಂದು ವಿಯೆಟ್ನಾಂ ಆರೋಗ್ಯ ಸಚಿವ ನುಗುಯೆನ್ ಥಾನ್ ಲಾಂಗ್ ಶನಿವಾರ ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

0 Comments