Ticker

6/recent/ticker-posts

Ad Code

Responsive Advertisement

ಲಾಕ್-ಡೌನ್ ಮರೆಯಲ್ಲಿ ದುಷ್ಕರ್ಮಿಗಳಿಂದ ಮಲೆನಾಡಿನಲ್ಲಿ ಕಾಡಿನ ನಾಶ

 ಲಾಕ್-ಡೌನ್ ಮರೆಯಲ್ಲಿ ದುಷ್ಕರ್ಮಿಗಳಿಂದ ಮಲೆನಾಡಿನಲ್ಲಿ ಅಮೂಲ್ಯ ಕಾಡಿನ ನಾಶ:

 ರಾಜ್ಯವು ಕೋವಿಡ್-19 ಸಾಂಕ್ರಾಮಿಕದಿಂದ ತತ್ತರಿಸುತ್ತಿದ್ದು, ಸಾರ್ವಜನಿಕರ ಆರೋಗ್ಯ ಕಾಯ್ದುಕೊಳ್ಳುವ ಕಾರ್ಯದಲ್ಲಿ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ನಿರಂತರ ಶ್ರಮಪಡುತ್ತಿದ್ದಾರೆ. ಈ ಸಂದರ್ಭದಲ್ಲಿನ ಲಾಕ್-ಡೌನ್ ವೇಳೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವು ದುಷ್ಕರ್ಮಿಗಳು, ಮಲೆನಾಡಿನ ಹಲವೆಡೆಗಳಲ್ಲಿ ಕಾಡಿನ ಹಸಿಮರ ಕಡಿತ ಹಾಗೂ ಅತಿಕ್ರಮಣದಲ್ಲಿ ವ್ಯಾಪಕವಾಗಿ ತೊಡಗಿಕೊಂಡಿರುವದು ಗಮನಕ್ಕೆ ಬಂದಿದೆ. ಈ ಕುರಿತು ಶೀಘ್ರವಾಗಿ ತನಿಖೆ ನಡೆಸಿ, ದುಶ್ಕರ್ಮಿಗಳ ವಿರುದ್ಧ ಕಾನೂನುಕ್ರಮ ಜರುಗಿಸಿ, ಸೂಕ್ಷ್ಮಪರಿಸರದ ಈ ಕಾಡುಗಳು ನಾಶವಾಗುತ್ತಿರುವದನ್ನು ತಡೆಯಬೇಕೆಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಅರಣ್ಯ ಸಚಿವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಪ್ರಾಥಮಿಕ ಸಮೀಕ್ಷಾ ವರದಿಯನ್ನೂ ಅವರು ಸಲ್ಲಿಸಿದ್ದಾರೆ.


ಅರಣ್ಯ ಇಲಾಖೆಯೂ ಸೇರಿದಂತೆ ಸರ್ಕಾರದ ಗಮನ ಕೋವಿಡ್ ನಿಯಂತ್ರಿಸುವತ್ತ ಇರುವಾಗ, ನಗರ ಪ್ರದೇಶಗಳಿಂದ ಊರಿಗೆ ಬಂದ ಕೆಲವರೂ ಸೇರಿದಂತೆ, ಕೆಲವು ಸಮಾಜ ವಿರೋಧಿಶಕ್ತಿಗಳು ಈ ಬಗೆಯ ಗಂಭೀರ ಅರಣ್ಯನಾಶದಲ್ಲಿ ತೊಡಗಿದ್ದಾರೆ. ಜೇಸಿಬಿ ಬಳಸಿ ರಾತ್ರೋರಾತ್ರಿ ನೂರಾರು ಎಕರೆ ಅರಣ್ಯ ಅತಿಕ್ರಮಿಸಿ, ವಿದ್ಯುತ್-ಚಾಲಿತ ಯಂತ್ರಗಳಿಂದ ಸಾವಿರಾರು ಅಮೂಲ್ಯ ಬಲಿತ ಹಸಿಮರಗಳನ್ನು ಕಡಿದಿರುವದರ ಕುರಿತು, ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಹಲವು ಪ್ರದೇಶಗಳಿಂದ  ಮಾಹಿತಿಗಳು ಬರುತ್ತಿವೆ. ಇದರ ವಿರುದ್ಧ  ಹಲವೆಡೆ ಸ್ಥಳೀಯ ರೈತರು, ಪ್ರಜ್ನಾವಂತರು, ಸ್ವಯಂಸೇವಾ ಸಂಸ್ಥೆಗಳು ಧ್ವನಿಯೆತ್ತಿದ್ದು, ಜೀವವೈವಿಧ್ಯ ಮಂಡಳಿಗೂ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡಳಿಯು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದಾಗ, ಇದು ಸತ್ಯವೆಂದು ಕಂಡುಬಂದಿದ್ದು, ಈ ಅರಣ್ಯನಾಶವು ಗಂಭೀರ ಪ್ರಮಾಣದಲ್ಲಿರುವದು  ತಿಳಿದುಬಂದಿದೆ. ಹೀಗಾಗಿ ಈ ಕುರಿತು ತುರ್ತು ಗಮನ ನೀಡಬೇಕೆಂದು ಅವರು ಸಚಿವರನ್ನು ಕೋರಿದ್ದಾರೆ.


ಈ ಹಿನ್ನೆಲೆಯಲ್ಲಿ, ಸನ್ಮಾನ್ಯ ಅರಣ್ಯ ಸಚಿವರು ಮಲೆನಾಡಿನ ಈ ಪ್ರದೇಶಗಳಿಗೆ ಶೀಘ್ರ ಭೆಟ್ಟಿನೀಡಬೇಕಾಗಿ ವಿನಂತಿಸಲಾಗಿದ್ದು, ಅಲ್ಲಿ ಅರಣ್ಯ ಕಾಯ್ದೆ, ವನ್ಯಜೀವಿ ಕಾಯ್ದೆ, ಜೀವವೈವಿಧ್ಯ ಸಂರಕ್ಷಣಾ ಕಾಯ್ದೆಗಳು ವ್ಯಾಪಕವಾಗಿ ಉಲ್ಲಂಘನೆಯಾಗುತ್ತಿರುವದನ್ನು ಗುರುತಿಸಿ, ತಡೆಯಲು ಕೋರಲಾಗಿದೆ. ಅರಣ್ಯಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ವಿಶೇಷ ಅರಣ್ಯ ಜಾಗೃತದಳವು ಶೀಘ್ರ ಧಾವಿಸಿ ಸ್ಥಳಗಳ ಸಮೀಕ್ಷೆ ನಡೆಸಿ, ಹಾನಿಯನ್ನು ಲೆಕ್ಕಹಾಕಿ, ದುಷ್ಕರ್ಮಿಗಳನ್ನು ಕಾನೂನಿನ ತೆಕ್ಕೆಗೆ ತೆಗೆದುಕೊಳ್ಳಬೇಕು. ಅರಣ್ಯ ಅತಿಕ್ರಮಣ,  ಮರಕಡಿತ, ವನ್ಯಪ್ರಾಣಿಗಳ ಬೇಟೆ ಇತ್ಯಾದಿ ಕುಕೃತ್ಯಗಳು ನಡೆದ ಸ್ಥಳಗಳನ್ನು ತನಿಖೆಗೆ ಒಳಪಡಿಸಬೇಕು. ಇನ್ನು ಮುಂದೆ ಅವು ನಾಶವಾಗದಂತೆ, ಕಾವಲು ಶಿಭಿರಗಳನ್ನು ಸ್ಥಾಪಿಸಿ ನಿರಂತರ ಪಹರೆ ಹೆಚ್ಚಿಸಬೇಕಿದೆ. ಅಗತ್ಯವಿದ್ದೆಡೆ ಗಡಿ ಗುರುತಿಸುವ ಕಂದಕಗಳನ್ನೂ ಆದ್ಯತೆಯ ಮೇರೆಗೆ ರಚಿಸಬೇಕು ಎಂದು ಅವರು ಸಚಿವರನ್ನು ಕೋರಿದ್ದಾರೆ.


ಕಳೆದ ಕೇವಲ ಮೂರು-ನಾಲ್ಕು ವಾರಗಳಲ್ಲಿ ವ್ಯಾಪಕವಾಗಿ ನಾಶವಾದ, ಈ ಕೆಳಗಿನ ಕೆಲವು ಅಮೂಲ್ಯ ಅರಣ್ಯ ಪ್ರದೇಶಗಳನ್ನು ಊದಾಹರಣೆಯಾಗಿ  ಅವರು ಉಲ್ಲೇಖಿಸಿದ್ದಾರೆ.

·         ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲುಕಿನ ಬೀರೂರು ಹತ್ತಿರ ವಗರೆಹಳ್ಳಿಯ ಹೊಗರೆಕಾನುಗಿರಿ ಬೆಟ್ಟದ ಬುಡದಲ್ಲಿ 12ಕ್ಕೂ ಮಿಕ್ಕಿ ಸ್ಥಳಗಳಲ್ಲಿ ಸುಮಾರು 480ಎಕರೆಯಷ್ಟು ಅರಣ್ಯವನ್ನು ಧ್ವಂಸ ಮಾಡಲಾಗಿದೆ. ಈ ಬೆಟ್ಟವು “ಪಾರಂಪರಿಕ ಜೀವವೈವಿಧ್ಯ ತಾಣ”  ಎಂಬುದನ್ನು ಇಲ್ಲಿ ಉಲ್ಲೇಖನೀಯ.  



·         ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪ ಬಾಳೂರು ಸಂರಕ್ಷಿತ ಅರನ್ಯದಲ್ಲಿ 472ಕ್ಕೂ ಮಿಕ್ಕಿ ಬೃಹತ್ ವೃಕ್ಷಗಳನ್ನು ಕಳೆದ ಎರಡು ವಾರಗಳಲ್ಲಿ ಕಡಿಯಲಾಗಿದೆ. ಗರಗೆ, ಗೊದ್ದ, ಬಬ್ಬಿ, ಧೂಪ, ನಂದಿ, ಸಂಪಿಗೆ, ನೇರಲು ತಾರೆ, ಹೆಬ್ಬಲಸು, ಹಲಸು, ಕಾಡುಮಾವು ಮುಂತಾದ ವಿನಾಶದಂಚಿನ ಹಾಗೂ ಅಮೂಲ್ಯ ಪ್ರಭೇಧಗಳ ಮರಗಳು ನಾಶವಾಗಿದೆ.

·        ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರದ ಬಳಿ ಸೂರಳಿ ಎಂಬಲ್ಲಿ ಸುಮಾರು 42ಎಕರೆಗೂ ಮಿಕ್ಕಿ  ಅರಣ್ಯವನ್ನು ಕಳೆದ ಎಪ್ರಿಲ್ ತಿಂಗಳಲ್ಲಿ ನಾಶಮಾಡಲಾಗಿದೆ.

·        ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಸರಿಕಟ್ಟೆ, ದೇವಗೋಡ ಗ್ರಾಮದಲ್ಲಿ ವ್ಯಾಪಕವಾಗಿ ಅರಣ್ಯ ನಾಶಮಾಡಲಾಗಿದೆ.

·        ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದಿಂದ ಕೇವಲ 3ಕಿಮಿ ದೂರದಲ್ಲಿರುವ ಸುಮಾರು 540ಎಕರೆ ವಿಸ್ತಾರವಾದ ಹಳೆಸೊರಬ ದೇವರಕಾನು ಅರಣ್ಯದಲ್ಲಿ, ದೇವದಾರು, ನೇರಳೆ, ಬರಣಿಗೆ, ತೇಗ ಜಾತಿಗೆ ಸೇರಿದ 140ಕ್ಕೂ ಮಿಕ್ಕಿ ಮರಗಳನ್ನು ಏಕಾಏಕಿ ಎಪ್ರಿಲ್ ತಿಂಗಳಲ್ಲಿ ಕಡಿಯಲಾಗಿದೆ. ಇವುಗಳಲ್ಲಿ ಹಲವು ಮರಗಳು 300ವರ್ಷಕ್ಕೂ ಮಿಕ್ಕಿ  ಹಳೆಯ ಭಾರಿ ಮರಗಳಾಗಿವೆ. ಕಳೆದ ಎರಡು ದಶಕಗಳಿಂದ ಅಧ್ಯಯನಕ್ಕೆಂದು ದೇಶದಾದ್ಯಂತದಿಂದ ವಿಜ್ನಾನಿಗಳು ಬರುತ್ತಿರುವ ಅಮೂಲ್ಯವಾದ ಮಲೆನಾಡಿನ ಪ್ರಾತಿನಿಧಿಕ ಕಾನುಅರಣ್ಯ ಇದು ಎಂಬುದು ಉಲ್ಲೇಖನಿಯ.   




·        ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿ ಬಳಿಯ ದುಗ್ಲಿ ಹೊಸೂರು, ಚೌಡಿಕಾನು, ತೆಕ್ಕೂರು, ನಿಟ್ಟಕ್ಕಿ ಹಳ್ಳಿಗಳಲ್ಲಿ ಶುಂಠಿ ಮಾಫಿಯಾಕ್ಕೆ ಸೇರಿದ ಹಲವರು ಅರಣ್ಯ ಅತಿಕ್ರಮಣ ಮಾಡುತ್ತಲೇ ಇದ್ದಾರೆ.

·        ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಮಟಗುಪ್ಪೆ, ಕಾರಹೊಂಡ, ಬೀರದೇವರ ವನ, ಎಲಸಿ ಹಳ್ಳಿಗಳಲ್ಲಿ ಸಹ ಕಳೆದ ಒಂದೂವರೆ ತಿಂಗಳಿಂದ ವ್ಯಾಪಕವಾಗಿ ಅರಣ್ಯನಾಶವಾಗುತ್ತಿದೆ.

·        ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬಿಳಿಸಿರಿ, ಮಂಚಾಲೆ, ಬೊಮ್ಮತ್ತಿ, ಚಿತ್ರಟ್ಟೆ ಪ್ರದೇಶದ ಅಮೂಲ್ಯ ಕಾಡು ಹಾಗೂ ಕೆರೆಪಾತ್ರದ ಪ್ರದೇಶಗಳು  ಅವ್ಯಾಹತವಾಗಿ ಅತಿಕ್ರಮಣಕ್ಕೆ ಒಳಗಾಗುತ್ತಿದೆ. 

·        ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಂಚ ಹೋಬಳಿ ಗುಡ್ಡೆಕೊಪ್ಪದಲ್ಲಿ ಸರ್ಕಾರಿ ಸ್ವಾಮ್ಯದ ಎಮ್.ಪಿ.ಎಮ್. ನೆಡುತೋಪಿನಲ್ಲಿ ಸುಮಾರು 50ಎಕರೆಗೂ ಮಿಕ್ಕಿ ಸಾಮಾಜಿಕ ಅರಣ್ಯವು ಈ ಮೇ ತಿಂಗಳಿನಲ್ಲೇ ಕಬಳಿಕೆಯಾಗಿದೆ.

·        ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ ತಾಲ್ಲೂಕಿನ ಕೋಣಂದೂರು ಬಳಿ 40ಎಕರೆ ಗ್ರಾಮ ಅರಣ್ಯವನ್ನು ಖಾಸಗಿಯವರು ಕಟಾವು ಮಾಡಲು ಪ್ರಯತ್ನಿಸಿದ್ದು, ಇದನ್ನು ಸ್ಥಳಿಯರು ಒಟ್ಟಾಗಿ ವಿರೋಧಿಸಿದ್ದರಿಂದ ಸದ್ಯಕ್ಕೆ ತಡೆಬಿದ್ದಿದೆ.  

                ಇವು ಊದಾಹರಣೆಗಳು ಮಾತ್ರ. ಇನ್ನೂ ಹಲವೆಡೆ ಅರಣ್ಯನಾಶವಾಗುತ್ತಿದೆ. ಕಾದಿಟ್ಟ ಅರಣ್ಯ, ದೇವರ ಕಾಡು, ಕಾನು, ಗೋಮಾಳ, ನದಿತಪ್ಪಲು, ಕೆರೆಯಂಗಳ- ಈ ಎಲ್ಲ ಪ್ರದೇಶಗಳು ಈ ರೀತಿಯಲ್ಲಿ ನಾಶವಾಗುತ್ತಿರುವದು ಖೇದದ ಸಂಗತಿ.  ಕಳೆದವರ್ಷ ಬೇಸಿಗೆಯಲ್ಲಿ ಲಾಕ್-ಡೌನ್ ಅವಧಿಯಲ್ಲೂ ಕೂಡ ನೂರಕ್ಕೂ ಮಿಕ್ಕಿ ಸ್ಥಳಗಳಲ್ಲಿ  ಈ ಬಗೆಯ ಕುಕೃತ್ಯಗಳು ನಡೆದಿದ್ದವು. ಅದರಿಂದ ಪಾಠ ಕಲಿತು, ಈ ವರ್ಷವಾದರೂ ಈ ಬಗೆಯ ನಾಶ ಘಟಿಸದಂತೆ ತಡೆಯಲು ಅರಣ್ಯ ಇಲಾಖೆಯು ನಿಗಾವಹಿಸಬೇಕಿತ್ತು. ಇದೀಗ ಮತ್ತೆ ಸಾವಿರಾರು  ಎಕರೆ ಅಮೂಲ್ಯ ಅರಣ್ಯ ಪ್ರದೇಶವು ಹೀಗೆ ಪುನಃ ನಾಶವಾಗಿರುವದು, ಮಲೆನಾಡಿನ ಪರಿಸರ ಹಾಗೂ ಇಲ್ಲಿ ಹುಟ್ಟಿಹರಿಯುವ ನದಿಗಳ ಸಮಗ್ರತೆಗೆ ಧಕ್ಕೆತಂದಿದೆ. ಹೀಗಾಗಿ, ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ, ತುರ್ತು ಕ್ರಮವನ್ನು ಕೈಗೊಳ್ಳಬೇಕೆಂದು ಅವರು  ಅರಣ್ಯ ಸಚಿವರನ್ನು ಕೋರಿದ್ದಾರೆ.


Advertisement : 




Post a Comment

0 Comments

Ad Code

Responsive Advertisement