Ticker

6/recent/ticker-posts

Ad Code

Responsive Advertisement

ಯುವ ಕಾಂಗ್ರೆಸ್ ನಿಂದ ಹೋಮ್ ಐಸೋಲೇಷನ್ ಕಿಟ್, ಆಹಾರ ವಿತರಣೆ

 ಕೋವಿಡ್ ಸೋಂಕಿತರಿಗೆ ಐಸೋಲೇಷನ್ ಕಿಟ್ ಗಳು, ಅಗತ್ಯವಿರುವವರಿಗೆ ಆಹಾರ, ಪ್ಲಾಸ್ಮಾ, ರಕ್ತದಾನ ಶಿಬಿರ ಆಯೋಜಿಸುತ್ತಿರುವ ಪ್ರದೇಶ ಯುವ ಕಾಂಗ್ರೆಸ್ ಪಡೆ: ಮುಂದುವರೆದ ಕಾಂಗ್ರೆಸ್ ಸಹಾಯ ಹಸ್ತ ಕಾರ್ಯಾಚರಣೆ

ಬೆಂಗಳೂರು, ಏ 30; ರಾಜ್ಯದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಬೆಚ್ಚಿ ಬೀಳಿಸುವ ರೀತಿಯಲ್ಲಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪ್ರದೇಶ ಯುವ ಕಾಂಗ್ರೆಸ್ ಪಡೆ  ಕೋವಿಡ್ ಸೋಂಕಿತರಿಗೆ ಐಸೋಲೇಷನ್ ಕಿಟ್, ಅಗತ್ಯವಿರುವವರಿಗೆ ಆಹಾರ ವಿತರಿಸುವ ಕಾರ್ಯದಲ್ಲಿ ನಿರತವಾಗಿದೆ. ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿರುವವರಿಂದ ಪ್ಲಾಸ್ಮಾ ಸಂಗ್ರಹ, ರಕ್ತದಾನ ಶಿಬಿರಗಳನ್ನು ಸಹ ಆಯೋಜಿಸುತ್ತಿದೆ.

“ಕೋವಿಡ್ ಸಹಾಯ ಹಸ್ತ” ಹೆಸರಿನಡಿ ರಾಜ್ಯಾದ್ಯಂತ ಕೋವಿಡ್ ಸೋಂಕಿತರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಂದಿಸುತ್ತಿರುವ ಯುವ ತಂಡ ಇದೀಗ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ನೋಂದಣಿ ಮಾಡಿಕೊಂಡಿರುವವರಿಗೆ ಐಸೋಲೇಷನ್ ಕಿಟ್ ಗಳನ್ನು ವಿತರಿಸುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಹಾಸಿಗೆಗಳು ಸಿಗದೇ ತೀವ್ರ ತೊಂದರೆಯಲ್ಲಿರುವ ಹಿನ್ನೆಲೆಯಲ್ಲಿ ಬಹಳಷ್ಟು ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಮನೆ ಆರೈಕೆಯಲ್ಲಿರುವವರಿಗೆ ಧೈರ್ಯ ತುಂಬುವ ಜತೆಗೆ ಅತ್ಯಂತ ಅಗತ್ಯವಾಗಿರುವ ಬಹುತೇಕ ಔಷಧಗಳನ್ನೊಳಗೊಂಡ ಕಿಟ್ ಒದಗಿಸಲಾಗುತ್ತಿದೆ.  

ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದ ಯುವ ತಂಡ, ಕೋವಿಡ್ ಚಿಕಿತ್ಸೆಗೆ ಅಗತ್ಯವಾಗಿರುವ ಬಹುತೇಕ ಔಷಧಿಗಳನ್ನು ಪೂರೈಸುತ್ತಿದ್ದು, ಇವು ಸೋಂಕಿತರಿಗೆ ಅತ್ಯಂತ ಅಗತ್ಯವಾಗಿವೆ.    

ತಜ್ಞ ವೈದ್ಯರ ಮಾರ್ಗದರ್ಶನದಂತೆ ಔಷಧಿ ಕಿಟ್ ಗಳನ್ನು ಸಿದ್ಧಪಡಿಸಿದ್ದು, ಇದರಲ್ಲಿ ಹೈಡ್ರೋಕ್ಲೋರಿನ್, ಕ್ಯಾಲ್ಷಿಯಂ, ವಿಟಮಿನ್ ಡಿ, ವಿಟಮಿನ್ ಸಿ, ಜಿಂಕ್ ಮಾತ್ರೆಗಳು, ಉಸಿರಾಟದ ತೊಂದರೆ ಎದುರಾದಾಗ ಬಳಸುವ ಡೆಕ್ಸಜೋಕ್ಸ್, ಜ್ವರ ಬಂದಲ್ಲಿ ಪ್ಯಾರಸಿಟಮಲ್ ಮಾತ್ರೆಗಳು, ಗಂಟಲು ನೋವು, ನೆಗಡಿ, ಕೆಮ್ಮು ಇದ್ದಾಗ ಏನೇನು ಮಾಡಬೇಕು ಎನ್ನುವ ಮಾಹಿತಿಯನ್ನೂ ಸಹ ಈ ಕಿಟ್ ಒಳಗೊಂಡಿದೆ. ಸೋಂಕಿತರಿಗೆ ಆರೋಗ್ಯ ಕುರಿತ ಏನಾದರೂ ಸಂದೇಹಗಳಿದ್ದರೆ ತಜ್ಞ ವೈದ್ಯರ ದೂರವಾಣಿ ಸಂಖ್ಯೆಯನ್ನು ಸಹ ಯುವ ಪಡೆ ಒದಗಿಸಿದೆ.

ಯುವ ಕಾಂಗ್ರೆಸ್ ಪದಾಧಿಕಾರಿಗಳು ಇಂದು ಬೆಂಗಳೂರಿನ ಆಡುಗೋಡಿ ಮತ್ತಿತರ ಪ್ರದೇಶಗಳಿಗೆ ತೆರಳಿ ಐಸೋಲೇಷನ್ ಕಿಟ್ ಗಳನ್ನು ವಿತರಿಸಿದ್ದು, ಅಗತ್ಯವಿರುವವರಿಗೆ ಕಿಟ್ ಗಳ ಜತೆಗೆ “ ಕೋವಿಡ್ ಸಹಾಯ ಹಸ್ತ” ದ ಮೂಲಕ ನೆರವು ನೀಡಲಾಗುವುದು ಎಂದು ಎಂ.ಎಸ್. ರಕ್ಷಾ ರಾಮಯ್ಯ ತಿಳಿಸಿದ್ದಾರೆ.

ಜತೆಗೆ ಇಂದು ಬೆಂಗಳೂರಿನ ಕಮ್ಮನಹಳ್ಳಿ, ಶಾಂತಿನಗರ, ಸರ್ವಜ್ಞ ನಗರ, ಆಡುಗೋಡಿ, ಮಲ್ಲೇಶ್ವರಂ, ಬನ್ನೇರುಘಟ್ಟ ಮತ್ತಿತರ ಪ್ರದೇಶಗಳಲ್ಲಿ ಕರ್ಫ್ಯೂ ಸಂದರ್ಭದಲ್ಲಿ ಆಹಾರ ವಿತರಣೆ ಮಾಡಲಾಗಿದೆ. ಇದು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಮಯ. ರಾಜ್ಯ ಮತ್ತು ದೇಶದ ಹಲವೆಡೆ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಎಲ್ಲಕ್ಕಿಂತ ಜನರ ಜೀವ ರಕ್ಷಣೆ ನಮಗೆ ಮುಖ್ಯವಾಗಿದೆ. ನಮ್ಮ ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡುತ್ತಿರುವ ಪ್ರತಿಯೊಂದು ಜೀವ ಉಳಿಯಬೇಕು ಎಂಬುದು ಯುವ ಕಾಂಗ್ರೆಸ್ ನ ದ್ಯೇಯವಾಗಿದೆ ಎಂದು ಹೇಳಿದ್ದಾರೆ.

ಕೋವಿಡ್ ಸಹಾಯ ಹಸ್ತ ಹೆಸರಿನಲ್ಲಿ ಯುವ ಕಾಂಗ್ರೆಸ್ ಪಡೆ ಕಳೆದ ಹಲವು ದಿನಗಳಿಂದ ಸಕ್ರಿಯವಾಗಿದೆ. ಅಗತ್ಯವಿರುವ ಸೋಂಕಿತರಿಗೆ ಹಾಸಿಗೆ ಮತ್ತಿತರ ಮೂಲ ಸೌಕರ್ಯ ಒದಗಿಸುವ ಕೆಲಸದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದೆ. ಕೋವಿಡ್ ನ ಎರಡನೇ ಅಲೆ ಯಾರೂ ನಿರೀಕ್ಷೆ ಮಾಡದಷ್ಟು ಪ್ರಮಾಣದಲ್ಲಿ ಜನ ಜೀವನದ ಮೇಲೆ ಅಪ್ಪಳಿಸಿ ಘಾಸಿಗೊಳಿಸಿದೆ. ಮೂರನೇ ಅಲೆಗೂ ಮುನ್ನ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷದ ವಿವಿಧ ವಿಭಾಗಗಳು ಕೋವಿಡ್ ಸೋಂಕಿತರ ರಕ್ಷಣೆಗೆ ಮುಂದಾಗಿದ್ದು, ಯುವ ಕಾಂಗ್ರೆಸ್ ಕೂಡ ತನ್ನದೇ ಆದ ವಿಶೇಷ ಮತ್ತು ವಿನೂತನ ಪ್ರಯತ್ನದಲ್ಲಿ ತೊಡಗಿಕೊಂಡಿದೆ ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ.

ಜತೆಗೆ ತೀವ್ರ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ಲಾಸ್ಮಾ ಸಂಗ್ರಹ, ರಕ್ತ ನಿಧಿ ಶಿಬಿರಗಳನ್ನು ಸಹ ಆಯೋಜಿಸಲಾಗುತ್ತಿದೆ. ಕರ್ಫ್ಯೂ ಸಮಯದಲ್ಲಿ ಪ್ಲಾಸ್ಮಾ ಮತ್ತು ರಕ್ತ ಸಂಗ್ರಹ ಅತ್ಯಂತ ಕಠಿಣವಾಗಿದ್ದು, ಯುವ ಕಾಂಗ್ರೆಸ್ ಘಟಕಗಳಿಂದ ಇದಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement