Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆಗಳು ಸಂಘಟಿತವಾದರೆ ಪಕ್ಷ ಸದೃಢ, ಸಂಘಟನೆ ಖುಷಿಕೊಡುತ್ತೆ : ಹೆಚ್.ಎಂ. ರೇವಣ್ಣ

ಕಾಂಗ್ರೆಸ್ ಪಕ್ಷದಲ್ಲಿ ನಾನು ಸಂಘಟನೆಯಿಂದ ಬಂದಿದ್ದೇನೆ. ಮೂರು ಬಾರಿ ಸಚಿವನಾಗಿದ್ದೇನೆ. ಕಾಂಗ್ರೆಸ್ ಪಕ್ಷದ ಸಂಘಟನೆ ಮಂತ್ರಿಗಿರಿಗಿಂತಲೂ ನನಗೆ ಹೆಚ್ಚಿನ ಆಸಕ್ತಿ ಪಕ್ಷದ ಸಂಘಟನೆ ಖುಷಿ ಕೊಡುತ್ತೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಇಂದು ಅಭಿಪ್ರಾಯ ಪಟ್ಟರು. ಅವರಿಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ರಾಜ್ಯಕಾರ್ಯಕಾರಿಣಿ ಹಾಗೂ ರಾಜ್ಯದ ಜಿಲ್ಲಾಧ್ಯಕ್ಷರುಗಳ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ತಾವು ಸಹ ಕಾರ್ಮಿಕ ಸಂಘಟನೆ ಮಾಡುವ ಮೂಲಕ ಕಾರ್ಮಿಕರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಿದ್ದು, 1983ರಲ್ಲಿ ರೇಷ್ಮೆ ಇಲಾಖೆಯ ಹತ್ತು ಸಾವಿರ ಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ಮಾಡಿದ್ದೇವೆ. ಜೊತೆಗೆ ಕಟ್ಟಡ ಕಾರ್ಮಿಕರ, ಬೀಡಿ ಕಾರ್ಮಿಕರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇ ಎಂದು ನೆನಪು ಮಾಡಿಕೊಂಡರು. ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಹರಲಾಲ್ ನೆಹರುರವರು ರಾಜ್ಯದಲ್ಲಿ ಹೆಚ್.ಎಂ.ಟಿ. ಕಾರ್ಖಾನೆ ಉದ್ಘಾಟನೆ ಮಾಡಿ ನಾನಿಂದು ಪವಿತ್ರ ದೇವಸ್ಥಾನವನ್ನು ಉದ್ಘಾಟಿಸಿದ್ದೇನೆ. ಇದರಿಂದ ಕಾರ್ಮಿಕರ ಬದುಕು ಹಸನಾಗಲಿ ಎಂದು ಹಾರೈಸಿದ್ದರು. 


ಆದರೆ ಮೋದಿ ಸರ್ಕಾರದಲ್ಲಿ ಒಂದೇ ಒಂದು ಹೊಸ ಕೈಗಾರಿಕೆಗಳಾಗಲಿ, ಜನರಿಗೆ ಉದ್ಯೋಗವಾಗಲಿ ದೊರೆಯುತ್ತಿಲ್ಲ. ಬದಲಾಗಿ ಕಾಂಗ್ರೆಸ್ ಸರ್ಕಾರ ಮಾಡಿದ ಕಾರ್ಖಾನೆಗಳನ್ನು ತನ್ನ ಮಿತ್ರರಿಗೆ ಮಾರಾಟ ಮಾಡುತ್ತಿದ್ದಾರೆಂದು ದೂಷಿಸಿದರು. ಕಾಂಗ್ರೆಸ್ ಪಕ್ಷದ ಯಾವುದೇ ಜವಾಬ್ದಾರಿ ವಹಿಸಿಕೊಂಡ ಕಾರ್ಯಕರ್ತರು ತಮ್ಮ ಸ್ಥಾನಮಾನಕ್ಕೆ ನ್ಯಾಯ ಒದಗಿಸಬೇಕು ಕೇವಲ ವಿಜಿಟಿಂಗ್ ಕಾರ್ಡ್ ಲೀಡರ್ ಆಗಬಾರದು ನಿಷ್ಠೆಯಿಂದ ಪಕ್ಷದ ಸಂಘಟನೆ ಮಾಡಿದವರಿಗೆ ಅಧಿಕಾರ ತಾನಾಗಿಯೇ ಬರುತ್ತದೆಂದು ತಿಳಿಸಿದ ರೇವಣ್ಣ ಬೆಂಗಳೂರು ಹೊರತು ಪಡಿಸಿ ರಾಜ್ಯದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಮಿಕ ವಿಭಾಗದ ಕಾರ್ಯಕಾರಿಣಿಯನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ್ದಕ್ಕಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಹೆಚ್. ಸುಭಾನ್ ಸಾಬ್‍ರವರಿಗೆ ಪ್ರಶಂಸಿದರು. 

ಸಮಾರಂಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಕೆ. ಪುಟ್ಟಸ್ವಾಮಿ ಗೌಡ್ರು ಕಾರ್ಮಿಕರ ಹಿತಾಸಕ್ತಿ ಕಾಪಾಡುವ ನಾಲತ್ತನಾಲ್ಕು ಕಾಯ್ದೆಗಳಲ್ಲಿ ನಲವತ್ತು ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸುವ ಮೂಲಕ ಬಂಡವಾಳ ಶಾಹಿಗಳ ಪರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿಂತರು, ಕೇವಲ ಆದಾನಿ ಅಂಬಾನಿಗಾಗಿ ದೇಶದ ಕಾರ್ಮಿಕರ ಹಿತವನ್ನು ಬಲಿಕೊಟ್ಟರು. ದೇಶದ ಕಾರ್ಮಿಕರ ರಕ್ಷಣೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂದು ಅವರು ಪ್ರತಿಪಾದಿಸಿದರು. 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡದೇ ಇರುವ ಕೈಗಾರಿಕೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಾ ಕೇವಲ ಧರ್ಮ, ಜಾತಿ, ವಿಷಬೀಜ ಬಿತ್ತುತ್ತಿದ್ದಾರೆಂದು ಅವರು ಆರೋಪಿಸಿದರು. ಕೆಪಿಸಿಸಿಯ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯಕಾರಿಣಿ ಹಾಗೂ ಜಿಲ್ಲಾಧ್ಯಕ್ಷರುಗಳ ಪ್ರಥಮ ಸಭೆಯನ್ನು ದಾವಣಗೆರೆಯಿಂದ ಪ್ರಾರಂಭಿಸಿದ್ದೇವೆ. ಪ್ರತಿ ತಿಂಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದೇ ರೀತಿ ಕಾರ್ರ್ಮಿಕ ಸಂಘಟನೆಗಾಗಿ ಸಭೆಗಳನ್ನು ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು. ಕೆಪಿಸಿಸಿ ಅದ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಆದೇಶದಂತೆ ಪಕ್ಷದ ಸಂಘಟನೆ ಮಾಡಿ ಈ ವರ್ಷ ಮತ್ತು ಮುಂದಿನ ವರ್ಷ ಬಿಜೆಪಿಯ ದುರಾಡಳಿತದ ವಿರುದ್ಧ ಸಂಘರ್ಷ ಮತ್ತು ಹೋರಾಟಗಳನ್ನು ಮಾಡುತ್ತೇವೆಂದು ಘೋಷಿಸಿದರು. 

ಕೆ.ಪಿಸಿಸಿ ರಾಜ್ಯ ವಕ್ತಾರರಾದ ಡಿ. ಬಸವರಾಜ್‍ನವರು ಮಾತನಾಡಿ ಕಳೆದ ಒಂದು ವರ್ಷದಿಂದ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ದೇಶದ ಮತ್ತು ರಾಜ್ಯದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ಕಾರ್ಮಿಕರ ನೆರವರಿಗೆ ಬರಲಿಲ್ಲ. ಲಾಕ್‍ಡೌನ್ ಸಂದರ್ಭದಲ್ಲಿ ಅನೇಕ ಕಾರ್ಮಿಕರು ಜೀವವನ್ನೇ ಕಳೆದುಕೊಂಡರು ಕಾರ್ಮಿಕರಿಗಾಗಿ ಕೆಲಸ ಮಾಡಬೇಕಾದ ಸರ್ಕಾರ ನಿರ್ಲಕ್ಷ್ಯ ತೋರಿತು. ಇಂತಹ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಕಿತ್ತೊಸೆಯಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕಾರ್ಮಿಕ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಉತ್ತಮ ಕಾಯ್ದೆಗಳನ್ನು ರೂಪಿಸಿದ್ದರು. ಮೋದಿ ಸರ್ಕಾರ ಬಂದ ಮೇಲೆ ಕಾರ್ಮಿಕರ ಪರವಾಗಿದ್ದ ಕಾಯ್ದೆಗಳನ್ನು ರದ್ದು ಮಾಡಿ ಕೈಗಾರಿಕೋದ್ಯಮಿಗಳು, ಶ್ರೀಮಂತರು ಮತ್ತು ಬಂಡವಾಳ ಶಾಹಿಗಳ ಪರವಾಗಿ ಕಾಯ್ದೆಗಳನ್ನು ರೂಪಿಸಿದರು ಎಂದು ಅವರು ಟೀಕಿಸಿದರು ರೈತರು ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು ಬಡವರು ಮೋದಿ ಆಡಳಿತದಲ್ಲಿ ಶೋಷಣೆಗೆ ಒಳಪಟ್ಟರು ಎಂದು ಅವರು ಟೀಕಿಸಿದರು.  

ದಾವಣಗೆರೆ ಜಿಲ್ಲಾ ಕಾಂಗ್ರೆಸ್‍ನ ಮುಖಂಡರು ಮತ್ತು ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರಾದ ಸೈಯದ್ ಸೈಫುಲ್ಲಾರವರು ಮಾತನಾಡಿ ಈ ಹಿಂದೆ ಸಚಿವರಾಗಿದ್ದ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರ ಆಡಳಿತದಲ್ಲಿ ದಾವಣಗೆರೆಯಲ್ಲಿ ಅಭಿವೃಧ್ಧಿ ಕಾರ್ಯಗಳ ಪರ್ವವೆ ನಡೆದಿತ್ತು. ಬಿಜೆಪಿಯವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಜನಸಾಮಾನ್ಯರಿಗೆ ಅಭಿವೃದ್ಧಿ ಕಾರ್ಯಗಳು ಮಾಡಿದ್ದು ನಾವು ಎಂದು ಕಾರ್ಯಕರ್ತರು ಹೇಳಬೇಕಾಗಿದೆ. ನಾನು ಸಹ ಈ ಹಿಂದೆ ಮಂಡಿಕ್ಕಿ ಬಟ್ಟಿ ಕಾರ್ಮಿಕರ ಜಿಲ್ಲಾಧ್ಯಕ್ಷನಾಗಿ, ಆಟೋ ರಿಕ್ಷಾ ಕಾರ್ಮಿಕರ ಜಿಲ್ಲಾಧ್ಯಕ್ಷನಾಗಿ ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಸದಾ ಕಾಲ ಕಾರ್ಮಿಕರ ಪರವಾಗಿ ನಿಲ್ಲುತ್ತೇನೆಂದು ಹೇಳಿದರು. 

ಸಭೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಹಿರಿಯ ಸದಸ್ಯರಾದ ಕೆ ಚಮನ್ ಸಾಬ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ದಾವಣಗೆರೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಯೂಬ್‍ಪೈಲ್ವಾನ್,  ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಎಸ್. ಬಸವಂತಪ್ಪ ಕಾಂಗ್ರೆಸ್ ಮುಖಂಡರುಗಳಾದ ಉಮೆಶ್ ಬಾಬು, ನಲ್ಕುಂದ ಹಾಲೇಶ್, ಡಾ. ಸುಜಾತ, ಶ್ರೀಕಾಂತ , 

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಕೆಪಿವೈಸಿಸಿ ಕಾರ್ಯದರ್ಶಿ ಸೈಯದ್ ಖಾಲಿದ್, ಮಾತನಾಡಿದರು. 

ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಹೆಚ್. ಸುಭಾನ್ ಸಾಬ್‍ರವರು ಸ್ವಾಗತಿಸಿದರು. ಸಭೆಯಲ್ಲಿ ಸಾಮಾಜಿಕ ಜಾಲತಾಣದ ಗೋವಿಂದ, ಲಿಯಾಖತ್ ಅಲಿ ಕೆ.ಎಂ. ಮಂಜುನಾಥ್, ಅಸೀಫ್ ಅಲಿ, ನವೀದ್, ಇಮ್ತಾಹಾಜ್ ಬೇಗ್, ಬಾಷಾ, ಪ್ರಕಾಶ್, ಅಬುಸಾಲಿಯಾ, ಶ್ರೀ ವಿದ್ಯಾ, ತಿಮ್ಮಣ್ಣ, ಇತರರು ಹಾಜರಿದ್ದರು. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು ಕೆಪಿಸಿಸಿ ಪದಾಧಕಾರಿಗಳು ಭಾಗವಹಿಸಿದ್ದರು. 

Post a Comment

0 Comments

Ad Code

Responsive Advertisement